- ಜನಸಂಘದ ಸಂಸ್ಥಾಪಕರ ತವರಲ್ಲಿ ಕಡೆಗೂ ಅರಳಿತು ಕಮಲ । ಈಡೇರಿತು ದಶಕಗಳ ಆಸೆ
ಅದೊಂದು ಆಸೆ ಬಾಕಿ ಇತ್ತು. ಅದು ಕೂಡ ಈಗ ಈಡೇರಿತು!
ಬಿಜೆಪಿಯ ಪೂರ್ವಾಶ್ರಮವಾಗಿರುವ ಜನಸಂಘದ ಸಂಸ್ಥಾಪಕರು ಶ್ಯಾಮಪ್ರಸಾದ ಮುಖರ್ಜಿ. ಅವರಿಂದ ಕುಡಿಯೊಡೆದ ಪಕ್ಷ ಈಗ ದೇಶಾದ್ಯಂತ ಹೆಮ್ಮರವಾಗಿ ಬೆಳೆದಿದೆ, ವಿಶ್ವದ ಅತಿದೊಡ್ಡ ಪಕ್ಷವಾಗಿದೆ. ಎಂದೂ ಗೆಲ್ಲದ ರಾಜ್ಯಗಳಲ್ಲೆಲ್ಲಾ 2014ರ ನಂತರ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಆದರೆ ಮುಖರ್ಜಿ ಅವರ ತವರು ರಾಜ್ಯವಾಗಿರುವ ಪಶ್ಚಿಮಬಂಗಾಳದಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಗೆಲುವು ಮರೀಚಿಕೆಯಾಗಿತ್ತು. ಅದು ಕೂಡ ಈಗ ಸಾಕಾರಗೊಂಡಿದೆ. ಶ್ಯಾಮಪ್ರಸಾದ ಮುಖರ್ಜಿ ಅವರ 125ನೇ ವರ್ಷಾಚರಣೆ ಹೊತ್ತಲ್ಲೇ.ಇದಕ್ಕೆ ಯಾರು ಕಾರಣ ಎಂದರೆ, ಬಿಜೆಪಿಯಲ್ಲಿ ಕೇಳಿಬರುವುದು ಎರಡೇ ಹೆಸರು. ನರೇಂದ್ರ ಮೋದಿ, ಅಮಿತ್ ಶಾ!
ಬಂಗಾಳದಲ್ಲಿ 2014ರ ನಂತರ ಬಿಜೆಪಿ ತಳಮಟ್ಟದಿಂದ ನೆಲೆ ಕಾಣಲು ಆರಂಭಿಸಿತು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಅದು ಗೋಚರವಾಯಿತು. 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವಂತಹ ವಾತಾವರಣ ಕಂಡುಬಂತಾದರೂ ಅಲ್ಪಮತಗಳ ಅಂತರದ ಸೋಲುಗಳು ಮಮತಾ ದೀದಿಯನ್ನು ಅಧಿಕಾರಕ್ಕೇರಿಸಿದ್ದವು.
ಬಂಗಾಳವನ್ನು ಗೆಲ್ಲಲು ಅಬ್ಬರದ ಪ್ರಚಾರವೊಂದೇ ಸಾಲುವುದಿಲ್ಲ ಎಂಬುದನ್ನು ಮನಗಂಡ ಮೋದಿ- ಅಮಿತ್ ಶಾ ಜೋಡಿ, ಅಲ್ಪಮತಗಳಿಂದ ಫಲಿತಾಂಶವೇ ಬದಲಾಗುತ್ತಿದ್ದ ಬೂತ್‌ಗಳತ್ತ ಗಮನಹರಿಸಿತು. ಉತ್ತರಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಬೂತ್ ಪ್ರಮುಖ ವ್ಯವಸ್ಥೆಯನ್ನು ಬಂಗಾಳದಲ್ಲೂ ಜಾರಿಗೆ ತಂದಿತು. ಬೂತ್ ಮಟ್ಟವನ್ನು ಬಲಪಡಿಸಿತು. ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿ ಎದುರು ತಲೆ ಎತ್ತಲು ಪ್ರಯಾಸಪಡುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಎಲ್ಲ ರೀತಿಯಲ್ಲೂ ಶಕ್ತಿ ತುಂಬಿತು.
ಮಮತಾ ಬ್ಯಾನರ್ಜಿ ಅವರ ವರ್ಚಸ್ಸಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕ ಬಂಗಾಳ ಬಿಜೆಪಿಯಲ್ಲಿ ಇರಲಿಲ್ಲ. ಹೀಗಾಗಿ ಮೋದಿ ಮುಖವನ್ನೇ ದೊಡ್ಡದಾಗಿ ಬಿಂಬಿಸಲಾಯಿತು. ಪ್ರಚಾರಕ್ಕೆ ಅವರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯ ಸುತ್ತಿದ ಮೋದಿ, ಚುರುಮುರಿ ಅಂಗಡಿ ಭೇಟಿ, ಹೂಗ್ಲಿ ನದಿಯಲ್ಲಿ ಬೋಟ್ ಸಂಚಾರದಂತಹ ಪ್ರಚಾರದ ಮೂಲಕ ಜನರಿಗೆ ಹತ್ತಿರವಾದರು. ಅಮಿತ್ ಶಾ ಅವರು ರಾಜ್ಯದಲ್ಲೇ ಹಲವು ದಿನಗಳ ಕಾಲ ಬೀಡುಬಿಟ್ಟು ತೆರೆಯ ಹಿಂದೆ ತಂತ್ರಗಾರಿಕೆ ರೂಪಿಸಿದರು.
ಹೊರಗಿನವರು ವರ್ಸಸ್ ಸ್ಥಳೀಯರು:
ವಲಸಿಗರ ಸಮಸ್ಯೆ: