ದಿಲ್ಲಿಗೆ 3ನೇ ಮಹಿಳಾ ಸಿಎಂ ಆತಿಶಿ: ಕೇಜ್ರಿ ಹುದ್ದೆಗೆ ಆಯ್ಕೆ

KannadaprabhaNewsNetwork |  
Published : Sep 18, 2024, 01:47 AM IST
ಆತಿಶಿ | Kannada Prabha

ಸಾರಾಂಶ

ರಾಷ್ಟ್ರ ರಾಜಧಾನಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಮ್‌ ಆದ್ಮಿ ಪಕ್ಷದ ಹಿರಿಯ ನಾಯಕಿ ಆತಿಶಿ ಅವರು ಮಂಗಳವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪಿಟಿಐ ನವದೆಹಲಿ

ರಾಷ್ಟ್ರ ರಾಜಧಾನಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಮ್‌ ಆದ್ಮಿ ಪಕ್ಷದ ಹಿರಿಯ ನಾಯಕಿ ಆತಿಶಿ ಅವರು ಮಂಗಳವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ಶೀಲಾ ದೀಕ್ಷಿತ್‌ ಹಾಗೂ ಸುಷ್ಮಾ ಸ್ವರಾಜ್‌ ಬಳಿಕ ದೆಹಲಿಯು ಮೂರನೇ ಮಹಿಳಾ ಮುಖ್ಯಮಂತ್ರಿಯನ್ನು ಕಾಣುವಂತಾಗಿದೆ.

ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಸಭೆಯಲ್ಲಿ ನಿರ್ಗಮಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಆತಿಶಿ ಹೆಸರನ್ನು ಸೂಚಿಸಿದರು. ಎಲ್ಲರೂ ಅನುಮೋದಿಸಿದರು. ಆತಿಶಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಸಂಜೆ ಕೇಜ್ರಿವಾಲ್‌ ಅವರು ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಆತಿಶಿ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯಪಾಲರಿಗೆ ನೀಡಿದರು. ಇದರ ಬೆನ್ನಲ್ಲೇ ಆತಿಶಿ ನೇತೃತ್ವದಲ್ಲಿ ಉಪರಾಜ್ಯಪಾಲರನ್ನು ಭೇಟಿಯಾದ ಆಪ್‌ ನಿಯೋಗ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿತು.

ಈ ನಡುವೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ಬೆನ್ನಲ್ಲೇ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಆತಿಶಿ, ಕೇಜ್ರಿವಾಲ್‌ ಅವರು ನಿರ್ಗಮಿಸುತ್ತಿರುವುದು ದುಃಖದ ವಿಚಾರ. ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟಕ್ಕೆ ತರಲು ಕಾರ್ಯನಿರ್ವಹಿಸುತ್ತೇನೆ. ಆಪ್‌ನಂತಹ ಪಕ್ಷದಲ್ಲಿ ಮಾತ್ರ ನನ್ನಂತೆ ಮೊದಲ ಬಾರಿ ಗೆದ್ದವರು ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ಹೇಳಿದರು.

ಏತನ್ಮಧ್ಯೆ, ಸಿಎಂ ಬದಲಾವಣೆಗೆ ಬಿಜೆಪಿ ವ್ಯಂಗ್ಯವಾಡಿದೆ. ಆಪ್‌ ತನ್ನ ಮುಖವನ್ನು ಬದಲಿಸಬಹುದು, ಅದರ ಚಾರಿತ್ರ್ಯವನ್ನಲ್ಲ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ ಅವರು ಲೇವಡಿ ಮಾಡಿದ್ದಾರೆ.

----

ಮತ್ತೆ ಕೇಜ್ರಿ ಸಿಎಂ ಮಾಡೋದೇ ಗುರಿ

ನನಗೆ ಯಾರೂ ಹಾರ ಹಾಕಬೇಡಿ. ಶುಭಾಶಯ ತಿಳಿಸಬೇಡಿ. ಏಕೆಂದರೆ ನನ್ನ ಅಣ್ಣ ಕೇಜ್ರಿವಾಲ್‌ ಸಿಎಂ ಸ್ಥಾನದಿಂದ ನಿರ್ಗಮಿಸಿರುವುದು ದುಃಖದ ಸಂಗತಿ. ಅವರನ್ನು ಮತ್ತೆ ಸಿಎಂ ಮಾಡುವ ಏಕೈಕ ಗುರಿಯೊಂದಿಗೆ ಕೆಲಸ ಮಾಡುತ್ತೇನೆ.

- ಆತಿಶಿ, ದೆಹಲಿ ನಿಯೋಜಿತ ಸಿಎಂ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನೆತನ್ಯಾಹುರನ್ನು ಅಮೆರಿಕ ಅಪಹರಿಸಲಿ: ಪಾಕ್‌ ಸಚಿವ
ಸ್ಟಾರ್‌ವಾರ್‌ ರೀತಿ ಲೇಸರ್‌ ಅಸ್ತ್ರ ರಾಜ್ಯದಲ್ಲಿ ಅಭಿವೃದ್ಧಿ!