ಸಂಗ್ರಹಿಸಿದ ಶುಲ್ಕ ಬೀದಿ ಬದಿ ವ್ಯಾಪಾರಸ್ಥರಿಗೆ ಸದ್ಬಳಕೆಯಾಗಲಿ-ಸಚಿವ ಎಚ್‌.ಕೆ. ಪಾಟೀಲ

| Published : Aug 04 2025, 12:30 AM IST

ಸಂಗ್ರಹಿಸಿದ ಶುಲ್ಕ ಬೀದಿ ಬದಿ ವ್ಯಾಪಾರಸ್ಥರಿಗೆ ಸದ್ಬಳಕೆಯಾಗಲಿ-ಸಚಿವ ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಕಾನೂನು ಹಾಗೂ ಮಾರ್ಗಸೂಚಿಯನ್ವಯ ಬೀದಿ ಬದಿ ವ್ಯಾಪಾರಸ್ಥರಿಂದ ಸಂಗ್ರಹಿಸುವ ಶುಲ್ಕ ನಿಗದಿತವಾಗಿರಲಿ. ಸಂಗ್ರಹಿಸಿದ ಶುಲ್ಕ ಪುನಃ ಬೀದಿ ಬದಿ ವ್ಯಾಪಾರಸ್ಥರಿಗೆ ಸದ್ಬಳಕೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಸರ್ಕಾರದ ಕಾನೂನು ಹಾಗೂ ಮಾರ್ಗಸೂಚಿಯನ್ವಯ ಬೀದಿ ಬದಿ ವ್ಯಾಪಾರಸ್ಥರಿಂದ ಸಂಗ್ರಹಿಸುವ ಶುಲ್ಕ ನಿಗದಿತವಾಗಿರಲಿ. ಸಂಗ್ರಹಿಸಿದ ಶುಲ್ಕ ಪುನಃ ಬೀದಿ ಬದಿ ವ್ಯಾಪಾರಸ್ಥರಿಗೆ ಸದ್ಬಳಕೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶನಿವಾರ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾದ ಗದಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೀದಿ ಬದಿ ವ್ಯಾಪಾರಸ್ಥರಿಂದ ಸಂಗ್ರಹಿಸಿದ ಶುಲ್ಕ ಮತ್ತು ಹಣದ ಕ್ರೋಢೀಕರಣ ಸರಿಯಾಗಿ ಸದ್ಬಳಕೆಯಾಗುತ್ತಿಲ್ಲವೆಂದು ದೂರುಗಳು ಬರುತ್ತಿವೆ. ಸರ್ಕಾರದ ಮಾರ್ಗಸೂಚಿಗಳನ್ವಯ ಸಂಗ್ರಹಿಸಿದ ಶುಲ್ಕದ ಮೊತ್ತ ಸರಿಯಾಗಿ ಅರ್ಹರಿಗೆ ಸದ್ಬಳಕೆಯಾಗಬೇಕು ಎಂದರು.

ಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ತಮ್ಮ ಹಲವಾರು ಸಮಸ್ಯೆಗಳ ಕುರಿತು ಹಾಗೂ ಶುಲ್ಕ ಸಂಗ್ರಹಣೆ ಕುರಿತು ಸಮಿತಿ ರಚಿಸುವ ಕುರಿತು ಸಚಿವ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ ಜಿಲ್ಲಾಧಿಕಾರಿಗಳ ಮೂಲಕ ಬೀದಿಬದಿ ವ್ಯಾಪಾರಸ್ಥರ ಶುಲ್ಕ ಸಂಗ್ರಹಣೆ ಹಾಗೂ ಸಂಗ್ರಹಿಸಿದ ಶುಲ್ಕ ಸದ್ಬಳಕೆ ಮಾಡುವ ಕುರಿತಂತೆ ಸರ್ಕಾರದ ಸಂಪೂರ್ಣ ಮಾರ್ಗಸೂಚಿಗಳೊಂದಿಗೆ ಜಿಲ್ಲೆಯ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ತಿಳಿಸುವ ಸೂಚನೆ ನೀಡಿದರು.

ಅಲ್ಲದೇ ಪಟ್ಟಣ ಮೇಲುಸ್ತುವಾರಿ ಸಮಿತಿ ಸಭೆಯನ್ನು 2-3 ದಿನಗಳೊಳಗಾಗಿ, ಕುಂದುಕೊರತೆ ಸಮಿತಿ ಮತ್ತು ಟಿವಿಸಿ ಸಮಿತಿ ಸಭೆಯನ್ನು 5 ದಿನಗಳೊಳಗಾಗಿ ರಚಿಸುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸಚಿವರು ಸೂಚಿಸಿದರು.

ಬೀದಿ ಬದಿ ವ್ಯಾಪಾರಸ್ಥರೂ ಸಹ ಗೌರವಯುತವಾಗಿ ಸಮಾಜದಲ್ಲಿ ಎಲ್ಲರಂತೆ ಜೀವನ ಸಾಗಿಸಬೇಕು. ಇದಕ್ಕಾಗಿ ಈಗಾಗಲೇ ಗದಗಿನಲ್ಲಿ ವ್ಯಾಪಾರಸ್ಥರಿಗೆ ತಳ್ಳುವ ಹೈಟೆಕ್ ಗಾಡಿ, ನೆರಳಿಗಾಗಿ ಕೊಡೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ. ಇವುಗಳ ಸದ್ಬಳಕೆಯೊಂದಿಗೆ ಆರ್ಥಿಕವಾಗಿ ಬೀದಿ ಬದಿ ವ್ಯಾಪಾರಸ್ಥರು ಸಹ ಸಬಲರಾಗಬೇಕು ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಸರ್ಕಾರಿ ಕಚೇರಿಗೆ ಅಧಿಕಾರಿಗಳನ್ನು ಭೇಟಿ ಮಾಡಲು ಬಂದಾಗ ಅಧಿಕಾರಿಗಳು ಅವರೊಂದಿಗೆ ಸಂಯಮದಿಂದ ಗೌರವಯುತವಾಗಿ ನಡೆದುಕೊಳ್ಳಬೇಕು. ಯಾವುದೇ ತರಹದ ದರ್ಪ, ಕಠೋರ ವರ್ತನೆ ಸಹಿಸಲಾಗದು ಎಂದರು.

ಬೀದಿ ಬದಿ ವ್ಯಾಪಾರಸ್ಥರಿಗಾಗಿಯೇ ಕಾನೂನು ರೂಪಿಸಲಾಗಿದೆ. ಕಾನೂನು ರಾಜ್ಯದಲ್ಲಿ ಜಾರಿಯಾಗಲು ವಿಳಂಬವಾಗಿರಬಹುದು. ಆದರೆ ಗದಗ ಜಿಲ್ಲೆಯಲ್ಲಿ ಕಾನೂನು ಅನುಷ್ಟಾನ ಆಗಬೇಕು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ಡಿಸಿ ಸಿ.ಎನ್.ಶ್ರೀಧರ್, ಜಿಪಂ ಸಿಇಓ ಭರತ್ ಎಸ್, ಎಸ್ಪಿ ರೋಹನ್ ಜಗದೀಶ, ಎಡಿಸಿ ಡಾ. ದುರುಗೇಶ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಬಸವರಾಜ ಮಲ್ಲೂರ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಬೀದಿ ಬದಿ ವ್ಯಾಪಾರಸ್ಥರ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.