ಇನ್ನು ರೈಲುಗಳಲ್ಲೂ ವಿಮಾನದ ಮಾದರಿ ಲಗೇಜ್‌ ತೂಕಕ್ಕೆ ಮಿತಿ!

| Published : Aug 20 2025, 02:00 AM IST

ಇನ್ನು ರೈಲುಗಳಲ್ಲೂ ವಿಮಾನದ ಮಾದರಿ ಲಗೇಜ್‌ ತೂಕಕ್ಕೆ ಮಿತಿ!
Share this Article
  • FB
  • TW
  • Linkdin
  • Email

ಸಾರಾಂಶ

ಆದಾಯ ಸಂಗ್ರಹಕ್ಕೆ ನಾನಾ ಹೊಸ ಮೂಲ ಹುಡುಕುತ್ತಿರುವ ಭಾರತೀಯ ರೈಲ್ವೆ ಇದೀಗ ಪ್ರಯಾಣಿಕರ ಲಗೇಜ್‌ ಮೇಲೂ ಶುಲ್ಕ ಹೇರಲು ಮುಂದಾಗಿದೆ.

- ನಿಗದಿತ ಮಿತಿಗಿಂತ ತೂಕ ಹೆಚ್ಚಿದ್ದರೆ ಅಧಿಕ ಶುಲ್ಕ ಕಟ್ಟಬೇಕು

- ಮೊದಲಿಗೆ ಪ್ರಯಾಗ್‌ರಾಜ್‌ ನಿಲ್ದಾಣದಲ್ಲಿ ಯೋಜನೆ ಜಾರಿ----

- ವಿವಿಧ ಕೋಚ್‌ಗಳ ಶ್ರೇಣಿಗಳ ಆಧಾರದ ಮೇಲೆ ಲಗೇಜ್‌ ತೂಕದ ಮಿತಿ ನಿಗದಿ

- ಎಸಿ 1 ಟೈರ್‌ಗೆ 70 ಕೇಜಿ, ಟೈರ್‌ 2ಗೆ 50 ಕೇಜಿ, ಟೈರ್‌ 3ಗೆ ಸ್ಲೀಪರ್‌ 40 ಕೇಜಿ

- ಜನರಲ್‌ ಕೋಚ್‌ಗೆ 35 ಕೇಜಿ ತೂಕದ ಮಿತಿ । ಸದ್ಯ ಪ್ರಾಯೋಗಿಕ ಅನುಷ್ಠಾನ

- ಎಲೆಕ್ಟ್ರಾನಿಕ್‌ ತಕ್ಕಡಿ ಇರಿಸಿ, ಲಗೇಜು ತೂಕ ಹಾಕಿದ ಬಳಿಕವೇ ಪ್ರವೇಶಾವಕಾಶ

- ಏರ್ಪೋರ್ಟ್‌ ಬೋರ್ಡಿಂಗ್‌ ಪಾಸ್‌ ರೀತಿ ನಿಲ್ದಾಣ ಪ್ರವೇಶಕ್ಕೆ ವಿಸಿಟರ್‌ ಪಾಸ್‌ ಕಡ್ಡಾಯ

- ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಇದರ ಪ್ರಯೋಗ ಆಧರಿಸಿ ದೇಶಾದ್ಯಂತ ಜಾರಿ

---

ನವದೆಹಲಿ: ಆದಾಯ ಸಂಗ್ರಹಕ್ಕೆ ನಾನಾ ಹೊಸ ಮೂಲ ಹುಡುಕುತ್ತಿರುವ ಭಾರತೀಯ ರೈಲ್ವೆ ಇದೀಗ ಪ್ರಯಾಣಿಕರ ಲಗೇಜ್‌ ಮೇಲೂ ಶುಲ್ಕ ಹೇರಲು ಮುಂದಾಗಿದೆ. ವಿಮಾನಗಳ ರೀತಿಯಲ್ಲೇ ನಿಗದಿಗಿಂತ ಹೆಚ್ಚಿನ ಲಗೇಜ್‌ ಹೊಂದಿದ್ದರೆ ಅದಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲು ರೈಲ್ವೆ ನಿರ್ಧರಿಸಿದೆ. ಯಾವ ಮಾದರಿಯ ಟಿಕೆಟ್‌ ಪಡೆದವರು ಎಷ್ಟು ಲಗೇಜ್‌ ಕೊಂಡೊಯ್ಯಬಹುದು ಎಂಬ ಬಗ್ಗೆ ರೈಲ್ವೆ ಮಾಹಿತಿ ನೀಡಿದೆಯಾದರೂ, ಅದು ಮೀರಿದರೆ ಎಷ್ಟು ಶುಲ್ಕ ಕಟ್ಟಬೇಕು ಎಂಬ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.

ಈ ನಡುವೆ ರೈಲ್ವೆ ಇಲಾಖೆಯ ನಿರ್ಧಾರವನ್ನು ಸಮಾಜವಾದಿ ಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ನಾಯಕರು ಕಟುವಾಗಿ ಟೀಕಿಸಿದ್ದಾರೆ.

ಲಗೇಜ್‌ ಮಿತಿ:

ವಿವಿಧ ಕೋಚ್‌ಗಳ ಆಧಾರದ ಮೇಲೆ ತೂಕವನ್ನು ನಿಗದಿಪಡಿಸಲಾಗಿದೆ. ಅದರನ್ವಯ, ಏಸಿ 1 ಟೈರ್‌ಗೆ 70 ಕೇಜಿ, ಏಸಿ 2 ಟೈರ್‌ಗೆ 50 ಕೇಜಿ, ಏಸಿ 3 ಟೈರ್‌ ಮತ್ತು ಸ್ಲೀಪರ್‌ ಕ್ಲಾಸ್‌ಗೆ 40 ಕೇಜಿ ಮತ್ತು ಜನರಲ್‌ ಬೋಗಿಗೆ 35 ಕೇಜಿ ಮಿತಿ ನಿಗದಿಪಡಿಸಲಾಗಿದೆ. ಲಗೇಜ್‌ ತೂಕ ಮಾಡಲು ಪ್ರತಿ ಪ್ರಮುಖ ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್‌ ತಕ್ಕಡಿ ಇರಿಸಿ, ಲಗೇಜು ತೂಕ ಹಾಕಿದ ಬಳಿಕವೇ ನಿಲ್ದಾಣಕ್ಕೆ ಬರುವ ರೀತಿ ವ್ಯವಸ್ಥೆ ಮಾಡಲಾಗುವುದು. ಒಂದು ಲಗೇಜ್‌ನ ತೂಕ ನಿಗದಿತ ಮಿತಿಯೊಳಗೆ ಇದ್ದರೂ ಅದರ ಗಾತ್ರ ಹೆಚ್ಚಿದ್ದರೂ ಅದಕ್ಕೂ ಹೆಚ್ಚುವರಿ ಶುಲ್ಕ ಹಾಕಲಾಗುವುದು. ಉತ್ತರ ಪ್ರದೇಶದ ಉತ್ತರ ಕೇಂದ್ರ ರೈಲ್ವೆ ವಲಯದ ಪ್ರಯಾಗರಾಜ್‌ ವಿಭಾಗದಲ್ಲಿ ಇದನ್ನು ಮೊದಲು ಜಾರಿಗೆ ತರಲಾಗುತ್ತದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಸಿಟರ್‌ ಪಾಸ್‌ ಇದ್ದರಷ್ಟೇ ಪ್ರವೇಶ:

ಬೋರ್ಡಿಂಗ್‌ ಪಾಸ್‌ ಇಲ್ಲದಿದ್ದರೆ ವಿಮಾನ ನಿಲ್ದಾಣಕ್ಕೆ ಹೇಗೆ ಪ್ರವೇಶವಿಲ್ಲವೋ, ಅದೇ ರೀತಿ ಟಿಕೆಟ್‌/ವಿಸಿಟರ್‌ ಪಾಸ್‌ ಇಲ್ಲದಿದ್ದರೆ, ರೈಲು ನಿಲ್ದಾಣಕ್ಕೆ ಪ್ರವೇಶ ನಿರಾಕರಿಸುವ ರೀತಿ ಪ್ರಯಾಗರಾಜ್‌ನಲ್ಲಿ ಪ್ರಯೋಗ ನಡೆದಿದೆ. ರೈಲು ಟಿಕೆಟ್ ಇದ್ದರಷ್ಟೇ ಟರ್ಮಿನಲ್‌ ಒಳಗೆ ಪ್ರವೇಶವಿರಲಿದ್ದು, ಪ್ರಯಾಣ ಮಾಡದಿರುವವರು ವಿಸಿಟರ್‌ ಪಾಸ್‌ ಪಡೆಯಬೇಕಿದೆ.