ವಯನಾಡಿನ ಮನ ಕಲಕುವ ಕತೆ : ಮಗಳ ಬದಲು ತಂದೆಗೆ ಸಿಕ್ಕಿದ್ದುಒಂಟಿ ಕೈ; ಅದಕ್ಕೇ ಅಂತ್ಯಕ್ರಿಯೆ!

KannadaprabhaNewsNetwork |  
Published : Aug 05, 2024, 12:32 AM ISTUpdated : Aug 05, 2024, 05:28 AM IST
ವಯನಾಡ್‌ | Kannada Prabha

ಸಾರಾಂಶ

ದೂರದ ಚಲಿಯಾರ್‌ ನದಿಯಲ್ಲಿ ಮಹಿಳೆಯ ಒಂಟಿ ಕೈಯೊಂದು ಸಿಕ್ಕಿತು. ಅದರ ಬೆರಳಲ್ಲಿ ಒಂದು ಉಂಗುರ ಇತ್ತು. ಅದನ್ನು ನೋಡಿದ ತಂದೆ, ಆಕೆ ನನ್ನ ಮಗಳು ಎಂದು ಗಳಗಳನೆ ಅತ್ತುಬಿಟ್ಟ. ಪುತ್ರಿಯ ದೇಹ ಸಿಗದ ಕಾರಣ ಒಂಟಿ ಕೈಯನ್ನೇ ಚಿತೆಯ ಮೇಲೆ ಇಟ್ಟು ರೋದಿಸುತ್ತಾ ಅಂತ್ಯಕ್ರಿಯೆ ಮುಗಿಸಿದ!

ವಯನಾಡ್‌: ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತ ವೇಳೆ ಮುದ್ದಿನ ಮಗಳು, ಅಳಿಯ, ಮೊಮ್ಮಗ, ಪತ್ನಿ ಎಲ್ಲರೂ ಕಾಣೆಯಾಗಿಬಿಟ್ಟರು. ಅವರಿಗಾಗಿ ತಂದೆ ಹುಡುಕಾಡದ ಸ್ಥಳವಿಲ್ಲ. ಕೊನೆಗೆ ದೂರದ ಚಲಿಯಾರ್‌ ನದಿಯಲ್ಲಿ ಮಹಿಳೆಯ ಒಂಟಿ ಕೈಯೊಂದು ಸಿಕ್ಕಿತು. ಅದರ ಬೆರಳಲ್ಲಿ ಒಂದು ಉಂಗುರ ಇತ್ತು. ಅದನ್ನು ನೋಡಿದ ತಂದೆ, ಆಕೆ ನನ್ನ ಮಗಳು ಎಂದು ಗಳಗಳನೆ ಅತ್ತುಬಿಟ್ಟ. ಪುತ್ರಿಯ ದೇಹ ಸಿಗದ ಕಾರಣ ಒಂಟಿ ಕೈಯನ್ನೇ ಚಿತೆಯ ಮೇಲೆ ಇಟ್ಟು ರೋದಿಸುತ್ತಾ ಅಂತ್ಯಕ್ರಿಯೆ ಮುಗಿಸಿದ!

ಭೀಕರ ಭೂಕುಸಿತ ದುರಂತಕ್ಕೆ ಸಾಕ್ಷಿಯಾದ ಕೇರಳದ ವಯನಾಡ್‌ನಲ್ಲಿ ಕಂಡುಬಂದ ಮತ್ತೊಂದು ಮನಕಲುಕುವ ಘಟನೆ ಇದು.

ಈ ನತದೃಷ್ಟ ತಂದೆಯ ಹೆಸರು ರಾಮಸ್ವಾಮಿ. ಆತನ ಪುತ್ರಿ ಜೀಶಾ. ತಂದೆಯ ಕೈ ಹಿಡಿದೇ ಬೆಳೆದವಳು. ರಾಮಸ್ವಾಮಿ ಅವರು ಮುರುಗನ್‌ಗೆ ಪುತ್ರಿಯನ್ನು ಕೈ ಹಿಡಿದು ಧಾರೆ ಎರೆದುಕೊಟ್ಟಿದ್ದರು. ಆದರೆ ಭೂಕುಸಿತದಿಂದಾಗಿ ಮಗಳು, ಅಳಿಯ, ಮೊಮ್ಮಗ ಅಕ್ಷಯ್‌ ಹಾಗೂ ರಾಮಸ್ವಾಮಿ ಪತ್ನಿ ತಂಕಮ್ಮ ಎಲ್ಲರೂ ನಾಪತ್ತೆಯಾಗಿಬಿಟ್ಟರು. ಭೂಕುಸಿತ ವೇಳೆ ಅವರೆಲ್ಲಾ ಕೊಚ್ಚಿ ಹೋಗಿದ್ದರು. ರಾಮಸ್ವಾಮಿ ಹೇಗೋ ಬಚಾವಾಗಿದ್ದರು. ಈ ಪೈಕಿ ಅಕ್ಷಯ್‌ ಶವ ಮಾತ್ರ ಸಿಕ್ಕಿತ್ತು. ಉಳಿದ ಯಾರೂ ಸಿಕ್ಕಿರಲಿಲ್ಲ.

ರಕ್ಷಣಾ ತಂಡಗಳಿಗೆ ಚಲಿಯಾರ್‌ ನದಿಯಲ್ಲಿ ಮಹಿಳೆಯ ಒಂಟಿ ಕೈ ಸಿಕ್ಕಿತ್ತು. ಅದರ ಬೆರಳಲ್ಲಿ ಉಂಗುರ ಇತ್ತು. ‘ಮುರುಗನ್‌’ ಎಂಬ ಹೆಸರು ಉಂಗುರದಲ್ಲಿತ್ತು. ಅದನ್ನು ನೋಡಿ ರಾಮಸ್ವಾಮಿ ದುಃಖ ತಡೆಯಲು ಆಗಲಿಲ್ಲ. ‘ನನ್ನ ಮಗಳು, ನನ್ನ ಮಗಳು..’ ಎಂದು ಕಣ್ಣೀರಿಟ್ಟ.

ಪುತ್ರಿಯ ಅಂತ್ಯಕ್ರಿಯೆ ಮಾಡಲು ಸಣ್ಣ ಚಿತೆ ತಯಾರಿಸಿ, ಕಣ್ಣೀರು ಸುರಿಸುತ್ತಾ, ಮುಖ ಚಚ್ಚಿಕೊಳ್ಳುತ್ತಾ ಕೈಯಾರೆ ಬೆಳೆಸಿದ ಮಗಳ ಕೈಗೆ ಬೆಂಕಿ ಇಟ್ಟ. ನೆರೆದಿದ್ದವರು ಕಣ್ಣಾಲಿಗಳಲ್ಲೂ ನೀರು ಹರಿಯಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ