ಕನ್ನಡಪ್ರಭ ವಾರ್ತೆ ದಾವಣಗೆರೆ

12ನೇ ಶತಮಾನದಲ್ಲಿ ಸಮಾನತೆಗೆ ಕ್ರಾಂತಿಕಾರಿ ಮುನ್ನುಡಿ ಬರೆದ ಬಸವಣ್ಣನವರಂಥ ಮಹನೀಯರು ಮತ್ತು ಕ್ರಾಂತಿಕಾರಿಗಳ ಜೀವನಗಾಥೆ ಕುರಿತಾದ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ಆಗ ಮಾತ್ರ ನಮ್ಮಲ್ಲಿನ ಹಲವು ಪ್ರಶ್ನೆಗಳು ಮತ್ತು ಕುತೂಹಲಗಳಿಗೆ ಉತ್ತರ ಸಿಗುತ್ತದೆ. ಪುಸ್ತಕದಲ್ಲಿ ಸಿಗುವ ಮಾಹಿತಿ ಇನ್ನೆಲ್ಲಿಯೂ ಸಿಗಲಾರದು ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯಕುಮಾರ್ ತಿಳಿಸಿದರು.

ತಾಲೂಕಿನ ಗೋಪನಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ದಾವಣಗೆರೆ ತಾಲೂಕು ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಶರಣ ಅಲ್ಲಮಪ್ರಭು ಜಯಂತಿ, ದತ್ತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಮೊಬೈಲ್, ಇಂಟರ್ ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಯುವಪೀಳಿಗೆ ಮುಳುಗಿ ಹೋಗಿದೆ. ಇತಿಹಾಸ ಕುರಿತಾದ ಎಷ್ಟೋ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರೆಯುತ್ತದೆ. ಪ್ರತಿಯೊಬ್ಬರೂ ಸಾಹಿತ್ಯ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬಸವಣ್ಣನವರ ಜೀವನಚರಿತ್ರೆ ಪುಸ್ತಕಗಳನ್ನು ಓದಿ. ಆಗ ಕಲ್ಯಾಣ ಕ್ರಾಂತಿ ಏಕೆ ಆಯಿತು. ಬಳಿಕ ಕರ್ನಾಟಕದಲ್ಲಿ ಆದದ್ದೇನು ಎಂಬ ಬಗ್ಗೆ ಮಾಹಿತಿ ದೊರೆಯಲಿದೆ ಎಂದರು.

ಮಾಹಿತಿ, ಜ್ಞಾನ ಸುಮ್ಮನೆ ಸಿಗುವುದಿಲ್ಲ. ಪಠ್ಯೇತರ ಪುಸ್ತಕಗಳನ್ನು ಓದಬೇಕು. ಕಥೆ, ಕಾದಂಬರಿ, ಸಾಮಾನ್ಯ ಜ್ಞಾನ, ಮಹನೀಯರು, ಕ್ರಾಂತಿಕಾರಿ ಪುರುಷರು, ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಸಮಾಜದ ಏಳಿಗೆ, ಸಮಾನತೆ, ಅನಿಷ್ಟ ಪದ್ಧತಿಗಳ ವಿರುದ್ಧ ಸಮರ ಸಾರಿದವರು. ಸಮಾಜದ ಬದಲಾವಣೆಗೆ ಜೀವನವನ್ನೇ ಮುಡುಪಾಗಿಟ್ಟವರು ಎಂದು ಹೇಳಿದರು.


ಐಎಎಸ್ ಸುಲಭವಾಗಿ ಮಾಡಲು ಆಗದು. ಸಾಕಷ್ಟು ಪರಿಶ್ರಮ, ಕಲಿಕೆ, ತಪಸ್ಸು, ಅಧ್ಯಯನ ಸೇರಿದಂತೆ ಕನಿಷ್ಠ ಮೂರರಿಂದ ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಲೇಬೇಕು. ಪ್ರೌಢಶಿಕ್ಷಣದಿಂದಲೇ ಪ್ರತಿನಿತ್ಯ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳನ್ನು ಹೆಚ್ಚಾಗಿ ಓದುವುದರಿಂದ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಿಳಿಯುತ್ತದೆ ಎಂದರು.

ದಾವಣಗೆರೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಬಿ. ರುದ್ರಗೌಡ ಗೋಪನಾಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರಯ್ಯ ಬಿ. ಎಂ.ಹೆಮ್ಮನಬೇತೂರು ಅಲ್ಲಮಪ್ರಭುಗಳ ಕುರಿತಂತೆ ಮಾತನಾಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಟಿ. ನಾಗರಾಜ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಉಪಾಧ್ಯಕ್ಷ ಟಿ.ಎಂ.ಶಿವಮೂರ್ತಯ್ಯ, ಕೆ.ಸಿ.ನಾಗರಾಜ್ ಅತ್ತಿಗೆರೆ, ಕಲವಿವೀರ್ ಕಳ್ಳೀಮನಿ, ಬಿ. ಜಿ. ಮರುಳಸಿದ್ದಯ್ಯ ಬಸವನಾಳು, ಕರೂರು ಹನುಮಂತಪ್ಪ, ಗೋಪನಾಳು ಸರ್ಕಾರಿ ಪ್ರೌಢ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಜಿ.ಎಸ್.ಅಂಜನಪ್ಪ, ಪ್ರಗತಿಪರ ಚಿಂತಕ ಹೆಚ್. ಈಶ್ವರಪ್ಪ ಗೋಪನಾಳು ಮತ್ತಿತರರು ಹಾಜರಿದ್ದರು.