ಭಾರತ ಮತ್ತು ಭಾರತದ ಅಘೋಷಿತ ರಾಜಾಶ್ರಯದಲ್ಲಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಟ್ಟರ್‌ ಇಸ್ಲಾಮಿಕ್‌ ಯುವ ನಾಯಕನೊಬ್ಬನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.  

 ಢಾಕಾ: ಭಾರತ ಮತ್ತು ಭಾರತದ ಅಘೋಷಿತ ರಾಜಾಶ್ರಯದಲ್ಲಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಟ್ಟರ್‌ ಇಸ್ಲಾಮಿಕ್‌ ಯುವ ನಾಯಕನೊಬ್ಬನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದು ಬಾಂಗ್ಲಾದಲ್ಲಿ ಮತ್ತೆ ವ್ಯಾಪಕ ಹಿಂಸಾಚಾರ ಭುಗಿಲೇಳುವಂತೆ ಮಾಡಿದ್ದು, ಭಾರತ ಹಾಗೂ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗಿದೆ. ಹಿಂದು ಯುವಕನೊಬ್ಬನನ್ನು ಬಡಿದು ಕೊಂದು ದೇಹಕ್ಕೆ ಬೆಂಕಿ ಹಚ್ಚಲಾಗಿದೆ. ಭಾರತ ರಾಯಭಾರಿ ಮನೆಯ ಮೇಲೆ ಕಲ್ಲೆಸೆಯಲಾಗಿದೆ. ಭಾರತ ಹಾಗೂ ಹಿಂದು ವಿರೋಧಿ ಘೋಷಣೆಗಳು ಮಾರ್ದನಿಸಿವೆ.

ಬಾಂಗ್ಲಾದೇಶಿ ವಿದ್ಯಾರ್ಥಿ ನಾಯಕ ಉಸ್ಮಾನ್‌ ಹದಿ (32) ಕಳೆದ ವರ್ಷ ಶೇಖ್‌ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ. ತನ್ನ ಇಂಕ್ವಿಲಾಬ್‌ ಮಂಚ್‌ ಸಂಘಟನೆ ಮೂಲಕ ವ್ಯಾಪಕ ಪ್ರತಿಭಟನೆ ನಡೆಸಿದ್ದ. ಇತ್ತೀಚೆಗೆ ದುಷ್ಕರ್ಮಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದರು. 6 ದಿನಗಳ ಬಳಿಕ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಸಿಂಗಾಪುರ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ.

ಇದರ ಬೆನ್ನಲ್ಲೇ ಮತ್ತೊಮ್ಮೆ ಸಂಘರ್ಷ ಭುಗಿಲೆದ್ದಿದೆ. ಹದಿ ಬೆಂಬಲಿತ ಪ್ರತಿಭಟನಾಕಾರರು ದೇಶಾದ್ಯಂತ ದಂಗೆ ನಡೆಸುತ್ತಿದ್ದು, ಹಿಂದುಗಳ ಮೇಲೆ ದೌರ್ಜನ್ಯ, ಶೇಖ್‌ ಹಸೀನಾ ಮನೆ ಮೇಲೆ ದಾಳಿ, ಪತ್ರಿಕಾ ಕಚೇರಿಗಳ ಧ್ವಂಸ ಸೇರಿ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಶಾಂತಿಗೆ ಬಾಂಗ್ಲಾದ ಯೂನಸ್‌ ಸರ್ಕಾರ ಮನವಿ ಮಾಡಿದೆ.

ಹಿಂದೂ ವ್ಯಕ್ತಿ ಕೊಂದು, ಬೆಂಕಿ ಹೆಚ್ಚಿ ವಿಕೃತಿ:

ಬಾಂಗ್ಲಾದ ಮೈಮೆನ್ಸಿಂಗ್ ಜಿಲ್ಲೆಯ ದುಬಾಲಿಯಾ ಪ್ಯಾರಾದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳ ಗುಂಪು ಹಿಂದೂ ಯುವಕ ದೀಪು ಚಂದ್ರ ದಾಸ್‌ (25) ಎಂಬಾತನನ್ನು ಥಳಿಸಿ ಕೊಂದಿದೆ. ಬಳಿಕ ಆತನ ದೇಹಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದೆ.

‘ಪ್ರವಾದಿ ಮೊಹಮ್ಮದ್‌ ಪೈಗಂಬರರನ್ನು ನಿಂದಿಸಿದ ಆರೋಪದ ಮೇಲೆ ದೀಪು ಚಂದ್ರ ದಾಸ್ ಎಂಬಾತನ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ನಂತರ ಬಡಿದು ಹತ್ಯೆ ಮಾಡಿ, ಹೆಣವನ್ನು ಮರಕ್ಕೆ ನೇತು ಹಾಕಿ ಬೆಂಕಿ ಹಚ್ಚಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಮೆನ್ಸಿಂಗ್ ವೈದ್ಯಕೀಯ ಆಸ್ಪತ್ರೆಗೆ ಕಳಿಸಲಾಗಿದೆ. 

ಭಾರತೀಯ ರಾಯಭಾರಿ ಮನೆ ಮೇಲೆ ಕಲ್ಲೆಸೆತ: 

ಚಟ್ರೋಗ್ರಾಮದಲ್ಲಿರುವ ಭಾರತೀಯ ಸಹಾಯಕ ಹೈ ಕಮಿಷನರ್ ಡಾ. ರಾಜೀವ್ ರಂಜನ್ ಅವರ ನಿವಾಸ ಮತ್ತು ಕಚೇರಿಯ ಮೇಲೆ ಪ್ರತಿಭಟನಾಕಾರರು ಕಲ್ಲೆಸೆತ ನಡೆಸಿದ್ದಾರೆ. ಗುರುವಾರ ರಾತ್ರಿ 1:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಯಾವುದೇ ಹಾನಿ ಆಗಿಲ್ಲ ಎಂದು ವರದಿಯಾಗಿದೆ. ಢಾಕಾದಲ್ಲಿ ಭಾರತೀಯ ಡೆಪ್ಯುಟಿ ಹೈ ಕಮಿಷನರ್ ನಿವಾಸದ ಬಳಿಯೂ ಪ್ರತಿಭಟನೆ ನಡೆದಿದ್ದು, ಪೊಲೀಸರು ಅಶ್ರುವಾಯು ಬಳಸಿ ಗುಂಪನ್ನು ಚದುರಿಸಿದ್ದಾರೆ. ರಾಜಶಾಹಿ ಮತ್ತು ಖುಲ್ನಾದಲ್ಲೂ ಭಾರತೀಯ ಕಚೇರಿಗಳ ಕಡೆಗೆ ಮೆರವಣಿಗೆ ಪ್ರಯತ್ನಗಳು ನಡೆದಿವೆ.

ಮುಜಿಬುರ್‌ ರೆಹಮಾನ್ ಮನೆ ಧ್ವಂಸ:

ಬಾಂಗ್ಲಾದೇಶದ ರಾಷ್ಟ್ರಪಿತ ಮತ್ತು ಮೊದಲ ಪ್ರಧಾನಿ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಮನೆ ಮೇಲೆ ಆಕ್ರೋಶಿತರ ಗುಂಪು ದಾಳಿ ನಡೆಸಿದೆ. ಧನಮೊಂಡಿ 32ರಲ್ಲಿರುವ ರೆಹಮಾನ್‌ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಲಾಗಿತ್ತು. ಕಳೆದ ವರ್ಷ ಮತ್ತು ಈ ವರ್ಷದ ಆಗಸ್ಟ್‌ನಲ್ಲಿ ನಡೆದ ದಾಳಿ ವೇಳೆ ಮನೆ ಭಾಗಶಃ ಧ್ವಂಸವಾಗಿತ್ತು. ಇದೀಗ ಅಳಿದುಳಿದ ಭಾಗವನ್ನೂ ಬುಲ್ಡೋಜರ್‌ ಬಳಸಿ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.

ಹಸೀನಾ ಕಚೇರಿ ಮೇಲೆ ದಾಳಿ: 

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ, ಮುಜಿಬುರ್‌ ರೆಹಮಾನ್‌ ಪುತ್ರಿ ಶೇಖ್ ಹಸೀನಾ ಅವರ ಪ್ರತಿಕೃತಿಗಳನ್ನು ಸುಟ್ಟು, ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಹಸೀನಾರ ಅವಾಮಿ ಲೀಗ್‌ ಪಕ್ಷದ ಕಚೇರಿಯನ್ನು ನಾಶಪಡಿಸಿದ್ದಾರೆ. ಈ ವೇಳೆ ಭಾರತವಿರೋಧಿ ಘೋಷಣೆಗಳು ಕೇಳಿಬಂದಿವೆ.

ಮಾಧ್ಯಮ ಕಚೇರಿಗಳಿಗೆ ಬೆಂಕಿ:

ಬಾಂಗ್ಲಾದ ಪ್ರಮುಖ ದಿನಪತ್ರಿಕೆಗಳಾದ ಪ್ರೋಥೋಮ್ ಅಲೊ ಮತ್ತು ಡೇಲಿ ಸ್ಟಾರ್‌ ಕಚೇರಿಗಳಿಗೆ ಪ್ರತಿಭಟನಾಕಾರರು ಗುರುವಾರ ತಡರಾತ್ರಿ 1.40ರ ಸುಮಾರಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಕಚೇರಿ ತುಂಬಾ ಹೊಗೆ ಆವರಿಸಿಕೊಂಡು, ಪತ್ರಕರ್ತರು ಸಾವು-ಬದುಕಿನ ನಡುವೆ ಹೋರಾಡುವಂತಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ 27 ಪತ್ರಕರ್ತರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಪತ್ರಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಕಟಣೆಯನ್ನು ಸ್ಥಗಿತಗೊಳಿಸಬೇಕಾಯಿತು’ ಎಂದು ಡೇಲಿ ಸ್ಟಾರ್‌ನ ಸಲಹಾ ಸಂಪಾದಕ ಕಮಲ್ ಅಹ್ಮದ್‌ ಬೇಸರ ವ್ಯಕ್ತಪಡಿಸಿದ್ದಾರೆ. ‘ಇದು ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ’ ಎಂದು ಪ್ರೋಥೋಮ್ ಅಲೋ ಕಾರ್ಯನಿರ್ವಾಹಕ ಸಂಪಾದಕ ಸಜ್ಜಾದ್ ಷರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಅಂತಾರಾಷ್ಟ್ರೀಯ ಕಳವಳವನ್ನು ಉಂಟುಮಾಡಿದೆ. ಬಾಂಗ್ಲಾದೇಶದ ಆಡಳಿತವು ಪತ್ರಕರ್ತರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಪತ್ರಕರ್ತರ ರಕ್ಷಣಾ ಸಮಿತಿ ಅಧಿಕಾರಿಗಳನ್ನು ಒತ್ತಾಯಿಸಿದೆ.

ಧಗಧಗ ಏಕೆ?

- ಶೇಖ್‌ ಹಸೀನಾ ಸರ್ಕಾರದ ಪತನಕ್ಕೆ ಮುಂಚೂಣಿಯಲ್ಲಿ ನಿಂತು ಹೊರಡಿದ್ದ ಉಸ್ಮಾನ್‌ ಹದಿ

- ಇತ್ತೀಚೆಗೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ. 6 ದಿನಗಳ ಚಿಕಿತ್ಸೆ ಫಲಿಸದೆ ಆತ ಗುರುವಾರ ಸಾವು

- ಇದರ ಬೆನ್ನಲ್ಲೇ ಬಾಂಗ್ಲಾದಲ್ಲಿ ಆಕ್ರೋಶ. ಹಿಂದುಗಳು, ಭಾರತವನ್ನೇ ಗುರಿಯಾಗಿಸಿಕೊಂಡು ದಾಳಿ

- ದೀಪು ಚಂದ್ರದಾಸ್‌ ಯುವಕನನ್ನು ಬಡಿದು ಕೊಂದು ಮರಕ್ಕೆ ಕಟ್ಟಿ ಹಾಕಿ ದಹಿಸಿದ ಮತಾಂಧರು

- ಭಾರತೀಯ ರಾಯಭಾರಿಗಳ ಕಚೇರಿಗಳ ಮೇಲೆ ಕಲ್ಲೆಸೆತ. ಕಚೇರಿಗಳ ಮುಂದೆ ಭಾರಿ ಮೆರವಣಿಗೆ