ನವದೆಹಲಿ: ದೆಹಲಿಯಲ್ಲಿ ಅಧಿಕಾರಕ್ಕೆ ಏರುವಲ್ಲಿ ಬಿಜೆಪಿ ಯಶಸ್ವಿಯಾದ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎಂಬ ಚರ್ಚೆ ಆರಂಭವಾಗಿದೆ. ಚುನಾವಣಾ ಪ್ರಚಾರದ ವೇಳೆ ಸಿಎಂ ಅಭ್ಯರ್ಥಿಯನ್ನೇ ಘೋಷಿಸಿರದ ಪಕ್ಷದಿಂದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಸಿಎಂ ರೇಸ್‌ನಲ್ಲಿ ಈಗಾಗಲೇ ಹಲವರ ಹೆಸರು ಕೇಳಿಬಂದಿದೆ. ಅವರುಗಳ ಕಿರುಪರಿಚಯ ಇಲ್ಲಿದೆ.
ಸಂಭಾವ್ಯ ಸಿಎಂಗಳು ಯಾರು?:
ವರ್ವೇಶ್ ವರ್ಮಾದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾರ ಪುತ್ರ ಪರ್ವೇಶ್ ವರ್ಮಾ. ನವದೆಹಲಿ ಕ್ಷೇತ್ರದಲ್ಲಿ ಕೇಜ್ರಿವಾಲ್‌ರನ್ನು ಮಣಿಸಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಮೆಹ್ರೌಲಿ ಕ್ಷೇತ್ರದಿಂದ, 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಇದೀಗ ಕೇಜ್ರಿವಾಲ್‌ಗೆ ಸೋಲಿನ ರುಚಿ ತೋರಿಸಿದ್ದಾರೆ.
ರಮೇಶ್ ಬಿಧೂರಿ
ದೆಹಲಿಯ ಕಲ್ಕಾಜಿ ಕ್ಷೇತ್ರದಿಂದ ಸಿಎಂ ಆತಿಶಿ ವಿರುದ್ಧ ಬಿಧೂರಿ ಸ್ಪರ್ಧಿಸಿ ಸೋತಿದ್ದಾರೆ. ಪ್ರಚಾರದ ವೇಳೆ ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯನ್ನು ಘೋಷಿಸದೇ ಇದ್ದರೂ, ಆಪ್ ಮಾತ್ರ ಬಿಧೂರಿ ಅವರೇ ಬಿಜೆಪಿ ಸಿಎಂ ಅಭ್ಯರ್ಥಿ ಎಂದಿದ್ದು ಚರ್ಚೆಗೆ ಕಾರಣವಾಗಿತ್ತು. ಒಂದು ವೇಳೆ ಬಿಧೂರಿ ಸಿಎಂ ಆಗಬೇಕಿದ್ದರೆ, ಈಗಾಗಲೇ ಗೆದ್ದಿರುವವರ ಪೈಕಿ ಯಾರಾದರೂ ರಾಜೀನಾಮೆ ಕೊಟ್ಟು ಅಲ್ಲಿ ಅವರು ಸ್ಪರ್ಧಿಸಿ ಗೆಲ್ಲಬೇಕು.
ಕೈಲಾಶ್ ಗೆಹ್ಲೋಟ್
ಬಿಜ್ವಾಸನ್ ಕ್ಷೇತ್ರದಿಂದ ಆಪ್‌ನ ಸುರೇಂದ್ರ ಭಾರದ್ವಾಜ್ ವಿರುದ್ಧ ಗೆದ್ದಿದ್ದಾರೆ. 2015 ಹಾಗೂ 2020ರಲ್ಲಿ ಆಪ್‌ನಿಂದ ನಜಾಫ್‌ಘರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಇವರು, 2014ರ ನ.17ರಂದು ಬಿಜೆಪಿಯನ್ನು ಸೇರಿದರು.
ಕಪಿಲ್ ಮಿಶ್ರಾ:
ಕರವಾಲ್ ನಗರದಿಂ ಕಪಿಲ್ ಮಿಶ್ರಾ ವಿಜೇತರಾಗಿದ್ದಾರೆ. 2019ರಲ್ಲಿ ಪಕ್ಷ ಸೇರಿದ ಇವರು, 2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಸ್ತೆಯಲ್ಲಿ ಪ್ರತಿಭಟಿಸುತ್ತಿದ್ದವರ ವಿರುದ್ಧ ನೀಡಿದ ಹೇಳಿಕೆಯಿಂದ ಸುದ್ದಿಯಾಗಿ, ಟೀಕೆಗೆ ಗುರಿಯಾಗಿದ್ದರು.
ಅರವಿಂದ್ರ ಸಿಂಗ್ ಲೌಲಿ:
ಗಾಂಧಿ ನಗರದಿಂದ ಲೌಲಿ ಗೆದ್ದಿದ್ದಾರೆ. ದೆಹಲಿಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು, 2017ರಲ್ಲಿ ಬಿಜೆಪಿ ಸೇರಿದ್ದರು. ಬಳಿಕ 2018ರ ಮಾರ್ಚ್‌ನಲ್ಲಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು. 2024ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಮತ್ತೆ ಬಿಜೆಪಿಗೆ ಬಂದಿದ್ದರು.
ವೀರೇಂದ್ರ ಗುಪ್ತಾ:
ಬಿಜೆಪಿಯ ಹಿರಿಯ ನಾಯಕರಾಗಿರುವ ಗುಪ್ತಾ, ರೋಹಿಣಿ ಕ್ಷೇತ್ರದಿಂದ ಆಪ್‌ನ ಪ್ರದೀಪ್ ಮಿತ್ತಲ್ ವಿರುದ್ಧ ಗೆದ್ದಿದ್ದಾರೆ. 2015 ಹಾಗೂ 2020ರಲ್ಲಿಯೂ ಇವರು ರೋಹಿಣಿ ಕ್ಷೇತ್ರದಲ್ಲಿ ವಿಜಯಿಯಾಗಿದ್ದರು. ದೆಹಲಿಯ ಬಿಜೆಒಇ ಮುಖ್ಯಸ್ಥರಾಗಿದ್ದ ಇವರು, ದೆಹಲಿಯ ವಿಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ದುಶ್ಯಂತ್ ಗೌತಮ್:
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ದಲಿತ ನಾಯಕ ಗೌತಮ್, ಕರೋಲ್ ಬಾಗ್‌ನಿಂದ ಗೆದ್ದಿದಾರೆ. ಗೌತಮ್ ಹರ್ಯಾಣದಲ್ಲಿ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹರೀಶ್ ಖುರಾನಾ:
ಮೋತಿ ನಗರ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಹರೀಶ್ ಖುರಾನಾ ಹಿರಿಯ ಬಿಜೆಪಿ ನಾಯಕ ಹಾಗೂ 1993ರಿಂದ 1996 ವರೆಗೆ ದೆಹಲಿಯ 3ನೇ ಮುಖ್ಯಮಂತ್ರಿಯಾಗಿದ್ದ ಮದನ್ ಲಾಲ್ ಖುರಾನಾ ಅವರ ಪುತ್ರ. ಹರೀಶ್ ಅವರು ದೆಹಲಿ ಬಿಜೆಪಿಯ ವಕ್ತಾರರೂ ಆಗಿದ್ದರು.
ಬಾನ್ಸುರಿ ಸ್ವರಾಜ್: ಬಾನ್ಸುರಿ ಸ್ವರಾಜ್, 1998ರಲ್ಲಿ 52 ದಿನಗಳ ಕಾಲ ದೆಹಲಿಯ ಸಿಎಂ ಆಗಿದ್ದ ದಿ. ಸುಷ್ಮಾ ಸ್ವರಾಜ್‌ರ ಪುತ್ರಿ. ಪ್ರಸ್ತುತ ನವದೆಹಲಿ ಕ್ಷೇತ್ರದಿಂದ ಲೋಕಸಭಾ ಸಂಸದೆಯಾಗಿದ್ದಾರೆ. ವಕೀಲೆಯಾಗಿರುವ ಇವರನ್ನು 2023ರಲ್ಲಿ ದೆಹಲಿ ಬಿಜೆಪಿಯ ಕಾನೂನು ಸೆಲ್‌ನ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಪಕ್ಷ ಸೇರಿದಾಗಿಂದ ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿರುವ ಬಾನ್ಸುರಿ ಕೂಡ ದೆಹಲಿ ಸಿಎಂ ಹುದ್ದೆ ಆಕಾಂಕ್ಷಿ ಎನ್ನಲಾಗಿದೆ.