ನಾರಾಯಣ ಮೂರ್ತಿ ವಾರಕ್ಕೆ 70 ತಾಸು ದುಡಿಮೆ ಹೇಳಿಕೆ : ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಸಮರ್ಥನೆ

| N/A | Published : Mar 23 2025, 01:35 AM IST / Updated: Mar 23 2025, 05:12 AM IST

ಸಾರಾಂಶ

ವಾರಕ್ಕೆ 70 ತಾಸು ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿ ವ್ಯಾಪಕ ಚರ್ಚೆ ಹುಟ್ಟುಹಾಕಿದ್ದ ಇನ್ಫೋಸಿಸ್‌ ಸಹಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿಯವರ ಹೇಳಿಕೆಯನ್ನು ಅವರ ಪತ್ನಿಯೂ ಆಗಿರುವ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಬೆಂಬಲಿಸಿದ್ದಾರೆ. 

ನವದೆಹಲಿ: ವಾರಕ್ಕೆ 70 ತಾಸು ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿ ವ್ಯಾಪಕ ಚರ್ಚೆ ಹುಟ್ಟುಹಾಕಿದ್ದ ಇನ್ಫೋಸಿಸ್‌ ಸಹಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿಯವರ ಹೇಳಿಕೆಯನ್ನು ಅವರ ಪತ್ನಿಯೂ ಆಗಿರುವ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಬೆಂಬಲಿಸಿದ್ದಾರೆ. ‘ನನ್ನ ಪತಿ ವಾರಕ್ಕೆ 70ರಿಂದ 90 ತಾಸು ದುಡಿದರು. ಅದಕ್ಕೆಂದೇ ಇನ್ಫಿ ದೊಡ್ಡ ಕಂಪನಿ ಆಯಯಿತು’ ಎಂದಿದ್ದಾರೆ.

ಎನ್‌ಡಿಟೀವಿಗೆ ಸಂದರ್ಶನ ನೀಡಿದ ಸುಧಾ, ‘ಯಾರಾದರೂ ಉತ್ಸಾಹದಿಂದ ಹಾಗೂ ಗಂಭೀರವಾಗಿ ಯಾವುದಾದರೂ ಕೆಲಸ ಮಾಡಬೇಕಿದ್ದರೆ ಅದಕ್ಕೆ ಸಮಯದ ಮಿತಿ ಅಡ್ಡಿಯಾಗುವುದಿಲ್ಲ. ಇನ್ಫೋಸಿಸ್‌ ಕಂಪನಿಯನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಲು ಯಾವ ಮಂತ್ರದಂಡವೂ ಇಲ್ಲ. ಸಾಕಷ್ಟು ಹಣ ಇಲ್ಲದಿದ್ದರು ನನ್ನ ಪತಿ ಹಾಗೂ ಸಹೋದ್ಯೋಗಿಗಳು ವಾರಕ್ಕೆ 70 ತಾಸುಗಟ್ಟಲೆ ದುಡಿಯುತ್ತಿದ್ದರು. ಇದರಿಂದ ಇನ್ಫೋಸಿಸ್‌ ದೊಡ್ಡ ಕಂಪನಿಯಾಗಲು ಸಾಧ್ಯವಾಯಿತು. ಮೂರ್ತಿಯವರು 90 ತಾಸು ದುಡಿದದ್ದೂ ಇದೆ’ ಎಂದರು.

ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ, ಎಲ್‌ ಆ್ಯಂಡ್‌ ಟಿ ಮುಖ್ಯಸ್ಥ ಸುಬ್ರಹ್ಮಣ್ಣನ್‌ ವಾರಕ್ಕೆ 80 ಗಂಟೆ ಹಾಗೂ ನೀತಿ ಆಯೋಗದ ಮಾಜಿ ಮುಖ್ಯಸ್ಥ ಅಮಿತಾಭ್‌ ಕಾಂತ್‌, ‘ವಾರಕ್ಕೆ 90 ಗಂಟೆ ಕೆಲಸ ಮಾಡಿದರೆ ವಿಕಸಿತ ಭಾರತ ನಿರ್ಮಾಣ ಸಾಧ್ಯ’ ಎಂದಿದ್ದರು. ಅವರ ಈ ಹೇಳಿಕೆಗೆ ವ್ಯಾಪಕ ಪರ-ವಿರೋಧ ಚರ್ಚೆ ಆಗಿತ್ತು.