ಮಲ್ಪೆಯಲ್ಲಿ ಬಂಧಿಸಲ್ಪಟ್ಟಿದ್ದ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಉಡುಪಿ ಜಿಲ್ಲಾ ನ್ಯಾಯಾಲಯದ 10 ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ.
ಉಡುಪಿ: ವರ್ಷದ ಹಿಂದೆ ಮಲ್ಪೆಯಲ್ಲಿ ಬಂಧಿಸಲ್ಪಟ್ಟಿದ್ದ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಉಡುಪಿ ಜಿಲ್ಲಾ ನ್ಯಾಯಾಲಯದ 10 ವರ್ಷಗಳ ಜೈಲು ಶಿಕ್ಷೆ ಘೋಷಿಸಿದೆ.
2024ರ ಅ.11ರಂದು ಸಂಜೆ 7 ಗಂಟೆಗೆ ಮಲ್ಪೆ ಎಸೈ ಪ್ರವೀಣ್ ಕುಮಾರ್ ಆರ್. ಮತ್ತು ಸಿಬ್ಬಂದಿ ಇಲ್ಲಿನ ವಡಭಾಂಡೇಶ್ವರ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಲಗೇಜ್‌ಗಳೊಂದಿಗೆ ಸುತ್ತಾಡುತ್ತಿದ್ದವರನ್ನು ವಿಚಾರಿಸಿದಾಗ ಅವರು ಯಾವುದೇ ದಾಖಲೆಗಳಿಲ್ಲದೆ, ನಕಲಿ ಆಧಾರ್ ಕಾರ್ಡುಗಳನ್ನು ಪಡೆದು ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಬಂದಿರುವುದು ಪತ್ತೆಯಾಗಿತ್ತು. ಅವರನ್ನು ತನಿಖೆಗೊಳಪಡಿಸಿದಾಗ ಮಲ್ಪೆಯಲ್ಲಿ ಅದಾಗಲೇ ಬಂದು ವಾಸಿಸುತ್ತಿದ್ದ ಇನ್ನೂ ಮೂವರು ಪತ್ತೆಯಾಗಿದ್ದರು, ನಂತರ ಅವರನ್ನು ವಿದೇಶಿ ಕಾಯ್ದೆ, ನಕಲಿ ದಾಖಲೆ ಕಾಯ್ದೆಯಡಿ ಬಂಧಿಸಲಾಗಿತ್ತು.ಬಂಧಿತರನ್ನು ಹಕೀಮ್ ಆಲಿ, ಸುಜೋನ್ ಯಾನೆ ಫಾರೂಕ್, ಇಸ್ಮಾಯಿಲ್ ಯಾನೆ ಮಹಮದ್ ಇಸ್ಮಾಯಿಲ್ ಹಾಕ್, ಕರೀಮ್ ಯಾನೆ ಅಬ್ದುಲ್ ಕರೀಮ್, ಸಲಾಂ ಯಾನೆ ಎಮ್ಡಿ ಅಬ್ದುಲ್ ಅಜೀಜ್, ರಾಜಿಕುಲ್, ಮೊಹಮ್ಮದ್ ಸೋಜಿಬ್ ಯಾನೆ ಅಲ್ಲಾಂ ಆಲಿ, ರಿಮೂಲ್ ಯಾನೆ ಅಬ್ದುಲ್ ರೆಹಮಾನ್, ಮೊಹಮ್ಮದ್ ಇಮಾಮ್ ಶೇಖ್, ಮೊಹಮ್ಮದ್ ಜಹಾಂಗಿರ್ ಆಲಂ ಎಂದು ಗುರುತಿಸಲಾಗಿದೆ.ಮಲ್ಪೆ ಎಸೈ ಅವರು ತನಿಖೆ ನಡೆಸಿ, ಜಿಲ್ಲಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಪೂರ್ಣಗೊಂಡು, ನ್ಯಾಯಾಲಯವು ಎಲ್ಲಾ 10 ಮಂದಿ ಆರೋಪಿಗಳಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರು. ದಂಡ ವಿಧಿಸಿ ಆದೇಶಿಸಿದೆ.ಅಕ್ರಮ ವಲಸಿಗರ ಪ್ರವೇಶವನ್ನು ತಡೆಗಟ್ಟುವ ಈ ಮಹತ್ವದ ಕಾರ್ಯಾಚರಣೆ ನಡೆಸಿದ ಮಲ್ಪೆ ಪೊಲೀಸರ ಬಗ್ಗೆ ಮತ್ತು ನ್ಯಾಯಾಲಯದ ಆದೇಶದ ಬಗ್ಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.