ಪಾಕ್ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಭಾರತದ ಮತ್ತೆರಡು ನಿಯೋಗ ಪ್ರವಾಸ ಶುರು

KannadaprabhaNewsNetwork |  
Published : May 25, 2025, 01:23 AM ISTUpdated : May 25, 2025, 05:11 AM IST
ಓವೈಸಿ  | Kannada Prabha

ಸಾರಾಂಶ

ಪಾಕ್ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಭಾರತ ರಚಿಸಿರುವ 7 ಸರ್ವಪಕ್ಷ ನಿಯೋಗಗಳ ಪೈಕಿ 2 ನಿಯೋಗಗಳು ಶನಿವಾರದಿಂದ ಪ್ರವಾಸ ಆರಂಭಿಸಿವೆ.

 ನವದೆಹಲಿ : ಪಾಕ್ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಭಾರತ ರಚಿಸಿರುವ 7 ಸರ್ವಪಕ್ಷ ನಿಯೋಗಗಳ ಪೈಕಿ 2 ನಿಯೋಗಗಳು ಶನಿವಾರದಿಂದ ಪ್ರವಾಸ ಆರಂಭಿಸಿವೆ. ಕಾಂಗ್ರೆಸ್‌ ಸಂಸದ ಶಶಿ ತರೂರ್ ನಿಯೋಗ ಶನಿವಾರ ಅಮೆರಿಕ ಸೇರಿದಂತೆ 5 ದೇಶಗಳ ಪ್ರವಾಸ ಆರಂಭಿಸಿದೆ.

 ಮತ್ತೊಂದೆಡೆ ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ನಿಯೋಗ ಸೌದಿ ಅರೇಬಿಯಾ ಹಾಗೂ ಮತ್ತಿತರ ದೇಶಗಳಿಗೆ ತೆರಳಲಿದೆ.ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನಿಯೋಗವು ಅಮೆರಿಕ, ಗಯಾನ, ಪನಾಮ, ಕೊಲಂಬಿಯಾ ಮತ್ತು ಬ್ರೆಜಿಲ್ ದೇಶಗಳಿಗೆ ತೆರಳಿದೆ. 

ಈ ನಿಯೋಗದಲ್ಲಿ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಂಭವಿ, ಸರ್ಪರಾಜ್ ಅಹ್ಮದ್, ಹರೀಶ್‌ ಬಾಲಯೋಗಿ, ಶಶಾಂಕ್ ಮಣಿ ತ್ರಿಪಾಠಿ ಸೇರಿ 9 ಮಂದಿಯಿದ್ದಾರೆ.ವಿದೇಶಿ ಭೇಟಿ ಕೈಗೊಳ್ಳುವ ಮುನ್ನ ತರೂರ್‌ ವಿಡಿಯೋವೊಂದನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಭಯೋತ್ಪಾದನೆಯ ವಿರುದ್ಧ ನಾವು ಮೌನವಾಗಿರಲು ಸಾಧ್ಯವಿಲ್ಲ. ಈ ಸಂದೇಶವನ್ನು ಜಗತ್ತಿಗೆ ತಲುಪಿಸುವುದು ನಮ್ಮ ಧ್ಯೇಯ. ನಮ್ಮ ದೇಶದ ಮೇಲೆ ಭಯೋತ್ಪಾದಕರು ಅತ್ಯಂತ ಕ್ರೂರ ರೀತಿಯಲ್ಲಿ ದಾಳಿ ಮಾಡಿದ ಭಯಾನಕ ಬಿಕ್ಕಟ್ಟಿನ ಬಗ್ಗೆ ಮಾತನಾಡಲು ಹೋಗುತ್ತಿದ್ದೇವೆ’ ಎಂದಿದ್ದಾರೆ.

ಇನ್ನು ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ನಿಯೋಗ ಬಹ್ರೇನ್‌, ಕುವೈತ್, ಸೌದಿ ಅರೇಬಿಯಾ, ಅಲ್ಜೀರಿಯಾಗೆ ಭೇಟಿ ನೀಡಲಿದೆ. ಈ ನಿಯೋಗದಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಗುಲಾಮ್ ನಬಿ ಅಜಾದ್ ಸೇರಿ 8 ಮಂದಿಯಿದ್ದಾರೆ.

PREV
Read more Articles on