ಒಕ್ಕಲಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದಿಂದ ಕೊಡಗು ಜಿಲ್ಲೆಯ ಒಕ್ಕಲಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ಶನಿವಾರ ಒಕ್ಕಲಿಗರ ಸಂಘದ ಶ್ರೀಗಂಧ ಸಭಾಂಗಣದಲ್ಲಿ ನಡೆಯಿತು.ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹೆಚ್.ಎನ್. ರವೀಂದ್ರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 95 ಕ್ಕಿಂತ ಅಧಿಕ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಪುರಸ್ಕರಿಸಿದರು. ನಂತರ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿದಲ್ಲಿ, ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಉತ್ತೇಜನ ನೀಡುವಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಘದ ವತಿಯಿಂದ ಇಂತಹ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದಿಂದ ನಿರಂತರವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನವನ್ನು ದೃಷ್ಟಿಯಲ್ಲಿರಿಸಿಕೊಂಡು, ತಾವು ಇರಿಸಿಕೊಂಡಿರುವ ಗುರಿಯನ್ನು ಮುಟ್ಟಲು ಮುನ್ನೆಡೆಯಬೇಕು. ಶಿಕ್ಷಣದ ಸಂದರ್ಭ ಬೇರಾವುದರತ್ತ ತಮ್ಮ ಗಮನವನ್ನು ಹರಿಸಬಾರದು. ನಮ್ಮ ದೇಶದಲ್ಲಿ ಸಾಕಷ್ಟು ಸಾಧಕರಿದ್ದು, ಇತಿಹಾಸವನ್ನು ಒಮ್ಮೆ ನಾವು ನೋಡುವ ಮೂಲಕ ಅವರ ಸಾಧನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆಗೈಯಬೇಕೆಂದರು.ಸಮುದಾಯದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಪಟ್ಟಣದ ಬಸವೇಶ್ವರ ದೇವಾಲಯದ ಬಳಿಯಲ್ಲಿ ರು.. 10 ಕೋಟಿ ವೆಚ್ಚದ ವಸತಿ ನಿಲಯಕ್ಕೆ ಯೋಜನೆ ರೂಪಿಸಿದ್ದ, ಮುಂದಿನ ಒಂದು ವಾರದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಿಸಲಿದ್ದಾರೆ. ಇದರೊಂದಿಗೆ ಮಡಿಕೇರಿ ಹಾಗೂ ಕುಶಾಲನಗರದಲ್ಲಿಯೂ ವಸತಿ ನಿಲಯ ಸ್ಥಾಪನೆಗೆ ಚಿಂತಿಸಲಾಗಿದೆ. ಕೊಡಗಿನಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆ ಸಂಬಂಧ ಈಗಾಗಲೇ ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಒಕ್ಕಲಿಗರ ಸಂಘದ ಮೂಲಕ ಕಾಲೇಜು ಸ್ಥಾಪನೆಗೆ ಕ್ರಮವಹಿಸುವ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ತಿಳಿಸಿದರು.ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಚ್.ಆರ್. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಯಾವುದೇ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮಿಂದಾಗಬೇಕು. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡುವ ಕೆಲಸ ಎಲ್ಲ ಪೋಷಕರಿಂದಾಗಬೇಕೆಂದರು.ಒಕ್ಕಲಿಗರ ಯುವವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ, ನೂರಾರು ವರ್ಷ ಇತಿಹಾಸ ಇರುವ ರಾಜ್ಯ ಒಕ್ಕಲಿಗರ ಸಂಘದಿಂದ ಜಿಲ್ಲೆಯ ಜನರು ಸರಿಯಾದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಜಿಲ್ಲೆಯಿಂದ ಹರಪಳ್ಳಿ ರವೀಂದ್ರ ನಮ್ಮ ಪ್ರತಿನಿಧಿಯನ್ನಾಗಿ ರಾಜ್ಯ ಸಮಿತಿಗೆ ಆಯ್ಕೆ ಮಾಡಿ ಕಳಿಸಿದ ನಂತರ ಸಾಕಷ್ಟು ಪ್ರಯೋಜನವಾಗುತ್ತಿದೆ ಎಂದರು.

ವೇದಿಕೆಯಲ್ಲಿ ಸಂಘದ ಸದಸ್ಯ ಬಸಪ್ಪ ಉಪಸ್ಥಿತರಿದ್ದರು.