ಸುಧಾ ಮೂರ್ತಿಯವರು ಆನ್ಲೈನ್‌ ಲಿಂಕ್‌ ಮೂಲಕ ಜನರಿಗೆ ಹೂಡಿಕೆ ಮಾಡುವಂತೆ ಕೋರುವ ಎಐ ರಚಿತ ನಕಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದು ಡೀಪ್‌ಫೇಕ್‌ ವಿಡಿಯೋವಾಗಿದ್ದು, ಯಾರೂ ನಂಬಿ ಮೋಸಹೋಗದಂತೆ ಸುಧಾ ಮೂರ್ತಿ ಜನರಲ್ಲಿ ವಿನಂತಿ ಮಾಡಿದ್ದಾರೆ.

ನವದೆಹಲಿ: ರಾಜ್ಯಸಭಾ ಸಂಸದೆ ಹಾಗೂ ಇನ್ಫೋಸಿಸ್‌ ಅಧ್ಯಕ್ಷೆ ಸುಧಾ ಮೂರ್ತಿಯವರು ಆನ್ಲೈನ್‌ ಲಿಂಕ್‌ ಮೂಲಕ ಜನರಿಗೆ ಹೂಡಿಕೆ ಮಾಡುವಂತೆ ಕೋರುವ ಎಐ ರಚಿತ ನಕಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದು ಡೀಪ್‌ಫೇಕ್‌ ವಿಡಿಯೋವಾಗಿದ್ದು, ಯಾರೂ ನಂಬಿ ಮೋಸಹೋಗದಂತೆ ಸುಧಾ ಮೂರ್ತಿ ಜನರಲ್ಲಿ ವಿನಂತಿ ಮಾಡಿದ್ದಾರೆ.

ಲಿಂಕ್‌ ತೆರೆದರೆ, ನಕಲಿ ವೆಬ್‌ಸೈಟ್‌ ತಾಣ

ನಕಲಿ ವಿಡಿಯೋದಲ್ಲಿ ಸುಧಾ ಮೂರ್ತಿಯವರು, ‘ಈಗಾಗಲೇ ಸಾಕಷ್ಟು ಹೂಡಿಕೆದಾರರು ನಮ್ಮ ಜೊತೆ ಸೇರಿಕೊಂಡು ತಿಂಗಳಿಗೆ 10 ಲಕ್ಷ ರು. ಗಳಿಸುತ್ತಿದ್ದಾರೆ. ದುರದೃಷ್ಟವಶಾತ್‌, ನೋಂದಣಿಯನ್ನು ನಿಲ್ಲಿಸುವಂತೆ ನಮಗೆ ಒತ್ತಡ ಹೇರಲಾಗಿದೆ. ಈ ದಿನದ ಅಂತ್ಯದವರೆಗೆ, ವಿಡಿಯೋದ ಕೆಳಗೆ ನೀಡಿರುವ ಲಿಂಕ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಈಗಲೂ ನಿಮಗೆ ಹೂಡಿಕೆ ಮಾಡಲು ಸಾಧ್ಯವಿದೆ’ ಎಂದು ಹೇಳುವುದು ಕಂಡುಬರುತ್ತದೆ. ಲಿಂಕ್‌ ತೆರೆದರೆ, ನಕಲಿ ವೆಬ್‌ಸೈಟ್‌ ತಾಣ ತೆರೆದುಕೊಳ್ಳುತ್ತದೆ. 

ನಂಬಿ ಮೋಸ ಹೋಗದಿರಿ:

ಇದು ನಕಲಿ ವಿಡಿಯೋ ಎಂದು ಸ್ಪಷ್ಟನೆ ನೀಡಿರುವ ಸುಧಾಮೂರ್ತಿ, ‘ನಾನು ಎಲ್ಲಿಯೂ, ಯಾವತ್ತೂ ಹೂಡಿಕೆ ಬಗ್ಗೆ ಮಾತನಾಡುವುದಿಲ್ಲ. ನೀವು ನನ್ನ ಮುಖವನ್ನು ನೋಡಿದರೆ ಅಥವಾ ಹೂಡಿಕೆಗಳನ್ನು ಉತ್ತೇಜಿಸುವ ನನ್ನ ಧ್ವನಿಯನ್ನು ಕೇಳಿದರೆ, ಅದನ್ನು ನಂಬಬೇಡಿ’ ಎಂದು ಜನರಲ್ಲಿ ವಿನಂತಿಸಿದ್ದಾರೆ. ಸುಧಾ ಮೂರ್ತಿಯವರ ಡೀಪ್‌ಫೇಕ್ ವಿಡಿಯೋ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಇಂಥದ್ದೇ ವಿಡಿಯೋ ವೈರಲ್ ಆಗಿತ್ತು. ಪುಣೆಯ ವ್ಯಕ್ತಿಯೊಬ್ಬರು 43 ಲಕ್ಷ ರು. ಗಳನ್ನು ಕಳೆದುಕೊಂಡಿದ್ದರು.