ನ್ಯೂಯಾರ್ಕ್/ವಾಷಿಂಗ್ಟನ್ : ತೆರಿಗೆ ಅಸ್ತ್ರ ತೋರಿಸಿ ಭಾರತ ಸೇರಿದಂತೆ ತನ್ನ ಹಲವು ವ್ಯಾಪಾರ ಪಾಲುದಾರ ದೇಶಗಳನ್ನು ಕುಣಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಸಂಜೆ (ಅಮೆರಿಕದ ಸಮಯ) ಅಧಿಕೃತವಾಗಿ ತೆರಿಗೆ ಆದೇಶಕ್ಕೆ ಅಂಕಿತ ಹಾಕಿದ್ದಾರೆ. ಭಾರತದ ಮೇಲೆ ಶೇ.25ರಷ್ಟು ಸುಂಕ ವಿಧಿಸಲಾಗಿದ್ದು, ಇದು ಆ.7ರಿಂದ ತೆರಿಗೆ ಜಾರಿಯಾಗಲಿದೆ. ಇದರಿಂದ, ಅನೇಕ ದೇಶಗಳ ಪಾಲಿಗೆ ಅಮೆರಿಕದೊಂಂದಿಗಿನ ವ್ಯಾಪಾರ ದುಬಾರಿಯಾಗಿ ಪರಿಣಮಿಸಲಿದೆ ಹಾಗೂ 7.48 ಲಕ್ಷ ಕೋಟಿ ರು. ರಫ್ತಿನ ಮೇಲೆ ಪರಿಣಾಮ ಸಾಧ್ಯತೆ ಇದೆ. ಭಾರತವು ಅಮೆರಿಕಕ್ಕೆ ಕಳಿಸುವ ಎಲೆಕ್ಟ್ರಾನಿಕ್ ಉಪಕರಣಗಳು, ವಾಹನದ ಬಿಡಿಭಾಗಗಳು, ಅಮೂಲ್ಯ ರತ್ನಗಳು, ಜವಳಿ, ಕಬ್ಬಿಣ, ಸ್ಟೀಲ್, ಕೃಷಿ ಮತ್ತು ಸಾಗರ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆಗಳಲ್ಲಿ ತುಟ್ಟಿಯಾಗಲಿವೆ.
ತೆರಿಗೆ ಆದೇಶದ ಬೆನ್ನಲ್ಲೇ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ) ಮಹಾನಿರ್ದೇಶಕ ಅಜಯ್ ಸಹಾಯ್ ಮಾತನಾಡಿ, ‘ಆ.7ರೊಳಗೆ ಅಮೆರಿಕ ತಲುಪಲಿರುವ ಮತ್ತು ಈಗಾಗಲೇ ಹಡಗಿನಲ್ಲಿ ಲೋಡ್ ಮಾಡಲಾದ ಸರಕುಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ಅ.5ರ ವರೆಗೆ ಅಲ್ಲಿನ ಮಾರುಕಟ್ಟೆ ಪ್ರವೇಶಕ್ಕೆ ಅನುಮತಿ ಪಡೆದಿರುವ ವಸ್ತುಗಳಿಗೂ ಹೊಸ ತೆರಿಗೆ ಅನ್ವಯಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ತೆರಿಗೆ ಹೇರಿಕೆಯಿಂದ ಏನಾಗಲಿದೆ?: ತೆರಿಗೆಗೆ ಒಳಪಟ್ಟ ದೇಶದಿಂದ ಆಮದಾಗುವ ವಸ್ತುಗಳು ಅಮೆರಿಕನ್ನರ ಪಾಲಿಗೆ ದುಬಾರಿಯಾಗಲಿದೆ. ಇದರಿಂದ ಕ್ರಮೇಣ ಅವುಗಳಿಗೆ ಬೇಡಿಕೆ ಕುಸಿಯತೊಡಗುತ್ತದೆ. ಪರಿಣಾಮವಾಗಿ, ರಫ್ತುದಾರ ದೇಶಗಳ ಉತ್ಪನ್ನಗಳನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಕೊಳ್ಳುವವರ ಸಂಖ್ಯೆ ಕ್ಷೀಣಿಸುವುದರಿಂದ, ಅವುಗಳು ಆರ್ಥಿಕವಾಗಿ ಪೆಟ್ಟು ತಿನ್ನುತ್ತವೆ. ಅಲ್ಲದೆ, ಭಾರತದ ಎಲ್ಲ ವಸ್ತುಗಳ ಮೇಲೆ ಸಮಾನ ತೆರಿಗೆ ಜಾರಿಯಾಗಲಿದೆ. ಯಾವುದೇ ಉತ್ಪನ್ನಕ್ಕೂ ಪ್ರತ್ಯೇಕವಾಗಿ ವಿನಾಯ್ತಿ ಇಲ್ಲ.
ಭಾರತದ ಮೇಲೇನು ಪರಿಣಾಮ: ‘ಭಾರತ ನಮ್ಮ ಮಿತ್ರ’ ಎನ್ನುತ್ತಲೇ, ‘ಅವರು ನಮ್ಮ ಮೇಲೆ ಅತ್ಯಧಿಕ ತೆರಿಗೆ ಹೇರುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸುವ ಟ್ರಂಪ್, ಇದೀಗ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಿದ್ದಾರೆ. ಇದರ ಜತೆಗೆ, ಹಲವು ಎಚ್ಚರಿಕೆಗಳ ಹೊರತಾಗಿಯೂ ತನ್ನ ಬದ್ಧವೈರಿ ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರವನ್ನು ತರಿಸಿಕೊಳ್ಳುವುದನ್ನು ಮುಂದುವರೆಸಿರುವುದಕ್ಕಾಗಿ ಹೆಚ್ಚುವರಿ ದಂಡ ವಿಧಿಸುವುದಾಗಿಯೂ ಹೇಳಿದ್ದರು. ಆದರೆ ಅದರ ಪ್ರಮಾಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಈ ಮೊದಲು, ಪ್ರತಿ ತೆರಿಗೆಯಾಗಿ ಭಾರತದ ಮೇಲೆ ಶೇ.26ರಷ್ಟು(ಶೇ.10 ಸಾಮಾನ್ಯ, ಶೇ.15 ಹೆಚ್ಚುವರಿ) ತೆರಿಗೆ ಹೇರುವುದಾಗಿ ಅಮೆರಿಕ ಘೋಷಿಸಿತ್ತು. ಆದರೆ ಬಳಿಕ ಅದಕ್ಕೆ 90 ದಿನಗಳ ತಡೆ ನೀಡಿ, ವ್ಯಾಪಾರ ಒಪ್ಪಂದಕ್ಕೆ ಅವಕಾಶ ನೀಡಿತ್ತು. ಅದರ ಮಾತುಕತೆ ಪ್ರಗತಿಯಲ್ಲಿದೆ. ಇದರ ಭಾಗವಾಗಿ ಆ.25ರಂದು ಅಮೆರಿಕದ ಅಧಿಕಾರಿಗಳು ಭಾರತಕ್ಕೆ ಬರಬೇಕಿದೆ. ಹೀಗಿರುವಾಗಲೇ, ಶೇ.25ರಷ್ಟು ತೆರಿಗೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಪಾಕಿಸ್ತಾನಕ್ಕೆ ಶೇ.19 ತೆರಿಗೆ
ಟ್ರಂಪ್ ಹೇರಿರುವ ತೆರಿಗೆ ಶೇ.10ರಿಂದ 40ರ ವ್ಯಾಪ್ತಿಯಲ್ಲಿದೆ. ಜಪಾನ್‌ಗೆ ಶೇ.15, ಲಾವೋಸ್ ಮತ್ತು ಮ್ಯಾನ್ಮಾರ್‌ಗೆ ಶೇ.40, ಕೆನಡಾಗೆ ಶೇ.35, ಪಾಕಿಸ್ತಾನಕ್ಕೆ ಶೇ.19, ಶ್ರೀಲಂಕಾಗೆ ಶೇ.20, ಬ್ರಿಟನ್‌ಗೆ ಶೇ.10 ಸುಂಕ ವಿಧಿಸಲಾಗಿದೆ. ಶೇ.19 ತೆರಿಗೆ ಹಾಕಿರುವುದಕ್ಕೆ ಪಾಕಿಸ್ತಾನ ಹರ್ಷ ವ್ಯಕ್ತಪಡಿಸಿದ್ದು, ಇದು ಸಮತೋಲಿತ ತೆರಿಗೆ ಎಂದಿದೆ.
ರಾಷ್ಟ್ರೀಯ ಹಿತಾಸಕ್ತಿಯಂತೆ ತೈಲ ಆಮದು: ಅಮೆರಿಕಕ್ಕೆ ಭಾರತ ತಿರುಗೇಟು
ನವದೆಹಲಿ : ‘ಭಾರತ ಮತ್ತು ಅಮೆರಿಕದ ಸಹಭಾಗಿತ್ವ ಹಲವಾರು ಪರಿವರ್ತನೆಗಳು ಮತ್ತು ಸವಾಲುಗಳನ್ನು ಸೃಷ್ಟಿಸಿದೆ. ನಮ್ಮ ಇಂಧನ ಭದ್ರತೆಗಾಗಿ, ಮಾರುಕಟ್ಟೆಯ ಲಭ್ಯತೆಯಂತೆ ನಾವು ಮುಂದುವರಿಯುತ್ತೇವೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ’ ಎಂದು ಭಾರತ ಸರ್ಕಾರ ತಿಳಿಸಿದೆ.
ಈ ಮೂಲಕ ರಷ್ಯಾ ಆಮದು ನಿಲ್ಲಿಸುವಂತೆ ಆಗ್ರಹಿಸಿ ಭಾರತದ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಿದ್ದಲ್ಲದೆ, ಭಾರತದ್ದು ‘ಮೃತ ಆರ್ಥಿಕತೆ’ ಎಂದು ಟೀಕಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟು ನೀಡಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂ ವಕ್ತಾರ ರಣಧೀರ್ ಜೈಸ್ವಾಲ್, ‘ನಮ್ಮ ಇಂಧನದ ಅವಶ್ಯಕತೆಗೆ ತಕ್ಕಂತೆ ನಾವು ಮಾರುಕಟ್ಟೆಯ ದರಗಳನ್ನು ನೋಡಿಕೊಂಡು ಖರೀದಿ ಮಾಡುತ್ತೇವೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿ ನಮಗೆ ಮುಖ್ಯ’ ಎಂದಿದ್ದಾರೆ. ಈ ಮೂಲಕ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆ ಆಗ್ರಹಿಸಿದ್ದ ಅಮೆರಿಕಕ್ಕೆ ತಕ್ಕ ಉತ್ತರ ನೀಡಿದ್ದಾರೆ.
‘ಭಾರತ ಹಾಗೂ ಅಮೆರಿಕ ಪರಸ್ಪರ ಹಿತಾಸಕ್ತಿ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ದೃಢವಾದ ಮಾನವ ಸಂಬಂಧಗಳಲ್ಲಿ ನೆಲೆಗೊಂಡಿರುವ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ. ಈ ಸಹಭಾಗಿತ್ವವು ಹಲವು ಪರಿವರ್ತನೆ ಹಾಗೂ ಸವಾಲುಗಳನ್ನು ಸೃಷ್ಟಿಸಿದೆ. ಎರಡೂ ದೇಶಗಳು ಬದ್ಧವಾಗಿರುವ ವಸ್ತುನಿಷ್ಠ ಕಾರ್ಯಸೂಚಿಯ ಮೇಲೆ ನಾವು ಗಮನ ಹರಿಸಿದ್ದೇವೆ. ಈ ಸಂಬಂಧ ಮುಂದುವರಿಯುತ್ತದೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
ಟ್ರಂಪ್ ತೆರಿಗೆ ಹೇರಿದ್ದರೂ ಭಾರತ ಅಭಾದಿತ: ಕೇಂದ್ರ ಸರ್ಕಾರ
ನವದೆಹಲಿ: ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ವಿಧಿಸಿರುವ ಶೇ.25ರಷ್ಟು ತೆರಿಗೆಯಿಂದ ಭಾರತದ ಆರ್ಥಿಕತೆಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಗೆ ಮೊದಲ ಆದ್ಯತೆ ನೀಡಲಿದೆ ಹಾಗೂ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಮೇಲಾಗುವ ದುಷ್ಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ ಅಧಿಕಾರಿಗಳು ಈ ಸ್ಪಷ್ಟೀಕರಣ ನೀಡಿದ್ದಾರೆ.
‘ಸರ್ಕಾರ ಸುತ್ತಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಯಾವುದೇ ಆತಂಕಕ್ಕೆ ಕಾರಣವಿಲ್ಲ. ಭಾರತದ ರಫ್ತು ಹಾಗೂ ಜಿಡಿಪಿ ಮೇಲೆ ಟ್ರಂಪ್ ತೆರಿಗೆ ಕನಿಷ್ಠ ಪರಿಣಾಮ ಬೀರಲಿದೆ. ಕೆಟ್ಟ ಸನ್ನಿವೇಶದಲ್ಲಿ, ಶೇ.0.2ಕ್ಕಿಂತ ಕಡಿಮೆ ಜಿಡಿಪಿ ನಷ್ಟ ಉಂಟಾಗಬಹುದು. ಆದರೆ ಇದನ್ನು ನಿರ್ವಹಿಸಬಹುದಾಗಿದೆ. ಕೃಷಿ, ಹೈನೋತ್ಪನ್ನ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಸೇರಿದಂತೆ ಪ್ರಮುಖ ಕ್ಷೇತ್ರಗಳೂ ತೆರಿಗೆಯಿಂದ ಅಭಾದಿತವಾಗಿರುತ್ತವೆ’ ಎಂದು ಅವರು ತಿಳಿಸಿದ್ದಾರೆ.
ರೈತರ ಹಿತಾಸಕ್ತಿ ಜತೆ ರಾಜಿಯಿಲ್ಲ:
‘ದೇಶದ ರೈತರ ಹಿತಾಸಕ್ತಿ ಅತಿ ಮುಖ್ಯ. ತಳೀಯ ಬೆಳೆಗಳನ್ನು ಆಮದು ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಕೃಷಿ ಹಾಗೂ ಹೈನುಗಾರಿಕೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಭಾರತ ಒಪ್ಪುವುದಿಲ್ಲ. ಮಾಂಸಾಹಾರಿ ಹಾಲು, ಗೋಮಾಂಸ ಉತ್ಪನ್ನಗಳು ಸೇರಿದಂತೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯಾವುದೇ ವಿಷಯದ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.