ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರು ಕುವೆಂಪು ಭಾಷಾ ಭಾರತಿಯ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಿದರು. ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ, ಪ್ರಶಸ್ತಿ ಪುರಸ್ಕೃತರು ಇದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಂತೆ ಇದ್ದಾರೆ. ಅನುವಾದಕರ ಮೂಲಕ ಜಗತ್ತಿನ ನಾನಾ ಭಾಗಗಳ ಸಾಹಿತ್ಯ ಅನುವಾದಗೊಂಡು ಓದುಗರನ್ನು ತಲುಪಿದರೆ ವಿಶ್ವಶಾಂತಿಗೂ ದಾರಿಯಾಗಬಹುದು ಎಂದು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಲಾಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಿ ಅವರು ಮಾತನಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ಅನುವಾದಕ್ಕೆ ತನ್ನದೇ ಆದ ಮಹತ್ವವಿದೆ. ಇಂಗ್ಲಿಷ್ ಮಾತ್ರವಲ್ಲದೇ ವಿಶ್ವದ ಹಲವು ಭಾಷೆಗಳ ಕೃತಿಗಳನ್ನು ಇತರೆ ಭಾಷೆಗಳಿಗೆ ಅನುವಾದಿಸುತ್ತಾರೆ. ಮೂಲ ಲೇಖಕನ ಆಶಯ, ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಎರಡು ಭಾಷೆಯ ನಡುವೆ ಸಂಬಂಧ ಬೆಸೆದಂತೆಯೇ. ಅಂಬೇಡ್ಕರ್ ಅವರ ಚಿಂತನೆ, ಭಾಷಣಗಳು ಕನ್ನಡ ಭಾಷೆಗೆ ಒಗ್ಗುವಂತೆ ಅನುವಾದ ಆಗಬೇಕಿದೆ ಎಂದು ಅವರು ಹೇಳಿದರು.

ಕುವೆಂಪು ಅವರು ಮನುಜ ಮತ ವಿಶ್ವಪಥ ಸಂದೇಶ ನೀಡಿದರು. ಆದರೆ, ದುಷ್ಟ, ಧೂರ್ತ ರಾಜಕಾರಣಿಗಳು ದೇಶ, ಜನಾಂಗಗಳ ನಡುವೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶ್ವದಲ್ಲಿ ಸೌಹಾರ್ದ, ಶಾಂತಿಯ ವಾತಾವರಣದೊಂದಿಗೆ ಒಳಿತಿನ ಕಡೆಗೆ ಮುನ್ನಡೆಸುವ ಕೆಲಸವನ್ನು ಅತ್ಯುತ್ತಮ ಸಾಹಿತ್ಯ, ಚಿಂತನೆಗಳ ಅನುವಾದಕರು ಮಾಡಬೇಕು ಎಂದು ಎಸ್‌.ಜಿ. ಸಿದ್ದರಾಮಯ್ಯ ಸಲಹೆ ನೀಡಿದರು.

ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಮಾತನಾಡಿ, ಅನುವಾದ ಕೃತಿಗಳ ಪ್ರಕಟಣೆ, ಕಮ್ಮಟ, ಫೆಲೋಶಿಪ್‌ಗಳ ಮೂಲಕ ಲೇಖಕರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಪ್ರಮುಖ ಸಾಹಿತಿಗಳ ಬರಹಗಳನ್ನು ಇ-ಬುಕ್‌ ಹಾಗೂ ಆಡಿಯೋ ಬುಕ್‌ಗಳನ್ನು ಸಿದ್ಧಪಡಿಸುವ ಯೋಜನೆಯನ್ನು ಪ್ರಾಧಿಕಾರ ರೂಪಿಸುತ್ತಿದೆ ಎಂದರು.

ಬೂಕರ್‌ ಪ್ರಶಸ್ತಿ: ಪ್ರಶಸ್ತಿ ಸ್ವೀಕರಿಸಿದ ಲೇಖಕಿ ಕೆ.ಆರ್‌. ಸಂಧ್ಯಾರೆಡ್ಡಿ ಮಾತನಾಡಿ, ಬಾನು ಮುಷ್ತಾಕ್‌ ಅವರ ಎದೆಯ ಹಣತೆ ಕೃತಿಯನ್ನು ದೀಪಾ ಭಸ್ತಿ ಅವರು ಹಾರ್ಟ್‌ ಲ್ಯಾಂಪ್‌ ಎನ್ನುವ ಹೆಸರಲ್ಲಿ ಅನುವಾದ ಮಾಡಿದ್ದಕ್ಕೆ ಬೂಕರ್‌ ಪ್ರಶಸ್ತಿ ಬಂದಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅನುವಾದಕ್ಕೆ ವಿಪುಲ ಅವಕಾಶಗಳಿವೆ ಎಂದು ಹೇಳಿದರು.

ಅನುವಾದಕರಾದ ಜಿ.ವಿ. ಕರ್ಲೋ, ವನಮಾಲಾ ವಿಶ್ವನಾಥ, ವಿಠಲರಾವ್ ಗಾಯಕ್ವಾಡ್ ಹಾಗೂ ಜೆ.ಪಿ. ದೊಡಮನಿ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಏಕತಾರಿ, ಆ ಲಯ ಈ ಲಯ, ಬೌಮನಿಜಂ- ಆಧುನಿಕತೆಯಿಂದ ದ್ರವಾಧು ನಿಕತೆಯವರೆಗೆ, ಸತ್ತವರ ಸೊಲ್ಲು ಹಾಗೂ ಹಾಥಿ ಪಾಲ್ನೆ ಜೋ ಚಲಿ ಕೃತಿಗಳ ಅನುವಾದಕರಾದ ಆರ್. ಸದಾನಂದ, ನಟರಾಜ ಹೊನ್ನವಳ್ಳಿ, ಮಲ್ಲೇಶಪ್ಪ ಸಿದಾಂಪುರ, ಆರ್. ಕಾರ್ತಿಕ್ ಮತ್ತು ಎನ್. ದೇವರಾಜ ಅವರಿಗೆ ಪುಸ್ತಕ ಬಹುಮಾನ ಪ್ರದಾನ ಮಾಡಲಾಯಿತು.