ಯುದ್ಧದಿಂದ ಸವಾಲಿನ ಪರಿಸ್ಥಿತಿ - ಟೀಂ ಇಂಡಿಯಾ ಆಗಿ ಕೆಲಸ ಮಾಡೋಣ : ಮೋದಿ ಪರಿಹಾರಗಳು

Published : Mar 28, 2026, 04:03 AM IST
PM Narendra Modi

ಸಾರಾಂಶ

‘ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ಉಂಟಾಗಿರುವ ಪರಿಸ್ಥಿತಿ ಸವಾಲಿನದ್ದಾಗಿದೆ. ಇದನ್ನು ನಿಭಾಯಿಸಲು ನಿರಂತರ ಮೇಲ್ವಿಚಾರಣೆ, ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇಂಧನ ಭದ್ರತೆ, ನಾಗರಿಕರ ಹಿತವೇ ನಮ್ಮ ಆದ್ಯತೆ ಆಗಿದೆ. 

  ನವದೆಹಲಿ :  ‘ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ಉಂಟಾಗಿರುವ ಪರಿಸ್ಥಿತಿ ಸವಾಲಿನದ್ದಾಗಿದೆ. ಇದನ್ನು ನಿಭಾಯಿಸಲು ನಿರಂತರ ಮೇಲ್ವಿಚಾರಣೆ, ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇಂಧನ ಭದ್ರತೆ, ನಾಗರಿಕರ ಹಿತವೇ ನಮ್ಮ ಆದ್ಯತೆ ಆಗಿದೆ. ‘ಟೀಮ್ ಇಂಡಿಯಾ’ ಆಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವುದರಿಂದ ರಾಷ್ಟ್ರವು ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿವಾರಿಸುತ್ತದೆ ಎಂಬ ವಿಶ್ವಾಸವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿನ ಸಮರ ಪರಿಸ್ಥಿತಿಯಿಂದಾಗಿ ಅನಿಲ ಹಾಗೂ ತೈಲ ಆಮದಿನ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಆಪತ್ಕಾಲದಲ್ಲಿನ ಸನ್ನದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವರ್ಚುವಲ್ ಸಭೆ ನಡೆಸಿದರು. ಈ ವೇಳೆ ಸಲಹೆ-ಸೂಚನೆಗಳನ್ನು ಆಲಿಸಿ ಬಳಿಕ ಬಿಕ್ಕಟ್ಟಿಗೆ ಹಲವು ಪರಿಹಾರ ಸೂಚಿಸಿದರು.

ಮೋದಿ ಪರಿಹಾರಗಳು:

‘ಇದೇ ರೀತಿಯ ಜಾಗತಿಕ ಅಡಚಣೆಗಳನ್ನು ನಿಭಾಯಿಸುವಲ್ಲಿ ಭಾರತಕ್ಕೆ ಪೂರ್ವ ಅನುಭವವಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯಗಳು ಟೀಮ್ ಇಂಡಿಯಾ ಆಗಿ ಕೆಲಸ ಮಾಡಿ ಪೂರೈಕೆ ಜಾಲ, ವ್ಯಾಪಾರ ಮತ್ತು ದೈನಂದಿನ ಜೀವನದ ಮೇಲಿನ ಪರಿಣಾಮವನ್ನು ತಗ್ಗಿಸಿದವು. ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅದೇ ಸಹಕಾರ ಮತ್ತು ಸಮನ್ವಯದ ಮನೋಭಾವವು ಭಾರತದ ದೊಡ್ಡ ಶಕ್ತಿಯಾಗಿ ಉಳಿದಿದೆ ಎಂದು ಅವರು ಒತ್ತಿ ಹೇಳಿದರು.

‘ಪರಿಸ್ಥಿತಿ ಇನ್ನೂ ಚಂಚಲವಾಗಿದೆ. ಹೀಗಾಗಿ ನಿರಂತರ ಮೇಲ್ವಿಚಾರಣೆ ಮತ್ತು ಹೊಂದಾಣಿಕೆಯ ಕಾರ್ಯತಂತ್ರಗಳು ಅಗತ್ಯವಾಗಿವೆ. ಮಾ.3ರಿಂದಲೇ ಅಂತರ-ಸಚಿವಾಲಯ ಗುಂಪು ಕಾರ್ಯನಿರ್ವಹಿಸುತ್ತಿದ್ದು, ದೈನಂದಿನ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಮತ್ತು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆರ್ಥಿಕ ಮತ್ತು ವ್ಯಾಪಾರ ಸ್ಥಿರತೆ ಕಾಪಾಡಿಕೊಳ್ಳುವುದು, ಇಂಧನ ಸುರಕ್ಷತೆಯನ್ನು ಖಚಿತಪಡಿಸುವುದು, ನಾಗರಿಕರ ಹಿತಾಸಕ್ತಿ ಕಾಪಾಡುವುದು ಮತ್ತು ಕೈಗಾರಿಕೆ ಮತ್ತು ಪೂರೈಕೆ ಸರಪಳಿಗಳನ್ನು ಬಲಪಡಿಸುವುದು ಸರ್ಕಾರದ ಆದ್ಯತೆಗಳಾಗಿವೆ’ ಎಂದರು.

ಅಕ್ರಮ ದಾಸ್ತಾನು ಮೇಲೆ ಕ್ರಮ ಜರುಗಿಸಿ:

ರಾಜ್ಯಗಳ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಿ, ‘ನಿರ್ಧಾರಗಳ ಪರಿಣಾಮಕಾರಿ ಅನುಷ್ಠಾನವು ರಾಜ್ಯ ಮಟ್ಟದಲ್ಲಿ ನಡೆಯುತ್ತದೆ. ಕೇಂದ್ರದೊಂದಿಗೆ ಸಂವಹನ ನಡೆಸಿ ಸಮನ್ವಯದಿಂದ ಕೆಲಸ ಮಾಡಬೇಕು. ಪೂರೈಕೆ ಜಾಲದ ಸುಗಮ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಬೇಕು. ಅಕ್ರಮ ದಾಸ್ತಾನು ಮತ್ತು ಲಾಭಕೋರತನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಬೇಕು ಎಂದೂ ಪ್ರಧಾನಿ ಕಿವಿಮಾತು ಹೇಳಿದರು.

ಗೊಬ್ಬರ ಕೊರತೆ ಆಗಬಾರದು:

‘ಬೇಸಿಗೆ ಕಳೆಯುತ್ತಿದ್ದಂತೆಯೇ ಇನ್ನೆರಡು ತಿಂಗಳಲ್ಲಿ ಮುಂಗಾರು ಋತು ಆರಂಭವಾಗಲಿದೆ. ಆಗ ರೈತರು ತೊಂದರೆಗಳನ್ನು ಎದುರಿಸದಂತೆ ರಸಗೊಬ್ಬರ ಸಂಗ್ರಹಣೆ ಮತ್ತು ವಿತರಣೆ ನಡೆಸಬೇಕು. ಈಗಿನಿಂದಲೇ ಈ ಬಗ್ಗೆ ಮೇಲ್ವಿಚಾರಣೆ ಮಾಡಬೇಕು’ ಎಂದು ಪ್ರಧಾನಿ ಸಲಹೆ ನೀಡಿದರು.

ವದಂತಿಗಳ ಮೇಲೆ ಕ್ರಮ ಜರುಗಿಸಿ:

ತಪ್ಪು ಮಾಹಿತಿ ಮತ್ತು ವದಂತಿಗಳ ಹರಡುವಿಕೆಯ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ, ‘ಭೀತಿಯನ್ನು ತಡೆಗಟ್ಟಲು ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಸಕಾಲಿಕವಾಗಿ ಪ್ರಸಾರ ಮಾಡುವುದು ಅತ್ಯಗತ್ಯ. ಈ ಮೂಲಕ ನಾಗರಿಕರ ಭೀತಿಯನ್ನು ನಿವಾರಿಸಬೇಕು. ಆನ್‌ಲೈನ್ ವಂಚನೆಗಳು ಮತ್ತು ನಕಲಿ ಏಜೆಂಟ್‌ಗಳ ವಿರುದ್ಧ ಜಾಗರೂಕರಾಗಿರಬೇಕು. ಅಗತ್ಯ ವಸ್ತುಗಳ ಲಭ್ಯತೆಯ ಬಗ್ಗೆ ಭರವಸೆ ನೀಡುವುದರಿಂದ ನಾಗರಿಕರಲ್ಲಿ ಅನಗತ್ಯ ಭೀತಿಯನ್ನು ತಡೆಯಲು ಸಹಾಯವಾಗುತ್ತದೆ’ ಎಂದರು.

ಅನಿವಾಸಿಗಳ ರಕ್ಷಿಸಿ:

‘ಮಧ್ಯಪ್ರಾಚ್ಯ ಹಾಗೂ ಪಶ್ಚಿಮ ಏಷ್ಯಾದಲ್ಲಿ ಭಾರೀ ಸಂಖ್ಯೆಯ ಭಾರತೀಯರು ಇದ್ದಾರೆ. ಹೀಗಾಗಿ ಅಲ್ಲಿಯವರ ನೆರವಿಗಾಗಿ ರಾಜ್ಯಗಳು ಸಹಾಯವಾಣಿಗಳನ್ನು ಸಕ್ರಿಯಗೊಳಿಸಬೇಕು, ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ಪೀಡಿತ ಕುಟುಂಬಗಳಿಗೆ ಸಹಾಯ ಮಾಡಲು ಮತ್ತು ಮಾಹಿತಿ ವಿನಿಮಯಕ್ಕೆ ಜಿಲ್ಲಾಡಳಿತ ಆದ್ಯತೆ ನೀಡಬೇಕು’ ಎಂದು ಮೋದಿ ಸೂಚಿಸಿದರು.

ಎಲ್‌ಪಿಜಿಗೆ ಪರ್ಯಾಯ ಉತ್ತೇಜಿಸಿ:

ಎಲ್‌ಪಿಜಿ ಹಾಹಾಕಾರದ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ಜೈವಿಕ ಇಂಧನ, ಸೌರಶಕ್ತಿ, ಗೋಬರ್ಧನ್ ಉಪಕ್ರಮ ಮತ್ತು ಪೈಪ್ ಮೂಲಕ ನೈಸರ್ಗಿಕ ಅನಿಲ ಸಂಪರ್ಕಗಳನ್ನು ವಿಸ್ತರಿಸುವಂತಹ ಪರ್ಯಾಯ ಇಂಧನ ಮೂಲಗಳನ್ನು ಉತ್ತೇಜಿಸಬೇಕು’ ಎಂದು ರಾಜ್ಯಗಳನ್ನು ಒತ್ತಾಯಿಸಿದರು.

ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿಗಳಾದ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು, ಛತ್ತೀಸ್‌ಗಢದ ವಿಷ್ಣು ದೇವ್ ಸಾಯಿ, ತೆಲಂಗಾಣದ ರೇವಂತ್ ರೆಡ್ಡಿ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಕಾಶ್ಮೀರದ ಒಮರ್ ಅಬ್ದುಲ್ಲಾ, ಪಂಜಾಬ್‌ನ ಭಗವಂತ ಮಾನ್, ಮಧ್ಯಪ್ರದೇಶದ ಮೋಹನ್ ಯಾದವ್, ಜಾರ್ಖಂಡ್‌ನ ಹೇಮಂತ್ ಸಿಂಗ್ ಸೊರೆನ್, ಗುಜರಾತ್‌ನ ಭೂಪೇಂದ್ರ ಪಟೇಲ್ ಮತ್ತು ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಸೇರಿ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಸಭೆಗೆ ಹಾಜರಾಗಿದ್ದರು.

ಚುನಾವಣಾ ರಾಜ್ಯಗಳಿಗೆ ಬೇರೆ ಸಭೆ:

ಮಾದರಿ ನೀತಿ ಸಂಹಿತೆಯಿಂದಾಗಿ ಚುನಾವಣೆ ನಡೆಯುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಲಿಲ್ಲ. ಈ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗಾಗಿ ಪ್ರತ್ಯೇಕ ಸಭೆ ನಡೆಯಲಿದ್ದು, ಇದನ್ನು ಸಂಪುಟ ಸಚಿವಾಲಯದ ಮೂಲಕ ನಡೆಸಲಾಗುತ್ತದೆ.

ಮೋದಿ ಸೂಚನೆಗಳು

- ಮಧ್ಯಪ್ರಾಚ್ಯ ಯುದ್ಧದಿಂದ ಪರಿಸ್ಥಿತಿ ಚಂಚಲ. ನಿರಂತರ ಮೇಲ್ವಿಚಾರಣೆ ಅಗತ್ಯ

- ಅಕ್ರಮ ದಾಸ್ತಾನು ವಿರುದ್ಧ ಕ್ರಮ ಕೈಗೊಳ್ಳಿ. ಲಾಭಕೋರರನ್ನು ಮಟ್ಟ ಹಾಕಿ

- ಇನ್ನೆರಡು ತಿಂಗಳಲ್ಲಿ ಮುಂಗಾರು ಆರಂಭ. ರೈತರಿಗೆ ತೊಂದರೆಯಾಗಬಾರದು

- ರಸಗೊಬ್ಬರ ಸಂಗ್ರಹಣೆ, ವಿತರಣೆ ಬಗ್ಗೆ ಈಗಿನಿಂದಲೇ ಮೇಲ್ವಿಚಾರಣೆ ಆಗಲಿ

- ನಾಗರಿಕರ ಭೀತಿ ನಿವಾರಿಸಿ. ತಪ್ಪು ಮಾಹಿತಿ, ವದಂತಿ ಹರಡುವಿಕೆ ತಡೆಯಿರಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಂದು ರೋಮಾಂಚನದನಡೆ: ಅಮೆರಿಕದ ಸಸ್ಪೆನ್ಸ್‌- ಇರಾನ್‌ ಯುದ್ಧ ಮಧ್ಯೆಯೇ ಶ್ವೇತಭವನ ಪೋಸ್ಟ್‌- ಏನದು ಘೋಷಣೆ ಎಂದು ವಿಶ್ವಾದ್ಯಂತ ಕುತೂಹಲ
ಕೋವಿಡ್‌ ರೀತಿ ಲಾಕ್ಡೌನ್‌ಜಾರಿ ಇಲ್ಲವೇಇಲ್ಲ: ಕೇಂದ್ರ- ಇಂಧನ ಉಳಿಸಲು ಲಾಕ್‌ಡೌನ್‌ ಸುಳ್ಳು ಸುದ್ದಿ- ಇಂಥ ವದಂತಿ ನಂಬಬೇಡಿ: ಸರ್ಕಾರ ಮನವಿ