ಕನ್ನಡಪ್ರಭವಾರ್ತೆ ಮಹಾಲಿಂಗಪುರ
ಪುಣ್ಯಪುರುಷರ ಜನಿಸಿದ ನಾಡು ನಮ್ಮ ಹೆಮ್ಮೆಯ ಕರುನಾಡು. ತುಮಕೂರಿನ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಅಭಿನವ ಬಸವಣ್ಣ, ಮಹಾ ಮಾನವತಾವಾದಿ ನಡೆದಾಡುವ ದೇವರೆಂದೇ ನಾಡಿನಾದ್ಯಂತ ಖ್ಯಾತರಾಗಿದ್ದ ಲಿಂ. ಡಾ. ಶಿವಕುಮಾರ ಸ್ವಾಮಿಗಳು ನಾಡು ಕಂಡ ಅಪರೂಪದ ಶ್ರೇಷ್ಠ ಸಂತ ಎಂದು ಬಸವಾನಂದ ಟ್ರಸ್ಟ್ ಸದಸ್ಯ ಕಲ್ಲಪ್ಪ ಚಿಂಚಲಿ ಹೇಳಿದರು.ಸ್ಥಳೀಯ ಶ್ರೀ ಬಸವಾನಂದ ಶಾಲೆಯಲ್ಲಿ ಜರುಗಿದ ಶ್ರೀ ಶಿವಕುಮಾರ ಸ್ವಾಮೀಜಿಗಳ 117 ನೇ ಜಯಂತಿ ಹಾಗೂ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಸಿ ಮಾತನಾಡಿದ ಅವರು, ನಿಸ್ವಾರ್ಥ ಮತ್ತು ಕರುಣೆಯ ನೈಜ ಸಾಕಾರ ಮೂರ್ತಿಗಳಾಗಿದ್ದ ಶ್ರೀಗಳು ಸಮಾಜ ಸೇವೆಗೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಶಿಕ್ಷಣ, ಅರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅವರು ಮಾಡಿದ ಕಾರ್ಯ ಲಕ್ಷಾಂತರ ಜನರ ಜೀವನ ಬದಲಿಸಿದೆ. ಅವರ ಸಮರ್ಪಣೆ ಹಾಗೂ ಮಾನವೀಯ ಸೇವೆ ವಿಶ್ವಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಡಾ. ಬಿ.ಡಿ ಸೋರಾಗಾಂವಿ ಮಾತನಾಡಿ, ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು ಮನುಷ್ಯತ್ವದಿಂದ ದೈವತ್ವಕ್ಕೇರಿದ ದೇವಪುರುಷರು ಸಿದ್ದ ಗಂಗೆಯ ಶಿವಕುಮಾರ ಸ್ವಾಮಿಗಳು. ನಡೆಯುವ ದಾರಿ ಬದಲಿಸದೆ ನಡೆದ ದಾರಿಯನ್ನೇ ಸ್ವರ್ಗವಾಗಿ ಮಾಡಿದರು. ಅಂತಹ ಪುಣ್ಯ ಪುರುಷರ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು ಎಂಬ ಭಾವ ನಮ್ಮದಾಗಿದೆ ಎಂದರು.ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದರಬೇಕು, ಸರಳವಾಗಿರಬೇಕು, ಮಧುರವಾಗಿರಬೇಕು, ಮೃದುವಾಗಿರಬೇಕು, ಮಾತು ತಪಸ್ಸು ಎಂಬಂತಿರಬೇಕು. ಸೇವೆ ಪ್ರಚಾರದ ವಸ್ತುವಲ್ಲ, ಅದು ಗುಪ್ತಶಕ್ತಿ ವ್ಯಕ್ತಿಯನ್ನು ಅರೋಗ್ಯವಂತನನ್ನಾಗಿಡುವ ದಿವ್ಯ ಶಕ್ತಿ. ಸಹಜವಾದ ಪ್ರೀತಿ ಕಲ್ಲನ್ನು ಕರಗಿಸುತ್ತದೆ. ಕಟುಕನನ್ನು ಕರುಣಾಮಯನನ್ನಾಗಿಸುತ್ತದೆ. ಅದು ಎಲ್ಲವೂ ಒಬ್ಬರಲ್ಲೆ ಇತ್ತು, ಅವರೆ ನಮ್ಮ ಶಿವಕುಮಾರ ಸ್ವಾಮೀಗಳು ಎಂದು ಹೇಳಿದರು.
ಪೂಜ್ಯ ಸಿದ್ದರಾಮರು ಮಾತನಾಡಿ, ಹಗಲಿರುಳೆನ್ನದೆ ದುಡಿದು ಕಾಯಕಯೋಗಿಯಾದವರೇ ಕಲಿಯುಗದ ನಡೆದಾಡುವ ದೇವರು ಸಿದ್ದಗಂಗಾ ಶ್ರೀ. ಅನ್ನ, ಜ್ಞಾನ, ಹಾಗೂ ಅಕ್ಷರ ತ್ರಿವಿಧ ದಾಸೋಹದ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದರು. ಅಕ್ಕರೆಯಿಂದ ಅಕ್ಷರ ಕಳಿಸಿದರು. ಆತ್ಮೀಯವಾಗಿ ಭಕ್ತರನ್ನ ಅಪ್ಪಿಕೊಂಡರು. ಅಜ್ಞಾನ ತೊಲಗಿಸಿ ಜ್ಞಾನ ಪಸರಿಸಿದರು. ದೇವರಂತೆ ಬೆಳಕಾಗಿ, ಪೂಜ್ಯರಂತೆ ನೆರಳಾಗಿ, ತಂದೆಯಂತೆ ಆಶ್ರಯವಾಗಿ, ತಾಯಿಯಂತೆ ಕರುಣಾಮಯಿಯಾಗಿ, ಬಸವಣ್ಣನಂತೆ ಆದರ್ಶವಾಗಿ, ವಿವೇಕಾನಂದರಂತೆ ಮಾದರಿಯಾಗಿ, ಮೌನ ಮಾತಿನಿಂದ ಜಗಕ್ಕೆ ಜ್ಯೋತಿಯಾದರು ಎಂದು ಹೇಳಿದರು.ಪ್ರಾಚಾರ್ಯ ಎಸ್.ಕೆ ಗಿಂಡೆ ಮಾತನಾಡಿ, ಇಬ್ಬರು ನಡೆದಾಡುವ ದೇವರನ್ನು ಕಂಡ ಕರುನಾಡು ನಿಜವಾಗಿಲು ಸ್ವರ್ಗದಂತಿದೆ. ಒಬ್ಬರು ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ, ಮತ್ತೊಬ್ಬರು ತ್ರಿವಿಧ ದಾಸೋಹಿ ಸಿದ್ದಗಂಗೆಯ ಸಂತ ಶ್ರೀ ಶಿವಕುಮಾರ ಸ್ವಾಮಿಗಳು. ಇಂದು ಅವರ ಹೆಸರಿನಲ್ಲಿ ನಡೆಯುತ್ತಿರುವ ಈ ಬೇಸಿಗೆಯ ಶಿಬಿರ ಲಾಭ ಎಲ್ಲ ವಿದ್ಯಾರ್ಥಿಗಳು ಪಡೆಯಬೇಕು ಎಂದು ಹೇಳಿದರು.
ಈ ವೇಳೆ ನೂರಾರು ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದರು. ಕಾರ್ಯಕ್ರಮವನ್ನು ಪಿ.ವಿ ಹುಣಶ್ಯಾಳ ನಿರೂಪಿಸಿ ವಂದಿಸಿದರು.