ಸಾರಾಂಶ
ನವದೆಹಲಿ: ವಿದೇಶಗಳಲ್ಲಿ ಹುದ್ದೆ ಕಡಿತ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಸೂಚನೆ ಮತ್ತು ಒಪನ್ ಎಐ ಸಂಸ್ಥೆ ಜತೆಗಿನ ಒಪ್ಪಂದದ ಬೆನ್ನಲ್ಲೇ ವಿಶ್ವದ ಅತಿದೊಡ್ಡ ಸಾಫ್ಟವೇರ್ ಕಂಪನಿಗಳ ಪೈಕಿ ಒಂದಾದ ಒರಾಕಲ್, ಭಾರತದಲ್ಲಿನ ತನ್ನ ಒಟ್ಟು ಸಿಬ್ಬಂದಿಗಳ ಪೈಕಿ ಶೇ.10ರಷ್ಟು ಜನರನ್ನು ತೆಗೆದು ಹಾಕಲು ನಿರ್ಧರಿಸಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ ಸೇರಿದಂತೆ ದೇಶದ 7 ಪ್ರಮುಖ ನಗರಗಳಲ್ಲಿ ಒರಾಕಲ್ ಕಂಪನಿಯಿದ್ದು, 28,824 ಉದ್ಯೋಗಿಗಳನ್ನು ಹೊಂದಿದೆ.
==ಇಸ್ರೋ ಹೊಸ ರಾಕೆಟ್ 40 ಮಹಡಿ ಎತ್ತರ, 75 ಟನ್ ಹೊರುವ ಸಾಮರ್ಥ್ಯ
ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 75000 ಕೆಜಿ ಭಾರದ ಉಪಗ್ರಹ ಹೊತ್ತೊಯ್ಯಬಲ್ಲ, 40 ಅಂತಸ್ತಿನ ಕಟ್ಟಡದಷ್ಟು ಎತ್ತರದ ರಾಕೆಟ್ ನಿರ್ಮಾಣದಲ್ಲಿ ತೊಡಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ವಿ. ನಾರಾಯಣನ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಮ್ಮ ಮೊದಲ ರಾಕೆಟ್ 17000 ಕೆಜಿ ತೂಕವಿದ್ದು 35 ಕೆಜಿ ಭಾರದ ಉಪಗ್ರಹ ಹೊರಬಲ್ಲದಾಗಿತ್ತು. ಈಗ ನಾವು 75000 ಕೆಜಿ ಭಾರದ ಉಪಗ್ರಹ ಹೊರಬಲ್ಲ, 40 ಅಂತಸ್ತಿನ ಕಟ್ಟಡದಷ್ಟು ಎತ್ತರದ ರಾಕೆಟ್ ನಿರ್ಮಾಣ ಮಾಡುತ್ತಿದ್ದೇವೆ. ಪ್ರಸ್ತುತ ಭಾರತವು ಕಕ್ಷೆಯಲ್ಲಿ 55 ಉಪಗ್ರಹ ಹೊಂದಿದೆ. ಮುಂದಿನ 4 ವರ್ಷಗಳಲ್ಲಿ ಈ ಸಂಖ್ಯೆ 3 ಪಟ್ಟು ಹೆಚ್ಚಲಿದೆ’ ಎಂದರು.
==ಭಾನುವಾರವೂ ಕೆಲಸ ಹೇಳಿಕೆ ಪತ್ನಿಗೆ ಬೇಸರ ತಂದಿತ್ತು: ಎಲ್&ಟಿ ಬಾಸ್
ನವದೆಹಲಿ: ‘ಎಷ್ಟು ಹೊತ್ತು ಹೆಂಡತಿಯನ್ನು ನೋಡ್ತೀರಾ. ಭಾನುವಾರವೂ ಕೆಲಸಕ್ಕೆ ಬನ್ನಿ’ ಎಂದಿದ್ದ ಎಲ್&ಟಿ ಸಂಸ್ಥೆಯ ಮುಖ್ಯಸ್ಥ ಎಸ್.ಎನ್. ಸುಬ್ರಹ್ಮಣಿಯನ್, ‘ಹಾಗೆ ಹೇಳಿದ್ದಕ್ಕೆ ನನ್ನ ಮಡದಿಗೂ ಬೇಸರ ಆಗಿತ್ತು’ ಎಂದು ಹೇಳಿದ್ದಾರೆ. ತಾವು ಭಾನುವಾರವೂ ಕೆಲಸ ಮಾಡಬೇಕು ಎಂದು ಉದ್ದೇಶಪೂರ್ವಕವಾಗಿ ಹೇಳಿರಲಿಲ್ಲ ಎಂದು ಸ್ಪಷ್ಟನೆ ನೀಡಿರುವ ಅವರು, ‘ಆ ಸಮಯದಲ್ಲಿ ನನ್ನ ಮೇಲೆ ಕೆಲಸ ಒತ್ತಡವಿತ್ತು. ಎಷ್ಟೇ ಶ್ರಮಪಟ್ಟರೂ ಯೋಜನೆಗಳು ಮುಗಿಯುತ್ತಿರಲಿಲ್ಲ. ಆ ಒತ್ತಡದಲ್ಲಿ ಹಾಗೆ ಹೇಳಿದ್ದೆ. ತನಗೆ ಸಂಬಂಧವೇ ಇಲ್ಲದ ವಿಷಯದಲ್ಲಿ ಹೆಂಡತಿಯ ಪ್ರಸ್ತಾಪ ಮಾಡಿದ್ದರಿಂದ ಆಕೆಗೂ ಬೇಜಾರಾಗಿತ್ತು’ ಎಂದು ಹೇಳಿದ್ದಾರೆ.
==ನಾಯಿ ಸೆರೆಗೆ ಹೋದ ಅಧಿಕಾರಿಗಳ ಮೇಲೆ ಶ್ವಾನ ಪ್ರಿಯರ ದಾಳಿ
ನವದೆಹಲಿ: ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ದೆಹಲಿಯ ಮುನ್ಸಿಪಾಲ್ ಕಾರ್ಪೋರೇಷನ್‌ನ ಸಿಬ್ಬಂದಿ ಬೀದಿ ನಾಯಿ ಹಿಡಿಯಲು ಮುಂದಾದಾಗ ಅವರ ಮೇಲೆ ಶ್ವಾನ ಪ್ರಿಯರು ದಾಳಿ ನಡೆಸಿದ ಘಟನೆ ನಡೆದಿದೆ. ಅಧಿಕಾರಿಗಳ ತಂಡ ಸೆಕ್ಟರ್ 16 ಸರ್ವೋದಯ ವಿದ್ಯಾಲಯ ಆಸುಪಾಸಿನಲ್ಲಿ ದೂರಿನ ಹಿನ್ನೆಲೆ ಬೀದಿನಾಯಿಗಳನ್ನು ಸೆರೆ ಹಿಡಿಯಲು ತೆರಳಿದ್ದರು. ಒಂದು ನಾಯಿ ಹಿಡಿದು ಮತ್ತೊಂದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು. ಬಳಿಕ ಮತ್ತೊಂದು ಶ್ವಾನದ ಸೆರೆಗೆ ಹೋದಾಗ ದಾಳಿ ನಡೆಸಿದ್ದಾರೆ. ಮಾತ್ರವಲ್ಲದೇ ಸೆರೆ ಹಿಡಿಯಲಾದ ನಾಯಿಯನ್ನು ಶಾಲಾ ಆವರಣದಲ್ಲೇ ಹೊರ ಕಳುಹಿಸಿ, ವ್ಯಾನ್ ಧ್ವಂಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
==ಇನ್ನು 22 ಭಾಷೆಗಳಿಗೂ ಸಂಸತ್ ಕಲಾಪದ ಮಾಹಿತಿ ಭಾಷಾಂತರ
ನವದೆಹಲಿ: ಇನ್ನು ಮುಂದೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾಗಿರುವ ಎಲ್ಲಾ 22 ಭಾಷೆಗಳಿಗೆ ಸಂಸತ್ತಿನ ಕಲಾಪಗಳು ಭಾಷಾಂತರಗೊಳ್ಳಲಿವೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಘೋಷಿಸಿದ್ದಾರೆ. ಇಲ್ಲಿಯ ತನಕ ಇಂಗ್ಲಿಷ್, ಹಿಂದಿ ಹಾಗೂ ಕನ್ನಡ, ತಮಿಳು, ತೆಲಗು ಸೇರಿ 18 ಭಾಷೆಗಳಿಗೆ ಮಾತ್ರ ಕಲಾಪ ಭಾಷಾಂತರಗೊಳ್ಳುತ್ತಿತ್ತು. ಇದೀಗ ಆ ಪಟ್ಟಿಗೆ ಕಾಶ್ಮೀರಿ, ಕೊಂಕಣಿ, ಸಂತಾಲಿ ಭಾಷೆಗಳೂ ಸೇರ್ಪಡೆಯಾಗಿವೆ. ಈ ಮೂಲಕ ಕಲಾಪಗಳು ಏಕಕಾಲಕ್ಕೆ 22 ಭಾಷೆಗಳಿಗೆ ಭಾಷಾಂತರಗೊಳ್ಳುವ ಜಗತ್ತಿನ ಏಕಮಾತ್ರ ಸಂಸತ್ತು ಎಂಬ ಹೆಗ್ಗಳಿಕೆಗೆ ಭಾರತದ ಸಂಸತ್ತು ಪಾತ್ರವಾಗಲಿದೆ.