ವಕ್ಫ್‌ ಆಸ್ತಿ ಎಂದು ಉಲ್ಲೇಖ ಮಾಡಿರುವುದರ ವಿರುದ್ಧ ಈಗ ಕೇರಳದಲ್ಲಿ ಚರ್ಚ್‌ಗಳಿಂದಲೂ ಹೋರಾಟ

KannadaprabhaNewsNetwork |  
Published : Nov 12, 2024, 12:48 AM ISTUpdated : Nov 12, 2024, 07:42 AM IST
ರಾಜೀವ್‌ ಚಂದ್ರಶೇಖರ್‌ | Kannada Prabha

ಸಾರಾಂಶ

ಕೇರಳದ ಎರ್ನಾಕುಲಂ ಜಿಲ್ಲೆಯ ಮುನಂಬಂ ಗ್ರಾಮವನ್ನು ಸಂಪೂರ್ಣವಾಗಿ ವಕ್ಫ್‌ ಆಸ್ತಿ ಎಂದು ಉಲ್ಲೇಖ ಮಾಡಿರುವುದರ ವಿರುದ್ಧ ಆರಂಭವಾಗಿರುವ ಪ್ರತಿಭಟನೆಗೆ ಇದೀಗ ಕೇರಳದ ಚರ್ಚ್‌ಗಳು ಕೂಡಾ ದೊಡ್ಡಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸಿ ಹೋರಾಟದ ಕಣಕ್ಕೆ ಧುಮುಕಿವೆ.

ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯ ಮುನಂಬಂ ಗ್ರಾಮವನ್ನು ಸಂಪೂರ್ಣವಾಗಿ ವಕ್ಫ್‌ ಆಸ್ತಿ ಎಂದು ಉಲ್ಲೇಖ ಮಾಡಿರುವುದರ ವಿರುದ್ಧ ಆರಂಭವಾಗಿರುವ ಪ್ರತಿಭಟನೆಗೆ ಇದೀಗ ಕೇರಳದ ಚರ್ಚ್‌ಗಳು ಕೂಡಾ ದೊಡ್ಡಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸಿ ಹೋರಾಟದ ಕಣಕ್ಕೆ ಧುಮುಕಿವೆ. ಇದರೊಂದಿಗೆ ಮನೆ, ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಮುನಂಬಂನ 600ಕ್ಕೂ ಹೆಚ್ಚು ಕುಟುಂಬಗಳ ಹೋರಾಟಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ.

ಈ ನಡುವೆ ಕೇರಳದ ವಕ್ಫ್‌ ಗದ್ದಲದ ಕುರಿತು ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಮತ್ತು ಕೇರಳ ಬಿಜೆಪಿ ನಾಯಕ ಶೋನ್‌ ಜಾರ್ಜ್‌ ಸೋಮವಾರ ಕೇಂದ್ರ ಕಾನೂನು ಖಾತೆ ಸಚಿವ ಕಿರಣ್‌ ರಿಜಿಜು ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಿದ್ದಾರೆ. ಇದಕ್ಕೆ ಸಚಿವರು ಕೂಡಾ ಪೂರಕವಾಗಿ ಸ್ಪಂದಿಸಿದ್ದು ಸಂತ್ರಸ್ತರಿಗೆ ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ.

1000 ಚರ್ಚ್‌ಗಳ ಬೆಂಬಲ:

ಮುನಂಬಂ ವಕ್ಫ್‌ ಆಸ್ತಿ ಗದ್ದಲದ ವಿರುದ್ಧ ಭಾನುವಾರ ಕೇರಳದ 1000ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಚರ್ಚ್‌ಗಳ ಅಧಿಕೃತ ಸಮುದಾಯ ಸಂಸ್ಥೆಯಾದ ಆಲ್‌ ಕೇರಳ ಕ್ಯಾಥಲಿಕ್‌ ಕಾಂಗ್ರೆಸ್‌ ಆಯೋಜಿಸಿದ್ದ ಈ ಸಭೆಯಲ್ಲಿ ವಿಶೇಷ ಪ್ರಾರ್ಥನೆ ಕೈಗೊಂಡು, ಗ್ರಾಮಸ್ಥರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.ಈ ವೇಳೆ ಮಾತನಾಡಿದ ಸೈರೋ ಮಲಬಾರ್‌ ಚರ್ಚ್‌ನ ಮುಖ್ಯಸ್ಥ ಬಿಷಪ್‌ ರಾಫೆಲ್ ತಟ್ಟಿಲ್, ‘ಇದು ಮಾನವೀಯ ಬಿಕ್ಕಟ್ಟಾಗಿದ್ದು, ಸಂವಿಧಾನದ ಪ್ರಕಾರ ಮಾನವೀಯ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಪರಿಹರಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯಪ್ರವೇಶ ಅಗತ್ಯ ಎಂದು ಪ್ರತಿಪಾದಿಸಿದರು. ಜೊತೆಗೆ ಮುನಂಬಂ ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿದರು.

ಸಿಎಂಗೆ ಮನವಿ:

ಈ ನಡುವೆ ವಕ್ಫ್‌ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ನೀಡುವಂತೆ ಸಿಎಂ ಪಿಣರಾಯಿ ವಿಜಯನ್‌ ಅವರನ್ನು ಸೋಮವಾರ ಕೊಚ್ಚಿಯಲ್ಲಿ ಭೇಟಿಯಾದ ಗ್ರಾಮಸ್ಥರು ಮನವಿ ಮಾಡಿದ್ದಾರೆ.

PREV

Recommended Stories

2026ರ ಫೆ.7 ರಿಂದ ಟಿ20 ವಿಶ್ವಕಪ್‌ ಆರಂಭ ?
ನೇಪಾಳದಲ್ಲಿ ಪೊಲೀಸರಿಂದಲೇ ಹಿಂಸೆ, ರೇ*: ಆರೋಪ