ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿಬಿಎಸ್‌ಇ ಶಿಕ್ಷಣ ಪ್ರಾರಂಭ: ಸುಧಾ ಮೂರ್ತಿ

| Published : Oct 28 2025, 12:18 AM IST

ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿಬಿಎಸ್‌ಇ ಶಿಕ್ಷಣ ಪ್ರಾರಂಭ: ಸುಧಾ ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಥೆಗೆ ಸಿಬಿಎಸ್‌ಸಿ ಶಿಕ್ಷಣ ಮಾನ್ಯತೆ ದೊರೆತಿದ್ದು, ಪ್ರಸಕ್ತ ಸಾಲಿನಿಂದಲೇ ಈ ಶಿಕ್ಷಣ ಪದ್ಧತಿ ಜಾರಿಗೊಳಿಸಲಾಗಿದೆ. ನಮ್ಮ ಸಂಸ್ಥೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಡೊನೇಶನ್‌ ಪಡೆಯುವುದಿಲ್ಲ ಎಂದು ಸೊಸೈಟಿ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದಲ್ಲಿರುವ ನ್ಯೂ ಎಜ್ಯುಕೇಶನ್‌ ಸೊಸೈಟಿಯ ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಸಿಬಿಎಸ್‌ಇ ಮಾದರಿಯ ಶಿಕ್ಷಣ ಪ್ರಾರಂಭಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯೆ, ಸೊಸೈಟಿ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.

1937ರಲ್ಲಿ ಹಳೇ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ ಈ ಸಂಸ್ಥೆಯು 1957ರಲ್ಲಿ ದೇಶಪಾಂಡೆ ನಗರಕ್ಕೆ ಸ್ಥಳಾಂತರಗೊಂಡಿತು. ಒಂದು ಕಾಲದಲ್ಲಿ 1400 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಶಾಲೆ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಂಠಿತವಾಯಿತು. ಜತೆಗೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿತು. ಇದರ ಪುನರುಜ್ಜೀವನಗೊಳಿಸಲು ನಿರ್ಧರಿಸಿ ಸುಮಾರು ₹4 ಕೋಟಿ ವೆಚ್ಚದಲ್ಲಿ ಶಾಲೆ ನವೀಕರಣಗೊಳಿಸಲಾಗಿದೆ ಎಂದರು.

ನನ್ನ ತಾಯಿ, ನಾನು ಹಾಗೂ ನನ್ನ ಸಹೋದರಿ ಇದೇ ಶಾಲೆಯಲ್ಲಿ ಕಲಿತಿದ್ದು, ಹಾಗಾಗಿ ಈ ಶಾಲೆಯೊಂದಿಗೆ ಅವಿನಾಭಾವ ಸಂಬಂಧವಿದೆ. ಈ ಶಾಲೆಯ ಸಮಗ್ರ ಏಳ್ಗೆಗೆ ಸೊಸೈಟಿಯ ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರ ಪರಿಶ್ರಮವೇ ಕಾರಣವಾಗಿದೆ. ಸಂಸ್ಥೆಗೆ ಸಿಬಿಎಸ್‌ಇ ಶಿಕ್ಷಣ ಮಾನ್ಯತೆ ದೊರೆತಿದ್ದು, ಪ್ರಸಕ್ತ ಸಾಲಿನಿಂದಲೇ ಈ ಶಿಕ್ಷಣ ಪದ್ಧತಿ ಜಾರಿಗೊಳಿಸಲಾಗಿದೆ. ನಮ್ಮ ಸಂಸ್ಥೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಡೊನೇಶನ್‌ ಪಡೆಯುವುದಿಲ್ಲ ಎಂದರು.

ಡಾ. ಗುರುರಾಜ ಕರ್ಜಗಿ ಮಾತನಾಡಿ, ಅನ್ನ-ಜ್ಞಾನ ಎಂದಿಗೂ ಮಾರಾಟವಾಗಬಾರದು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಈ ಎರಡೂ ವ್ಯಾಪಾರಿ ಕೇಂದ್ರಗಳಾಗಿ ಮಾರ್ಪಟ್ಟಿರುವುದು ನೋವಿನ ಸಂಗತಿ. ಆದರೆ, ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಾವುದೇ ರೀತಿಯ ಡೊನೇಶನ್‌ ಪಡೆಯದೇ ಸರ್ಕಾರ ನಿಗದಿಪಡಿಸಿದ ಪ್ರವೇಶ ಫೀ ಮಾತ್ರ ಪಡೆಯಲಾಗುತ್ತದೆ. ಜತೆಗೆ ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಇಲ್ಲಿನ ಶಿಕ್ಷಕರಿಗೆ ಪ್ರತಿತಿಂಗಳು 2 ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ ಎಂದರು.

ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಲವು ಸುಧಾರಣೆ, ಬದಲಾವಣೆಗಳು ಜರುಗಿದ್ದು, ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇಂದಿನ ಕಾಲದಲ್ಲಿ ಸಿಬಿಎಸ್‌ಇ ಶಿಕ್ಷಣ ಮಕ್ಕಳಿಗೆ ಅವಶ್ಯಕವಾಗಿದ್ದು, ರಾಜ್ಯ ಸರ್ಕಾರವೂ ಈ ಶಿಕ್ಷಣ ವ್ಯವಸ್ಥೆ ಜಾರಿಗೆ ಮುಂದಾಗಲಿ ಎಂಬುದು ನನ್ನ ಸಲಹೆ. ಏಕೆಂದರೆ ರಾಷ್ಟ್ರಮಟ್ಟದಲ್ಲಿ ನಡೆಯುವ ಆಗು-ಹೋಗುಗಳ ಅರಿವು ನಮ್ಮ ಮಕ್ಕಳಿಗೂ ತಿಳಿಯಲಿ ಎಂಬ ಉದ್ದೇಶದಿಂದ ಸಿಬಿಎಸ್‌ಸಿ ಕಲಿಯಲಿ ಎಂಬುದು ನಮ್ಮ ಬಯಕೆ ಎಂದರು.

ಸೊಸೈಟಿಯ ಕಾರ್ಯದರ್ಶಿ ಎ.ಡಿ. ಕುಲಕರ್ಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ತಮಗೆ ಕಲಿಸಿದ ಶಿಕ್ಷಕರನ್ನು ಹಾಗೂ ಶಾಲೆಯ ಪ್ರಾಚಾರ್ಯರನ್ನು ಸನ್ಮಾನಿಸಿದರು.

ಈ ವೇಳೆ ಡಾ. ಸುನಂದಾ ಕುಲಕರ್ಣಿ, ಮಹೇಂದ್ರ ಕೌತಾಳ, ಆರ್‌.ಎನ್‌. ದೇಸಾಯಿ, ಪ್ರಾ. ರಾಜೇಶ್ವರಿ, ಎಸ್‌.ವಿ. ದೇಸಾಯಿ, ವಸಂತ ನಾಡಜೋಶಿ ಸೇರಿದಂತೆ ಹಲವರಿದ್ದರು.