ಯುದ್ಧದ ನಡುವೆ ಅಮೆರಿಕ ಡೂಮ್ಸ್‌ಡೇ ಕ್ಷಿಪಣಿ ಪರೀಕ್ಷೆ

KannadaprabhaNewsNetwork |  
Published : Mar 06, 2026, 02:00 AM IST
ಅಮೆರಿಕ | Kannada Prabha

ಸಾರಾಂಶ

ಇರಾನ್ ಜತೆಗಿನ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ ವಿಶ್ವದ ಯಾವುದೇ ಮೂಲೆ ತಲುಪಬಲ್ಲ ಸಾಮರ್ಥ್ಯದ ಡೂಮ್ಸ್‌ಡೇ ಮಿಸೈಲ್‌ (ವಿನಾಶದ ಕ್ಷಿಪಣಿ)ನ ಪರೀಕ್ಷೆಯನ್ನು ಅಮೆರಿಕ ನಡೆಸಿದೆ. ಮಿಂಟೆಮನ್‌-3 ಹೆಸರಿನ ಈ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ, ಅಣ್ವಸ್ತ್ರ ಹೊಂದಲು ಬಯಸುತ್ತಿರುವ ಇರಾನ್‌ಗೆ ನೀಡಿದ ನೇರ ಸಂದೇಶ ಎಂದು ವಿಶ್ಲೇಷಿಸಲಾಗಿದೆ.

- ಭಾರೀ ಅಣ್ವಸ್ತ್ರ ಹೊತ್ತು ವಿಶ್ವದ ಯಾವುದೇ ಮೂಲೆಗೆ ತಲುಪಬಲ್ಲ ಶಕ್ತಿ

- 24000 ಕಿ.ಮೀ. ವೇಗದಲ್ಲಿ 9600 ಕಿ.ಮೀ ದೂರ ಸಾಗಬಲ್ಲ ಸಾಮರ್ಥ್ಯ==

ನವದೆಹಲಿ: ಇರಾನ್ ಜತೆಗಿನ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ ವಿಶ್ವದ ಯಾವುದೇ ಮೂಲೆ ತಲುಪಬಲ್ಲ ಸಾಮರ್ಥ್ಯದ ಡೂಮ್ಸ್‌ಡೇ ಮಿಸೈಲ್‌ (ವಿನಾಶದ ಕ್ಷಿಪಣಿ)ನ ಪರೀಕ್ಷೆಯನ್ನು ಅಮೆರಿಕ ನಡೆಸಿದೆ. ಮಿಂಟೆಮನ್‌-3 ಹೆಸರಿನ ಈ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ, ಅಣ್ವಸ್ತ್ರ ಹೊಂದಲು ಬಯಸುತ್ತಿರುವ ಇರಾನ್‌ಗೆ ನೀಡಿದ ನೇರ ಸಂದೇಶ ಎಂದು ವಿಶ್ಲೇಷಿಸಲಾಗಿದೆ.

ಕ್ಯಾಲಿಫೋರ್ನಿಯಾದ ವಂಡೆನ್‌ಬರ್ಗ್‌ ಸ್ಪೇಸ್‌ ಫೋರ್ಸ್‌ ಬೇಸ್‌ನಲ್ಲಿ ಈ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು, ಮಾರ್ಷಲ್‌ ದ್ವೀಪದಲ್ಲಿರುವ ಕ್ವಾಜಲಿನ್‌ ಅಟೋಲ್‌ನ ಪೂರ್ವ ನಿರ್ಧರಿತ ಗುರಿಯನ್ನು ಭೇದಿಸುವ ಮೊದಲು ಈ ಕ್ಷಿಪಣಿ 6,700 ಕಿ.ಮೀ.ಗಿಂತಲೂ ಹೆಚ್ಚು ದೂರ ಕ್ರಮಿಸಿದೆ.

ಹಲವು ವರ್ಷಗಳ ಹಿಂದೆಯೇ ಈ ಪ್ರಯೋಗ ನಡೆಯಬೇಕಿತ್ತು. ಆದರೆ, ಸಮಯ-ಸಂದರ್ಭ ಕೂಡಿಬಂದಿರಲಿಲ್ಲ. ಇರಾನ್‌ ಯುದ್ಧಕ್ಕೂ ಈ ಕ್ಷಿಪಣಿ ಪರೀಕ್ಷೆಗೂ ಯಾವುದೇ ಸಂಬಂಧ ಇಲ್ಲ ಎಂದು ಅಮೆರಿಕ ಹೇಳಿಕೊಂಡಿದೆ.

ಮಿಂಟೆಮನ್‌-3 ಕ್ಷಿಪಣಿ

ಎಲ್‌ಜಿಎಂ-30ಜಿ ಮಿಂಟೆಮನ್‌-3 ಅಣ್ವಸ್ತ್ರ ಹೊತ್ತೊಯ್ಯಬಲ್ಲ ಖಂಡಾಂತರ ಬ್ಯಾಲಿಸ್ಟಿಕ್‌ ಕ್ಷಿಪಣಿಯಾಗಿದೆ. ಹಿರೋಶಿಮಾಗೆ ಹಾಕಲಾದ ಅಣುಬಾಂಬ್‌ಗಿಂತ 20 ಪಟ್ಟು ಹೆಚ್ಚು ಶಕ್ತಿಶಾಲಿ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಕ್ಷಿಪಣಿಗಿದೆ. ಇದು ನೆಲದಿಂದ ಹಾರಿಸಬಹುದಾದ ಕ್ಷಿಪಣಿ. ಇದನ್ನು ಬೋಯಿಂಗ್‌ ಕಂಪನಿ 1950ರಲ್ಲಿ ಮೊದಲ ಬಾರಿಗೆ ಅಭಿವೃದ್ಧಿಪಡಿಸಿತ್ತು. ಮ್ಯಾಕ್‌ 23 ಅಂದರೆ ಗಂಟೆಗೆ 28,400 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ 9,600 ಕಿ.ಮೀ.ಗೂ ದೂರ ಕ್ರಮಿಸಬಲ್ಲದು. ಶೇಷವೆಂದರೆ ಈ ಕ್ಷಿಪಣಿ ಈವರೆಗೆ ನೈಜ ಯುದ್ಧದ ಸನ್ನಿವೇಶದಲ್ಲಿ ಬಳಕೆಯೇ ಆಗಿಲ್ಲ.

==

ಡೂಮ್ಸ್‌ಡೇ ಕ್ಷಿಪಣಿ ಅನ್ನೋದ್ಯಾಕೆ?

ಇದು ಅಮೆರಿಕದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಅಂದರೆ ಅಣ್ವಸ್ತ್ರ ಸಮರದಂಥ ವಿನಾಶಕಾಲದ ವೇಳೆಗೆ ಬಳಸುವ ಕ್ಷಿಪಣಿಯಾಗಿದೆ. ಇದೇ ಕಾರಣಕ್ಕೆ ಇದಕ್ಕೆ ಡೂಮ್ಸ್‌ಡೇ ಕ್ಷಿಪಣಿ ಎಂಬ ಹೆಸರು ಬಂದಿದೆ. ಈ ಹಿಂದಿನ ಕ್ಷಿಪಣಿಗಳು ಲಿಕ್ವಿಡ್‌ ಇಂಧನ(ಲಿಕ್ವಿಡ್‌ ಫ್ಯುಯೆಲ್‌)ದ ರಾಕೆಟ್‌ ಎಂಜಿನ್‌ ಹೊಂದಿದ್ದರೆ, ಇದು ಸಾಲಿಡ್‌ ಫ್ಯುಯೆಲ್‌ ಎಂಜಿನ್‌ನ ಕ್ಷಿಪಣಿಯಾಗಿದೆ. ಹೀಗಾಗಿ ಈ ಕ್ಷಿಪಣಿ ಹಾರಿಸಲು ಹೆಚ್ಚು ಸಮಯ ಬೇಕಿಲ್ಲ. ಭಾರೀ ಪ್ರಮಾಣದ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಕಾರಣ ಶತ್ರುದೇಶಗಳ ಮೇಲೆ ಕಂಡು ಕೇಳರಿಯದ ಹಾನಿ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

==

ಹೇಗೆ ಕೆಲಸ ಮಾಡುತ್ತೆ?

ರಾಕೆಟ್‌ ಮಾದರಿಯ ಈ ಕ್ಷಿಪಣಿ ಹಾರಿಬಿಟ್ಟ ಕೆಲವೇ ಕ್ಷಣಗಳಲ್ಲಿ ಭೂಮಿ ಮೇಲ್ಮೈ ವಾತಾವರಣ ದಾಟಿ ಸಾಗುತ್ತದೆ. ಆ ಬಳಿಕ ವಿವಿಧ ಹಂತಗಳಲ್ಲಿ ಇಂಧನ ದಹಿಸಿಕೊಂಡು ಮುಂದೆ ಸಾಗುತ್ತದೆ. ರಾಕೆಟ್‌ ಹೇಗೆ ತನ್ನ ಇಂಧನ ಖಾಲಿಯಾದ ಬಳಿಕ ಒಂದೊಂದೇ ಟ್ಯಾಂಕ್‌ ಅನ್ನು ಕಳಚಿ ಮುಂದೆ ಸಾಗುತ್ತದೆಯೋ ಅದೇ ರೀತಿ ಈ ಕ್ಷಿಪಣಿಯೂ ಸಾಗುತ್ತದೆ. ಆ ಬಳಿಕ ಭೂ ವಾತಾವರಣವನ್ನು ಮರುಪ್ರವೇಶಿಸಿ ಮ್ಯಾಕ್‌ 23 ವೇಗದಲ್ಲಿ ಗುರಿಯತ್ತ ಮುನ್ನುಗ್ಗುತ್ತದೆ. ಈ ಕ್ಷಿಪಣಿಗೆ ಗುರಿ ತಲುಪಲು ಕೇವಲ ಅರ್ಧಗಂಟೆ ಸಾಕು. ಹೀಗಾಗಿ ಈ ಕ್ಷಿಪಣಿ ಹೊಡೆದುರುಳಿಸುವುದು ಕಷ್ಟ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2028ರಿಂದ ವೆಹಿಕಲ್‌ ಟು ವೆಹಿಕಲ್‌ ಸಂವಹನ ವ್ಯವಸ್ಥೆ ಕಡ್ಡಾಯ ಜಾರಿ
2,000 ರು,ಗಿಂತ ಮೇಲ್ಪಟ್ಟ ಯುಪಿಐ ಪಾವತಿಗಳ ಮೇಲೆ ಶುಲ್ಕ ಸಂಭವ