ಕನ್ನಡಪ್ರಭ ವಾರ್ತೆ ಬೇಲೂರು

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ (ಸೆಸ್ಕಾಂ) ಉಪವಿಭಾಗದ ವತಿಯಿಂದ ಶ್ರೀ ಚನ್ನಕೇಶವ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ತಾಲೂಕಿನ ಜನತೆಗೆ ವರ್ಷಪೂರ್ತಿ ನಿರಂತರ, ಗುಣಮಟ್ಟದ ಹಾಗೂ ಸುರಕ್ಷಿತ ವಿದ್ಯುತ್ ಸರಬರಾಜು ದೊರೆಯಲಿ ಎಂಬ ಆಶಯದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ (ಸೆಸ್ಕಾಂ) ಉಪವಿಭಾಗದ ವತಿಯಿಂದ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ಕಾರ್ಯಕ್ರಮವನ್ನು ಶ್ರದ್ಧಾ- ಭಕ್ತಿಯಿಂದ ನೆರವೇರಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಇಲಾಖೆಯ ಪರವಾಗಿ ಆಯೋಜಿಸಲಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ, ವಿದ್ಯುತ್ ಇಲಾಖೆಯ ಮೇಲೆ ಚನ್ನಕೇಶವ ಸ್ವಾಮಿಯ ಕೃಪೆ ಸದಾ ಇರಲಿ ಎಂದು ಪ್ರಾರ್ಥಿಸಿದರು. ವಿಶೇಷವಾಗಿ ಮಳೆ ಸಮರ್ಪಕವಾಗಿ ಸುರಿದು ಕೃಷಿ ಸಮೃದ್ಧಿಯಾಗಲಿ, ಪ್ರಕೃತಿ ವಿಕೋಪಗಳು ಅಥವಾ ವಿದ್ಯುತ್ ಅವಘಡಗಳು ಸಂಭವಿಸದಂತೆ ತಾಲೂಕಿನ ಜನತೆ ಸುರಕ್ಷಿತವಾಗಿರಲಿ ಎಂಬ ಆಶಯ ವ್ಯಕ್ತಪಡಿಸಲಾಯಿತು.

ಸಹಾಯ ಕಾರ್ಯಪಾಲಕ ಇಂಜಿನಿಯರ್ ಬಸವರಾಜು ಮಾತನಾಡಿ, ಇಲಾಖೆಯ ಪರವಾಗಿ ಪ್ರತಿ ವರ್ಷ ಚನ್ನಕೇಶವ ಸ್ವಾಮಿಗೆ ಅಭಿಷೇಕ ಮಾಡುವುದು ವಾಡಿಕೆಯಾಗಿ ಬೆಳೆದು ಬಂದಿದೆ . ವಿದ್ಯುತ್ ಅವಘಡಗಳು ಕಡಿಮೆಯಾಗಲಿ, ಜನರ ಜೀವ- ಸಂಪತ್ತು ರಕ್ಷಿತವಾಗಿರಲಿ ಹಾಗೂ ನಮ್ಮ ಇಲಾಖೆಯ ಎಲ್ಲಾ ಕೆಲಸಗಳು ಸುಗಮವಾಗಿ ಸಾಗಲಿ ಎಂಬ ಉದ್ದೇಶದಿಂದ ಈ ಪೂಜೆ ನಡೆಸಲಾಗುತ್ತಿದೆ. ಮಳೆಯೂ ಸಮರ್ಪಕವಾಗಿ ಬಂದು ತಾಲೂಕಿನ ಅಭಿವೃದ್ಧಿಗೆ ದಾರಿ ಮಾಡಿಕೊಡಲಿ ಎಂಬ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.


ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಶಿಸ್ತಿನಿಂದ ಮಾಡಲಾಗಿದೆ. ದೇವರ ಕೃಪೆಯಿಂದ ನಮ್ಮ ಸಿಬ್ಬಂದಿ ಆರೋಗ್ಯದಿಂದ ಸೇವೆ ಸಲ್ಲಿಸಲಿ, ಯಾವುದೇ ಅನಾಹುತಗಳು ಸಂಭವಿಸದಂತೆ ಇಲಾಖೆ ಕಾರ್ಯನಿರ್ವಹಿಸಲಿ ಎಂಬ ಆಶಯದೊಂದಿಗೆ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.

ಡಿವಿಜನ್ ಅಧ್ಯಕ್ಷ ಜಗದೀಶ್, ಕೇಂದ್ರ ಸಮಿತಿ ಸದಸ್ಯ ನವಾಜ್ ಖಾನ್, ಕಿರಿಯ ಇಂಜಿನಿಯರ್ ರೇವಣ್ಣ, ರಾಘವೇಂದ್ರ, ಪುಟ್ಟರಾಜು, ಮಂಜುನಾಥ್ ಸೇರಿದಂತೆ ವಿದ್ಯುತ್ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.