ತಿರುವನಂತಪುರಂ: ಕೇರಳದ ವಿಝಿಂಜಂನಲ್ಲಿ ನಿರ್ಮಾಣವಾಗಿರುವ ದೇಶದ ಮೊತ್ತಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಬಂದರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಲ್ಲಿ ಚಾಲನೆ ನೀಡಿದರು. 8867 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬಂದರು ದೇಶದ ಕಡಲ ಉದ್ಯಮದಲ್ಲಿ ಹೊಸ ಮೈಲುಗಲ್ಲು ಎಂದು ಬಣ್ಣಿಸಲಾಗಿದೆ.
ಬಂದರಿನ ವಿಶೇಷ:
ವಿಝಿಂಜಂನಲ್ಲಿ ಅದಾನಿ ಸಮೂಹದಿಂದ ನಿರ್ಮಾಣವಾದ ಈ ಆಳ ಸಮುದ್ರ ಟ್ರಾನ್ಸ್‌ಶಿಪ್‌ಮೆಂಟ್ ಕಂಟೇನರ್ ದೇಶದ ಇಂಥ ಏಕೈಕ ಬಂದರು ಎಂಬ ಖ್ಯಾತಿ ಪಡೆದಿದೆ. ಬಂದರಿನಿಂದ ಒಂದು ಕಿ.ಮೀ ದೂರದವರೆಗಿನ ನೀರಿನ ಆಳ 18- 20 ಮೀಟರ್‌ಗಳಷ್ಟು ಇದ್ದು, ದೊಡ್ಡ ಹಡಗುಗಳು ಬಂದು ತಂಗಲು ಅನುಕೂಲಕರವಾಗಿದೆ.
ಯಾಕೆ ಮುಖ್ಯ?:
ಇದುವರೆಗೆ ಭಾರತದ ಶೇ.75ರಷ್ಟು ಕಂಟೇನರ್‌ಗಳು ಕೊಲಂಬೋ, ಸಿಂಗಾಪುರ ಅಥವಾ ದುಬೈನಂತಹ ವಿದೇಶಿ ಬಂದರಿನಲ್ಲಿ ಟ್ರಾನ್ಸ್‌ಶಿಪ್‌ಮೆಂಟ್‌ಗೆ ಒಳಗಾಗುತ್ತಿದ್ದವು. ಅಂದರೆ ವಿದೇಶಗಳಿಂದ ದೊಡ್ಡ ಹಡಗಿನಲ್ಲಿ ಬಂದ ಕಂಟೇನರ್‌ಗಳನ್ನು ಭಾರತದ ಬೇರೆ ಹಡಗುಗಳು ವಿದೇಶಗಳ ಬಂದರಿಗೆ ತೆರಳಿ ಅಲ್ಲಿಂದ ಮತ್ತೆ ಅವುಗಳನ್ನು ಹೊತ್ತು ಭಾರತದ ಬಂದರಿಗೆ ಆಗಮಿಸಬೇಕಿತ್ತು. ಈ ಪ್ರಕ್ರಿಯೆಗೆ ವಾರ್ಷಿಕ 1800 ಕೋಟಿ ರು. ವೆಚ್ಚವಾಗುತ್ತಿತ್ತು. ಇನ್ನು ಈ ಸಮಸ್ಯೆ ಇರದು. ದೊಡ್ಡ ದೊಡ್ಡ ಹಡಗುಗಳು ನೇರ ವಿಝಿಂಜಂಗೆ ಬರಬಹುದು. ಹೀಗಾಗಿ 1800 ಕೋಟಿ ರು. ಆದಾಯ ಕೈತಪ್ಪುವುದು ನಿಲ್ಲಲಿದೆ.
ಅತಿದೊಡ್ಡ ಹಡಗು ಆಗಮನ:
ಬಂದರು ಆರಂಭದ ನಡುವೆಯೇ ಡಿಟರೇನಿಯನ್ ಶಿಪ್ಪಿಂಗ್ ಕಂಪನಿಂದ ನಿರ್ವಹಿಸಲ್ಪಡುವ ವಿಶ್ವದ ಅತಿದೊಡ್ಡ ಪರಿಸರ ಸ್ನೇಹಿ ಕಂಟೇನರ್ ಹಡಗು ಟರ್ಕಿಯೆ ವಿಝಿಂಜಂನಲ್ಲಿ ಬಂದಿಳಿದಿದೆ. ಇದು 400 ಮೀ ಉದ್ದ, 63 ಮೀ ಅಗಲ, 33 ಮೀ ಆಳವನ್ನು ಹೊಂದಿದೆ.
ಬಂದರಿನಲ್ಲಿ ಏನು ಸೇವೆ?
ಇಲ್ಲಿ ಸರಕು ಕಂಟೇನರ್‌ಗಳನ್ನು ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ವರ್ಗಾಯಿಸಲಾಗುತ್ತದೆ. ಅವುಗಳ ಅಂತಿಮ ಸ್ಥಾನಕ್ಕೆ ಹೋಗುವ ದಾರಿಯಲ್ಲಿ ದೊಡ್ಡ ಹಡಗುಗಳನ್ನು ಆಳವಾದ ನೀರಿನಲ್ಲಿ ಇಳಿಸಲಾಗುತ್ತದೆ. ನಂತರ ಸರಕುಗಳನ್ನು ಸಣ್ಣ ಫೀಡರ್ ಹಡಗುಗಳಿಗೆ ವರ್ಗಾಯಿಸಲಾಗುತ್ತದೆ, ಸ್ವಯಂಚಾಲಿತ ಕ್ರೇನ್‌ಗಳು, ಆಧುನಿಕ ಕಂಟೈನರ್ ನಿರ್ವಹಣಾ ವ್ಯವಸ್ಥೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಸಂಪರ್ಕ:
ಈ ಬಂದರು ರೈಲು ಮತ್ತು ರಸ್ತೆ ಮಾರ್ಗಗಳಿಗೂ ಸಮೀಪ ಸಂಪರ್ಕವನ್ನು ಹೊಂದಿದೆ. ಇದು ಒಳನಾಡಿನ ಸರಕುಗಳನ್ನು ಸಾಗಿಸಲು ಸುಲಭ ಮತ್ತು ಅಗ್ಗ. ಇದು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 15 ಕಿ.ಮೀ ದೂರದಲ್ಲಿದೆ. ರೈಲು ನಿಲ್ದಾಣಕ್ಕೆ 12 ಕಿ.ಮೀ, ರಾಷ್ಟ್ರೀಯ ಹೆದ್ದಾರಿ 47ಕ್ಕೆ 2 ಕಿ.ಮೀ ದೂರದಲ್ಲಿದೆ.