ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ದೋಣಿಮಗಡು ಗ್ರಾಪಂ ವ್ಯಾಪ್ತಿಯ ಮುಷ್ಟ್ರಹಳ್ಳಿ ಡ್ಯಾಂ ಅಭಿವೃದ್ಧಿಗೆ ೨ಕೋಟಿ ರು. ಮಂಜೂರು ಮಾಡಿದ್ದೇನೆ ಹಾಗೂ ಈ ಡ್ಯಾಂನಿಂದ ವ್ಯರ್ಥವಾಗಿ ತಮಿಳುನಾಡಿಗೆ ಹರಿಯುವ ನೀರನ್ನು ತಡೆಯಲು ೬ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಗಡಿ ಭಾಗದವಾಗ ದೋಣಿಮಡಗು ಗ್ರಾಪಂನಲ್ಲಿ ನಡೆದ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ದಿ ವಿಷಯದಲ್ಲಿ ಯಾವುದೇ ತಾರತಮ್ಯ ಎಸಗದೆ ಎಲ್ಲ ಗ್ರಾಮಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಿರುವೆ, ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ನನಗೆ ಶಕ್ತಿ ತುಂಬಿದರೆ ಮತ್ತಷ್ಟು ಕೆಲಸ ಮಾಡಲು ಉತ್ತೇಜನ ಸಿಗಲಿದೆ ಎಂದರು.ದಲ್ಲಾಳಿಯನ್ನು ಸಂಪರ್ಕಿಸಬೇಡಿಸರ್ಕಾರಿ ಗೋಮಾಳದಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಸಕ್ರಮ ಮಾಡಿಕೊಳ್ಳಲು ದಲ್ಲಾಳಿಗಳನ್ನು ಸಂಪರ್ಕಿಸಿ ಹಣ ಕಳೆದುಕೊಳ್ಳದೆ ನೇರವಾಗಿ ನನ್ನ ಬಳಿ ಬಂದರೆ ಹಣವಿಲ್ಲದೆ ಭೂಮಿ ಮಂಜೂರು ಮಾಡಿಕೊಡುವೆ. ತಳೂರು ಬಳಿ ಸರ್ವೆ ನಂ ೧೧ರಲ್ಲಿ ಕೆಲವರು ರೈತರಿಂದ ಲಕ್ಷಾಂತರ ಹಣ ಪಡೆದು ಅಕ್ರಮವಾಗಿ ಸಾಗುವಳಿ ಚೀಟಿ ಮಾಡಿಸಿಕೊಟ್ಟಿದ್ದಾರೆ. ಈಗ ಅದಕ್ಕೆ ಅರಣ್ಯ ಇಲಾಖೆ ಬೇಲಿ ಹಾಕಿದೆ ಎಂದರು.
ರಸ್ತೆಗಳ ಅಭಿವೃದ್ಧಿಗೆ ಕ್ರಮಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಜನರಿಗೆ ಆಶಾದಾಯಕವಾಗಿದೆ, ಇದನ್ನು ಟೀಕೆ ಮಾಡುವವರು ಬಡವರ ನೆರವಿಗೆ ಬರುತ್ತಾರೆಯೇ ಎಂದರಲ್ಲದೆ ಈ ಭಾಗದ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನೂ ೧ ವರ್ಷಗಳಲ್ಲಿ ಅಭಿವೃದ್ದಿ ಮಾಡುವೆ ಎಂದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾಜಯಣ್ಣ, ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯರು ಹಾಗೂ ಅಧಿಕಾರಿಗಳಾದ ಶಿವಾರೆಡ್ಡಿ, ಪ್ರತಿಭಾ, ಡಾ.ಪ್ರಿಯದರ್ಶಿನಿ, ಪಿಡಿಒ ವಸಂತ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ಶ್ವೇತಾ, ತೊಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಭಾಕರರೆಡ್ಡಿ, ಎಇಇ ಸುಕುಮಾರ್ ರಾಜು,ಪಿಡಬ್ಲ್ಯೂಡಿ ಎಇಇ ರವಿ ಇತರರು ಇದ್ದರು.