ನವದೆಹಲಿ: ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಕಾರಣ ತಿಹಾರ್ ಜೈಲಿನಿಂದ ಶುಕ್ರವಾರ ಸಂಜೆ ಬಿಡುಗಡೆ ಹೊಂದಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ‘ದೇಶವಿರೋಧಿ ಶಕ್ತಿಗಳ ವಿರುದ್ಧದ ತಮ್ಮ ಹೋರಾಟ ಮುಂದುವರೆಯುವುದು. ಸೆರೆವಾಸ ನನ್ನ ಸಂಲಕ್ಪವನ್ನು 100ರಷ್ಟು ಬಲಗೊಳಿಸಿದೆ’ ಎಂದಿದ್ದಾರೆ.
ಜೈಲಿಂದ ಹೊರಬಂದ ಕೂಡಲೇ ತೆರೆದ ಕಾರಿನಲ್ಲಿ ಮೆರವಣಿಗೆ ನಡೆಸಿದ ಕೇಜ್ರಿವಾಲ್ ‘ಇಂಕಿಲಾಬ್ ಜಿಂದಾಬಾದ್’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನು ಕೂಗುತ್ತಾ, ‘ನನ್ನ ಬಿಡುಗಡೆಗಾಗಿ ಪ್ರಾರ್ಥಿಸಿ, ಮಳೆಯಲ್ಲೂ ಇಲ್ಲಿಗೆ ಬಂದವರಿಗೆ ಧನ್ಯವಾದ. ನನ್ನ ಒಂದೊಂದು ಹನಿ ರಕ್ತ ದೇಶಸೇವೆಗೆ ಮೀಸಲು. ಜೈಲು ನನ್ನ ವಿಶ್ವಾಸ ಮುರಿಯಲು ಸಾಧ್ಯವಿಲ್ಲ. ನಾನು ಜೀವನಪರ್ಯಂತ ಕಷ್ಟಗಳನ್ನು ಎದುರಿಸಿದ್ದು, ದೇವರು ಸದಾ ನನ್ನೊಂದಿಗಿದ್ದಾನೆ’ ಎಂದರು.
ತಿಹಾರ್ ಜೈಲಿನ ಹೊರಗೆ ಪಂಜಾಬ್ ಸಿಎಂ ಭಗವಂತ್ ಮಾನ್, ಮನೀಷ್ ಸಿಸೋಡಿಯಾ ಸೇರಿದಂತೆ ಪಕ್ಷದ ನಾಯಕರು ಮತ್ತು ಬೆಂಬಲಿಗರು ಕೇಜ್ರಿವಾಲ್‌ರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
==
ಕೇಜ್ರಿಗೆ ಜಾಮೀನು: ಆಪ್ ಸಂಭ್ರಮ
ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದ್ದು, ‘ಸತ್ಯಮೇವ ಜಯತೇ’ ಎನ್ನುವ ಮೂಲಕ ಆಮ್ ಆದ್ಮಿ ಪಕ್ಷ ಸಂಭ್ರಮಿಸಿದೆ. ನಾಯಕರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಕುಣಿದು ಕುಪ್ಪಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ ಪ್ರತಿಕ್ರಿಯಿಸಿ, ‘ಸುಳ್ಳು ಹಾಗೂ ಪಿತೂರಿಗಳ ವಿರುದ್ಧ ಸತ್ಯಕ್ಕೆ ಜಯವಾಗಿದೆ. 75 ವರ್ಷಗಳ ಮೊದಲೇ ಸರ್ವಾಧಿಕಾರಿಗಳ ವಿರುದ್ಧ ಜನಸಾಮಾನ್ಯರಿಗೆ ಶಕ್ತಿ ತುಂಬಿದ ಅಂಬೇಡ್ಕರ್‌ಗೆ ನಮನ’ ಎಂದರು.‘ನಮ್ಮೊಂದಿಗೆ ಗಟ್ಟಿಯಾಗಿ ನಿಂತ ಆಪ್ ಕುಟುಂಬಕ್ಕೆ ಧನ್ಯವಾದ. ಅನ್ಯ ನಾಯಕರ ಬಿಡುಗಡೆಗೂ ಹಾರೈಸೋಣ’ ಎಂದು ಕೇಜ್ರಿವಾಲ್ ಪತ್ನಿ ಸುನಿತಾ ಸಂತಸ ವ್ಯಕ್ತಪಡಿಸಿದರು.
ಸಚಿವೆ ಆತಿಶಿ, ಹರ್ಭಜನ್ ಸಿಂಗ್, ಸತ್ಯೇಂದ್ರ ಜೈನ್ ಖುಷಿಪಟ್ಟಿದ್ದು ಕಾರ್ಯಕರ್ತರು ಪಕ್ಷದ ಕಚೇರಿಯೆದುರು ಸಿಹಿ ಹಂಚಿ ಹರ್ಷಿಸಿದರು.
==
ಕೇಜ್ರಿವಾಲ್ ಬಿಡುಗಡೆಯಿಂದ ಹರ್ಯಾಣ ಕಾಂಗ್ರೆಸ್‌ಗೆ ಆತಂಕ!
ನವದೆಹಲಿ: ಹರ್ಯಾಣ ವಿಧಾನಸಭೆ ಚುನಾವಣೆಗೂ ಮುನ್ನ ಆಪ್ ನಾಯಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾಮೀಮಿನ ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಿರುವುದು ಪಕ್ಷಕ್ಕೆ ಬಲ ತುಂಬಲಿದೆ. ಆದರೆ ಇದು ಆಪ್‌ನ ಇಂಡಿಯಾ ಕೂಟದ ಮಿತ್ರಪಕ್ಷವಾದ ಕಾಂಗ್ರೆಸ್‌ಗೆ ಅಪಾಯ ಒಡ್ಡುವ ಸಾಧ್ಯತೆ ಕೂಡ ಇದೆ.ಇಂಡಿಯಾ ಕೂಟದ ಅಂಗಪಕ್ಷಗಳಾದರೂ ಇಲ್ಲಿ ಕಾಂಗ್ರೆಸ್-ಆಪ್ ಮೈತ್ರಿ ಏರ್ಪಟ್ಟಿಲ್ಲ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರೋಧಿ ಅಲೆ ಇದೆ ಎನ್ನಲಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೇರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ ರಾಜ್ಯದಲ್ಲಿ ಕೊಂಚ ನೆಲೆ ಹೊಂದಿರುವ ಆಪ್, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ತನ್ನ ಅಭ್ಯರ್ಥಿಗಳನ್ನು ಹಾಕಿದೆ. ಈಗ ಕೇಜ್ರಿವಾಲ್ ಪ್ರಚಾರಕ್ಕೆ ಆಗಮಿಸಲಿದ್ದು, ಇವರು ಬಿಜೆಪಿಗಿಂತ ಕಾಂಗ್ರೆಸ್ ಮತಗಳನ್ನೇ ಹೆಚ್ಚು ಸೆಳೆವ ಸಾಧ್ಯತೆ ಇದೆ ಎಂಬ ಆತಂಕ ಕೈ ಪಾಳಯದಲ್ಲಿದೆ.
==
ಕೇಜ್ರಿವಾಲ್ ರಾಜೀನಾಮೆಗೆ ಬಿಜೆಪಿ ಆಗ್ರಹ
ಪಿಟಿಐ ನವದೆಹಲಿ‘ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಷರತ್ತುಗಳ ಪ್ರಕಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ‘ಆದರೆ ಹರ್ಯಾಣ ಚನಾವಣೆ ಸೋಲಿನ ಭೀತಿಯಿಂದ ಬಿಜೆಪಿಯಿಂದ ಇಂಥ ಆಗ್ರಹ ಮಾಡುತ್ತಿದೆ’ ಎಂದು ಆಪ್ ತಿರುಗೇಟು ನೀಡಿದೆ.
ಪ್ರತ್ಯೇಕವಾಗಿ ಮಾತನಾಡಿದ ಬಿಜೆಪಿ ನಾಯಕರಾದ ಬಾನ್ಸುರಿ ಸ್ವರಾಜ್, ವೀರೇಂದ್ರ ಸಚ್‌ದೇವ ಹಾಗೂ ಗೌರವ್ ಭಾಟಿಯಾ, ‘ಕೇಜ್ರಿವಾಲ್ ಮೇಲಿನ ಆರೋಪಗಳನ್ನು ಕೋರ್ಟ್ ವಜಾ ಮಾಡಿಲ್ಲ. ಅವರೊಬ್ಬ ಕಟ್ಟಾ ಅಪ್ರಾಮಾಣಿಕ. ಜಾಮೀನು ನೀಡುವಾಗ ಸುಪ್ರೀಂ ಕೋರ್ಟು, ಅವರಿಗೆ, ‘ಸಿಎಂ ಕಚೇರಿಗೆ ಹೋಗುವಂತಿಲ್ಲ. ಕಡತಕ್ಕೆ ಸಹಿ ಹಾಕುವಂತಿಲ್ಲ ಹಾಗೂ ಅಬಕಾರಿ ಹಗರಣದ ಬಗ್ಗೆ ಮಾತನಾಡುವಂತಿಲ್ಲ’ ಎಂದು ಸೂಚಿಸಿದೆ. ಹೀಗಿದ್ದಾಗ ಸಿಎಂ ಆಗಿಯೂ ಅಧಿಕೃತ ಕೆಲಸ ಮಾಡುವ ಸ್ಥಿತಿಯಲ್ಲಿ ಕೇಜ್ರಿವಾಲ್ ಇಲ್ಲ. ಆದ್ದರಿಂದ ಅವರು ಹುದ್ದೆಯಲ್ಲಿ ಮುಂದುವರಿಯುವ ಬದಲು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.ಆಪ್ ತಿರುಗೇಟು:
ಈ ಆಗ್ರಹಕ್ಕೆ ಆಪ್ ನಾಯಕರಾದ ಮನೀಶ್ ಸಿಸೋಡಿಯಾ ಹಾಗೂ ಸಂಜಯ ಸಿಂಗ್ ತಿರುಗೇಟು ನೀಡಿದ್ದಾರೆ. ‘ಕೇಜ್ರಿವಾಲ್‌ರಂಥ ಪ್ರಾಮಾಣಿಕರನ್ನು ಜೈಲಲ್ಲಿ ಇರಿಸಿದ್ದ ಬಗ್ಗೆ ಬಿಜೆಪಿ ಕ್ಷಮೆ ಕೇಳಬೇಕು. ಕೇಜ್ರಿವಾಲ್ ಹೊರಬಂದರೆ ತಮಗೆ ಹರ್ಯಾಣ ಚುನಾವಣೆಯಲ್ಲಿ ಸೋಲಾಗಲಿದೆ ಎಂಬ ಭೀತಿ ಬಿಜೆಪಿಗೆ ಇದೆ. ಹೀಗಾಗಿ ಸುಪ್ರೀಂ ಕೋರ್ಟು ವಿಧಿಸಿದ ಜಾಮೀನು ಷರತ್ತು ಪ್ರಸ್ತಾಪಿಸಿ, ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ’ ಎಂದಿದ್ದಾರೆ.