ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೆಹಲಿ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಪೋರ್ಟರ್‌ಗಳೊಂದಿಗೆ ಸಂವಾದ ನಡೆಸಿದ್ದು, ಈ ವೇಳೆ ಅವರ ಸಮಸ್ಯೆಯನ್ನು ಸಂಸತ್ತಿನ ಗಮನಕ್ಕೆ ತರಲಾಗುವುದು ಎನ್ನುವ ಭರವಸೆ ನೀಡಿದರು. ಅಲ್ಲದೇ ಇದೇ ವೇಳೆ ರಾಹುಲ್ ಗಾಂಧಿ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ಕಾಲ್ತುಳಿತದ ಬಗ್ಗೆ ಕಳವಳ ವ್ಯಕ್ತ ಪಡಿಸಿದರು. ಈ ಕುರಿತ ವಿಡಿಯೋವನ್ನು ರಾಹುಲ್ ಹಂಚಿಕೊಂಡಿದ್ದಾರೆ.
ಟಾಟಾದಿಂದ ಭಾರತದ ಮೊದಲ ಹೈಡ್ರೋಜನ್ ಟ್ರಕ್ ಪ್ರಯೋಗ ಶುರು
ನವದೆಹಲಿ: 2070ರ ವೇಳೆಗೆ ಇಂಗಾಲ ಶೂನ್ಯತೆ ಸ್ಥಾಪಿಸುವ ಗುರಿಯೊಂದಿಗೆ ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ದೇಶದ ಮೊಟ್ಟ ಮೊದಲ ಹೈಡ್ರೋಜನ್ ಚಾಲಿತ ಭಾರೀ ಟ್ರಕ್ ತಯಾರಿಸಿದ್ದು, ಅದರ ಪ್ರಯೋಗಗಳನ್ನು ಪ್ರಾರಂಭಿಸಿದೆ. ಈ ಪ್ರಯೋಗಗಳು 24 ತಿಂಗಳ ತನಕ ನಡೆಯಲಿದೆ. ವಿವಿಧ ಸಂರಚನೆಗಳು ಮತ್ತು ಪೇಲೋಡ್ ಸಾಮರ್ಥ್ಯಗಳೊಂದಿಗೆ 16 ಸುಧಾರಿತ ಹೈಡ್ರೋಜನ್ ಚಾಲಿತ ವಾಹನಗಳನ್ನು ಒಳಗೊಂಡಿರುತ್ತದೆ. ಹೊಸ ಯುಗದ ಹೈಡ್ರೋಜನ್ ಆಂತರಿಕ ದಹನಕಾರಿ ಎಂಜಿನ್ ಮತ್ತು ಇಂಧನಕೋಶ ತಂತ್ರಜ್ಞಾನಗಳನ್ನು ಹೊಂದಿರಲಿದೆ. ಈ ಟ್ರಕ್‌ಗಳನ್ನು ಮುಂಬೈ, ಪುಣೆ, ದೆಹಲಿ, ಸೂರತ್, ವಡೋದರಾ, ಜಮ್ಶೆಡ್‌ಪುರ, ಕಳಿಂಗನಗರ ಸೇರಿದಂತೆ ಭಾರತದ ಪ್ರಮುಖ ಸರಕು ಮಾರ್ಗಗಳಲ್ಲಿ ಪರೀಕ್ಷಿಸಲಾಗುತ್ತದೆ. ಈ ಟ್ರಕ್ 300 ರಿಂದ 500 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ.
ಅಮೆರಿಕ: ಭಾರತೀಯ ನರ್ಸ್‌ಗೆ ಜನಾಂಗೀಯ ನಿಂದನೆ, ಭೀಕರ ಹಲ್ಲೆ
ಹೂಸ್ಟನ್: ಅಮೆರಿಕದ ಫ್ಲೋರಿಡಾದಲ್ಲಿ ಭಾರತ ಮೂಲದ ನರ್ಸ್ ಲೀಲಮ್ಮ ಎಂಬುವವರ ಮೇಲೆ ರೋಗಿಯೊಬ್ಬ ಜನಾಂಗೀಯ ನಿಂದನೆ ಮಾಡಿ ಅವರ ಮೇಲೆ ಭೀಕರವಾಗಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಆರೋಪಿಯನ್ನು ಸ್ಟೀಫನ್ ಎರಿಕ್ ಸ್ಕಾಟಲ್ಬರ್ಗ್ ಎಂದು ಗುರುತಿಸಲಾಗಿದ್ದು, ನರ್ಸ್ ಮೇಲೆ ದಾಳಿಗೂ ಮುನ್ನ ನೀವು ಭಾರತೀಯರು ಕೆಟ್ಟವರು. ನಿಮ್ಮನ್ನು ಸಾಯಿಸಬೇಕು ಎಂದು ಹೇಳಿ ತೀವ್ರವಾಗಿ ಹೊಡೆದಿದ್ದಾನೆ. ಹೊಡೆತದ ತೀವ್ರತೆಗೆ ನರ್ಸ್ ಅವರ ಮುಖದಲ್ಲಿನ ಎಲ್ಲ ಮೂಳೆಗಳು ಹಾನಿಯಾಗಿದೆ. ಅಲ್ಲದೇ ನರ್ಸ್ ಅವರ ದೃಷ್ಟಿಯನ್ನು ಸಹ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಮಹಿಳೆಯ ಮುಖ ಸಂಪೂರ್ಣವಾಗಿ ಗುರುತು ಸಿಗದಂತಾಗಿದೆ. ಹೊಡೆತದಿಂದಾಗಿ ತಲೆ ಭಾಗದ ಆಂತರಿಕದಲ್ಲಿ ಸಂಪೂರ್ಣ ರಕ್ತಸ್ರಾವವಾಗಿದೆ ಎಂದು ನರ್ಸ್ ಅವರ ಪುತ್ರಿ ಸಿಂಡಿ ಜೋಸೆಫ್ ಹೇಳಿದ್ದಾರೆ.
800 ಅಂಕ ಬಿದ್ದು 740 ಅಂಕ ಏರಿದ ಸೆನ್ಸೆಕ್ಸ್: 10 ದಿನದ ಇಳಿಕೆಗೆ ತಡೆ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಬುಧವಾರ ಭಾರೀ ಏರಿಳಿಕೆ ಕಂಡಿದೆ. ಅಮೆರಿಕದ ತೆರಿಗೆ ದಾಳಿಗೆ ತತ್ತರಿಸಿ ಬುಧವಾರ ಬೆಳಗ್ಗಿನ ವಹಿವಾಟಿನಲ್ಲಿ 800 ಅಂಕಗಳ ಭಾರೀ ಕುಸಿತ ಕಂಡಿದ್ದ ಸೆನ್ಸೆಕ್ಸ್ ಬಳಿಕ 740 ಅಂಕಗಳ ಏರಿಕೆಯೊಂದಿಗೆ 73730 ಅಂಕಗಳಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ ಕೂಡಾ 254 ಅಂಕ ಏರಿ 22394ರಲ್ಲಿ ದಿನದ ವಹಿವಾಟು ಮುಗಿಸಿತು. ಇದರೊಂದಿಗೆ ಸತತ 10 ದಿನಗಳಿಂದ ಕಂಡುಬಂದಿದ್ದ ಇಳಿಕೆಯ ಓಟಕ್ಕೆ ಬುಧವಾರ ಬ್ರೇಕ್ ಬಿದ್ದಂತಾಯಿತು. ಬುಧವಾರದ ಷೇರುಪೇಟೆ ಏರಿಕೆಯು ಹೂಡಿಕೆದಾರರ ಸಂಪತ್ತನ್ನು 8 ಲಕ್ಷ ಕೋಟಿ ರು.ನಷ್ಟು ಹೆಚ್ಚಳ ಮಾಡಿದೆ.