ಬಂಗಾಳದಲ್ಲಿ ದೀದಿ-ಬಿಜೆಪಿ ಜಿದ್ದಾಜಿದ್ದಿ!

KannadaprabhaNewsNetwork |  
Published : Apr 21, 2026, 03:00 AM ISTUpdated : Apr 21, 2026, 05:59 AM IST
Mamatha Banerjee

ಸಾರಾಂಶ

ದೇಶದಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಪ.ಬಂಗಾಳ ವಿಧಾನಸಭೆ ಚುನಾವಣೆಗಳು 2 ಹಂತದಲ್ಲಿ- ಎಂದರೆ ಏ.23 ಹಾಗೂ ಏ.29ಕ್ಕೆ ನಡೆಯಲಿವೆ. 294 ಕ್ಷೇತ್ರಗಳನ್ನು ರಾಜ್ಯ ಹೊಂದಿದೆ. ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ಚುನಾವಣಾ ಕಣ ಹೇಗಿದೆ ಎಂಬುದರ ಕಿರು ವಿಶ್ಲೇಷಣೆ ಇಲ್ಲಿದೆ.

  ದೇವದತ್ತ ಜೋಶಿ

 ದೇಶದಲ್ಲಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಪ.ಬಂಗಾಳ ವಿಧಾನಸಭೆ ಚುನಾವಣೆಗಳು 2 ಹಂತದಲ್ಲಿ- ಎಂದರೆ ಏ.23 ಹಾಗೂ ಏ.29ಕ್ಕೆ ನಡೆಯಲಿವೆ. 294 ಕ್ಷೇತ್ರಗಳನ್ನು ರಾಜ್ಯ ಹೊಂದಿದೆ. ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ಚುನಾವಣಾ ಕಣ ಹೇಗಿದೆ ಎಂಬುದರ ಕಿರು ವಿಶ್ಲೇಷಣೆ ಇಲ್ಲಿದೆ.

* 2021ರ ಪ. ಬಂಗಾಳ ಚುನಾವಣೆ

(ಒಟ್ಟು ಸ್ಥಾನ 294/ಬಹುಮತಕ್ಕೆ 148)

ಪಕ್ಷಸ್ಥಾನ

ಟಿಎಂಸಿ216

ಬಿಜೆಪಿ77

ಕಾಂಗ್ರೆಸ್00

ಎಡರಂಗ00

ಇತರರು 01

* ಎಡರಂಗದ ಹಿಂದಿನ ಅಖಾಡದಲ್ಲಿ

ಬಿಜೆಪಿ-ಟಿಎಂಸಿ ಮಧ್ಯೆ ನೇರ ಸ್ಪರ್ಧೆ

ಟಿಎಂಸಿಗೆ 4ನೇ ಸಲ ಅಧಿಕಾರ ಆಸೆ

2011ರಲ್ಲಿ ಎಡರಂಗದನ್ನು ರಾಜ್ಯದಿಂದ ಕಿತ್ತೆಸೆದು ಅಧಿಕಾರಕ್ಕೆ ಬಂದ ಪಕ್ಷವೇ ತೃಣಮೂಲ ಕಾಂಗ್ರೆಸ್‌ (ಟಿಎಂಸಿ). ಮಮತಾ ಬ್ಯಾನರ್ಜಿ ಅವರು ಚುಕ್ಕಾಣಿ ಹಿಡಿದಿರುವ ಈ ಪಕ್ಷ 15 ವರ್ಷದಿಂದ ಅಧಿಕಾರದಲ್ಲಿದ್ದು ಪುನಃ ಗೆಲ್ಲುವ ವಿಶ್ವಾಸದಲ್ಲಿದೆ. ಕೇಂದ್ರದ ಮೋದಿ ಸರ್ಕಾರದ ವಿರುದ್ಧ ತೊಡೆತಟ್ಟಿ ನಿಂತಿರುವ ಮಮತಾ, ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಮೋದಿ ಸರ್ಕಾರ ಒಕ್ಕೂಟ ವ್ಯವಸ್ಥೆಯ ವಿರೋಧಿ ಎಂದು ಪ್ರಚಾರ ಮಾಡುತ್ತ ಮುನ್ನುಗ್ಗುತ್ತಿದ್ದಾರೆ. ಅನೇಕ ನಟ-ನಟಿಯರು, ಸೆಲೆಬ್ರಿಟಿಗಳ ದಂಡೇ ಟಿಎಂಸಿಯಲ್ಲಿದೆ.ಮೊದಲ ಬಾರಿ ಅಧಿಕಾರಕ್ಕೆ ಬಿಜೆಪಿ ಯತ್ನ

ಒಮ್ಮೆ ಎಡರಂಗದ ಅಖಾಡವಾಗಿದ್ದ ಬಂಗಾಳದಲ್ಲಿ ಬಿಜೆಪಿ ನೆಲೆಯೂರುವ ಬಗ್ಗೆ ಯಾರೂ ಊಹಿಸಿರಲಿಲ್ಲ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೇರಿ ವಿಪಕ್ಷಗಳ ನಾಯಕರನ್ನು ಸೆಳೆದು ಬಿಜೆಪಿ ಬಲಿಷ್ಠ ಪ್ರತಿಪಕ್ಷವಾಗಿ ಹೊರಹೊಮ್ಮಿತು. ಈ ಬಾರಿ ಅಧಿಕಾರಕ್ಕೆ ಏರಲೇಬೇಕು ಎಂದು ಶತಾಯ ಗತಾಯ ಯತ್ನ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ 6 ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಿ, ‘ಡಬಲ್ ಇಂಜಿನ್ ಸರ್ಕಾರ’ದ ಭರವಸೆಯೊಂದಿಗೆ ಮತ ಕೇಳುತ್ತಿದೆ.

ಖಾತೆ ತೆರೆಯಲು ಎಡರಂಗ ಪರದಾಟ

ಒಂದು ಕಾಲದಲ್ಲಿ ದೇಶದಲ್ಲೇ ಎಡರಂಗದ ಭದ್ರಕೋಟೆ ಆಗಿದ್ದ ರಾಜ್ಯ ಪ.ಬಂಗಾಳ. ಆದರೆ 2011ರಲ್ಲಿ ಯಾವಾಗ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದರೋ ಆಗಿನಿಂದ ಎಡರಂಗ ದುರ್ಬಲ ಆಗುತ್ತಲೇ ಹೋಗಿದೆ. 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಎಡರಂಗ ಇತಿಹಾಸದಲ್ಲೇ ಮೊದಲ ಬಾರಿ ಶೂನ್ಯ ಸ್ಥಾನಗಳನ್ನು ರಾಜ್ಯದಲ್ಲಿ ಪಡೆದು. ಅಷ್ಟರ ಮಟ್ಟಿಗೆ ಎಡರಂಗ ದುರ್ಬಲವಾಗಿದೆ.

ಪುನಃ ನೆಲೆ ಕಾಣಲು ಕಾಂಗ್ರೆಸ್‌ ಯತ್ನ

ರಾಜ್ಯದಲ್ಲಿ 2011ರಲ್ಲಿ ಸೊನ್ನೆ ಸುತ್ತಿದ್ದ ಕಾಂಗ್ರೆಸ್‌ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕಿಳಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಕೂಟದ ಹೆಸರಲ್ಲಿ ಟಿಎಂಸಿ ಜತೆ ಒಪ್ಪಂದ ಮಾಡಿಕೊಂಡರೂ ಈ ಚುನಾವಣೆಯಲ್ಲಿ ಮೈತ್ರಿ ಇಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಅಷ್ಟೇನೂ ಪ್ರಬಲ ಪಕ್ಷವಲ್ಲ. ಆದರೂ ಕರ್ನಾಟಕ ಮಾದರಿಯಲ್ಲಿ ಕೆಲವು ಗ್ಯಾರಂಟಿ ಭರವಸೆ ನೀಡಿ ಅದೃಷ್ಟ ಪರೀಕ್ಷೆಗೆ ಇಳಿದಿದೆ.

* ಒಳನುಸುಳುವಿಕೆ, ಎಸ್ಐಆರ್‌ ಪ್ರಧಾನ ವಿಷಯ

ಪ. ಬಂಗಾಳದಲ್ಲಿ ಬಾಂಗ್ಲಾದೇಶೀಯರ ಅಕ್ರಮ ಒಳನುಸುಳುವಿಕೆ ಹಾಗೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗಳೇ (ಎಸ್ಐಆರ್‌) ಪ್ರಮುಖ ಚುನಾವಣಾ ವಿಷಯಗಳಾಗಿ ಸದ್ದು ಮಾಡುತ್ತಿವೆ. ಕೇಂದ್ರ ಸರ್ಕಾರ ಒಳನುಸುಳುವಿಕೆ ತಡೆಯಲು ವಿಫಲವಾಗಿದೆ ಎಂದು ಮಮತಾ ಆರೋಪಿಸುತ್ತಿದ್ದರೆ, ಮತ ಬ್ಯಾಂಕ್‌ಗಾಗಿ ಒಳನುಸುಳುವಿಕೆಗೆ ಟಿಎಂಸಿ ಕುಮ್ಮಕ್ಕು ನೀಡುತ್ತಿದೆ ಎಂಬುದು ಬಿಜೆಪಿ ಆರೋಪ. ಈ ನಡುವೆ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಉದ್ದೇಶದ ಎಸ್ಐಆರ್ ಮೂಲಕ 90 ಲಕ್ಷ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದು ಟಿಎಂಸಿ ಸೇರಿ ವಿಪಕ್ಷಗಳ ಕೋಪಕ್ಕೆ ಕಾರಣವಾಗಿದೆ. ‘ಅಕ್ರಮ ವಲಸಿಗರ ಹೆಸರಲ್ಲಿ ವಿಪಕ್ಷಗಳ ಬೆಂಬಲಿಗರನ್ನು ಮತಪಟ್ಟಿಯಿಂದ ಕೈಬಿಡಲಾಗುತ್ತಿದೆ’ ಎಂಬುದು ಟಿಎಂಸಿ ಆರೋಪ.

* ಸಿಎಂ ಸ್ಥಾನಕ್ಕೆ ಇವರ ಸ್ಪರ್ಧೆ

1. ಮಮತಾ ಬ್ಯಾನರ್ಜಿ (ಟಿಎಂಸಿ)

ಇವರು ಭಾರತ ಕಂಡ ಅತ್ಯಂತ ಧೀರ ಮಹಿಳಾ ರಾಜಕಾರಣಿಯಲ್ಲಿ ಒಬ್ಬರು. ವಕೀಲೆಯೂ ಆದ ಅವರು ಪ್ರಸ್ತುತ 2011ರ ಮೇ 11ರಿಂದ ಪ.ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಂಗಾಳದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಅವರು. ಟಿಎಂಸಿ ಸಂಸ್ಥಾಪಕಿಯಾದ ಅವರು ಈ ಹಿಂದೆ ಕೇಂದ್ರ ಸಚಿವರಾಗಿ ಕೆಲಸ ಮಾಡಿದವರು. ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಬಿಜೆಪಿ ಜತೆಗೂ ಕೆಲಸ ಮಾಡಿದವರು ದೀದಿ. 15 ವರ್ಷಗಳಿಂದ ಸಿಎಂ ಆಗಿರುವ ಅವರು ಈ ಬಾರಿ ಪುನಃ ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.2. ಸುವೇಂದು ಅಧಿಕಾರಿ (ಬಿಜೆಪಿ)

ಸುವೇಂದು ಅಧಿಕಾರಿ ಈ ಹಿಂದೆ ಮಮತಾ ಬ್ಯಾನರ್ಜಿ ಆಪ್ತ ವರ್ಗಕ್ಕೆ ಸೇರಿದ ರಾಜಕಾರಣಿ. 2020ರವರೆಗೆ ಮಮತಾ ಸಂಪುಟದಲ್ಲಿ ಸಚಿವರಾಗಿದ್ದವರು. ಆದರೆ 2021ರ ಚುನಾವಣೆಗೂ ಮುನ್ನ ಮಮತಾ ಜತೆ ದ್ವೇಷ ಕಟ್ಟಿಕೊಂಡ ಅವರು ಏಕಾಏಕಿ ಬಿಜೆಪಿ ಸೇರಿ ಅಚ್ಚರಿ ಮೂಡಿಸಿದರು. 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನೂ ಸೋಲಿಸಿದ ಜೈಂಟ್‌ ಕಿಲ್ಲರ್‌ ಅವರು. ಈ ಸಲ ಪುನಃ ನಂದಿ ಗ್ರಾಮದಲ್ಲಿ ಸುವೇಂದು ಗೆದ್ದರೆ ಬಿಜೆಪಿ ಬಹುಮತ ಗಳಿಸಿದರೆ ಸಿಎಂ ಆಗುವ ಪ್ರಬಲ ಆಕಾಂಕ್ಷಿ ಸುವೇಂದು ಅವರು.

ಚುನಾವಣಾ ಸಮೀಕ್ಷೆಗಳು ಏನು ಹೇಳುತ್ತವೆ?

ಸಿ-ವೋಟರ್ ಸಮೀಕ್ಷೆಯ ಪ್ರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರ ರಚನೆಯಲ್ಲಿ ಮುಂದಿದೆ. ಟಿಎಂಸಿ 294 ಸದಸ್ಯ ಬಲದ ವಿಧಾನಸಭೆಯಲ್ಲಿ 184 ರಿಂದ 194 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಿಜೆಪಿ 98 ರಿಂದ 108 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಸಣ್ಣ ಪಕ್ಷಗಳು ಸೀಮಿತ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ಸುಮಾರು ಶೇ.48.5ರಷ್ಟು ಜನರು ದೀದಿಯನ್ನು ತಮ್ಮ ನೆಚ್ಚಿನ ಮುಖ್ಯಮಂತ್ರಿ ಎಂದು ಹೆಸರಿಸಿದ್ದಾರೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪರ ಶೇ.33.4ರಷ್ಟು ಮತ ಬಂದಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ರಿಕೆಟ್‌ಗೆ ಆಹ್ವಾನಿಸದ್ದಕ್ಕೆ ಪಿಚ್ ಧ್ವಂಸಗೊಳಿಸಿದ ಪುರಸಭೆ ಅಧ್ಯಕ್ಷ!
ಬಿಟ್‌ಕಾಯಿನ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಬೇಟೆ ಬಿಡಿಎ ಅಧ್ಯಕ್ಷ- ಶಾಸಕ ಹ್ಯಾರಿಸ್‌,ನಲಪಾಡ್‌ಗೆ ಇ.ಡಿ. ದಾಳಿ ಶಾಕ್‌- ಮಾಜಿ ಕೇಂದ್ರ ಸಚಿವ ರೆಹಮಾನ್‌ ಖಾನ್‌ ಮೊಮ್ಮಗ ಹಕೀಬ್‌, ಶ್ರೀಕಿಗೂ ಬಿಸಿ- ಬೆಂಗಳೂರಿನ 12 ಸ್ಥಳಗಳಲ್ಲಿ ಶೋಧ ಕಾರ್ಯ । ಹಲವು ದಾಖಲೆಗಳು ವಶಕ್ಕೆ- ಮನೆಯಲ್ಲೇ ಇದ್ದ ಅಪ್ಪ ಹ್ಯಾರಿಸ್‌, ಪುತ್ರ ನಲಪಾಡ್‌ಗೆ ಇ.ಡಿ. ತೀವ್ರ ವಿಚಾರಣೆ