ವೈದ್ಯಕೀಯ, ಉನ್ನತ ವ್ಯಾಸಂಗ ಮಾಡುವ ಬಡವಿದ್ಯಾರ್ಥಿಗಳಿಗೆ ಶುಲ್ಕ ಇಳಿಸಿ: ಎಸ್.ಸಚ್ಚಿದಾನಂದ

| Published : Jul 31 2025, 12:45 AM IST

ವೈದ್ಯಕೀಯ, ಉನ್ನತ ವ್ಯಾಸಂಗ ಮಾಡುವ ಬಡವಿದ್ಯಾರ್ಥಿಗಳಿಗೆ ಶುಲ್ಕ ಇಳಿಸಿ: ಎಸ್.ಸಚ್ಚಿದಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ಕ್ಷೇತ್ರದ ಯಾವುದೇ ಗ್ರಾಮಗಳ ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್‌ಗೆ ಆಯ್ಕೆಯಾಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಉಚಿತ, ಉತ್ತಮ ದರ್ಜೆಯ ಲ್ಯಾಪ್‌ಟಾಪ್ ನೀಡಲಾಗುತ್ತದೆ. ಅಂತಹವರು ನೇರವಾಗಿ ನನ್ನನ್ನು ಸಂಪರ್ಕಿಸಬಹುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವೈದ್ಯಕೀಯ ಸೇರಿದಂತೆ ಉನ್ನತ ಮಟ್ಟದ ವ್ಯಾಸಂಗ ಮಾಡಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶುಲ್ಕ ದುಬಾರಿಯಾಗಿದೆ. ಸರ್ಕಾರ ಶುಲ್ಕದ ಪ್ರಮಾಣ ಇಳಿಸಬೇಕು ಎಂದು ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಒತ್ತಾಯಿಸಿದರು.

ತಾಲೂಕಿನ ಪಾಲಹಳ್ಳಿಯಲ್ಲಿ ಮೆರಿಟ್ ಆಧಾರದ ಮೇಲೆ ವೈದ್ಯಕೀಯ ಶಿಕ್ಷಣ ಕೋರ್ಸ್‌ಗೆ ಉಚಿತ ಸರ್ಕಾರಿ ಸೀಟು ಪಡೆದು 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಯತೀಂದ್ರ ಮುಕುಂದ ಮತ್ತು ಎನ್.ದಿಶಾ ಅವರಿಗೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್ ವಿತರಿಸಿ ಅಭಿನಂದಿಸಿ ಮಾತನಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳು ಮೆರಿಟ್ ಆಧಾರದ ಮೇಲೆ ಸರ್ಕಾರಿ ಕೋಟಾದಲ್ಲಿ ಎಂಬಿಬಿಸ್, ಎಂಜಿನಿಯರಿಂಗ್ ನಂತಹ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಗೆ ಸೀಟು ಪಡೆದರೂ ಸಹ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಶುಲ್ಕ ಭರಿಸಲು ಕಷ್ಟವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಶ್ರೀರಂಗಪಟ್ಟಣ ಕ್ಷೇತ್ರದ ಯಾವುದೇ ಗ್ರಾಮಗಳ ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್‌ಗೆ ಆಯ್ಕೆಯಾಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಉಚಿತ, ಉತ್ತಮ ದರ್ಜೆಯ ಲ್ಯಾಪ್‌ಟಾಪ್ ನೀಡಲಾಗುತ್ತದೆ. ಅಂತಹವರು ನೇರವಾಗಿ ನನ್ನನ್ನು ಸಂಪರ್ಕಿಸಬಹುದು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರೇಗೌಡ ಮಾತನಾಡಿ, ಇಂಡುವಾಳು ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಹಲವು ವರ್ಷಗಳಿಂದ ಹತ್ತಾರು ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿದೆ. ಇದೀಗ ಉನ್ನತ ಮಟ್ಟದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತವಾಗಿ ಲ್ಯಾಪ್‌ಟಾಪ್ ನೀಡುವ ಜೊತೆಗೆ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕುಸ್ತಿಪಟು ಪೈ.ಮುಕುಂದ, ಪಿಎಸಿಎಸ್ ಮಾಜಿ ಅಧ್ಯಕ್ಷ ನಾಗರಾಜು, ಗ್ರಾಪಂ ಸದಸ್ಯರಾದ ಟೆಂಪೊ ಪ್ರಕಾಶ್, ರೇಖಾ, ಗಾಯತ್ರಿ, ಲೋಕೇಶ್, ಮಂಜುಳಾ, ಮಾಜಿ ಸದಸ್ಯ ಗಿರೀಶ್, ಮುಖಂಡರಾದ ಪಿ.ಎಚ್. ಚಂದ್ರಶೇಖರ್, ಸುಖೇಶ್, ಶೇಖರ್, ಯಜಮಾನ್ ಶ್ರೀಧರ್, ಪೈ.ಉಮೇಶ್, ಸಂಜೀವಣ್ಣ, ಪ್ರಗತಿ ಪರ ರೈತ ರೇಡಿಯೋ ರಮೇಶ್ ಸೇರಿದಂತೆ ಇತರರು ಇದ್ದರು.