ಹುಬ್ಬಳ್ಳಿ:
ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ರಾಜ್ಯವ್ಯಾಪಿ ಹೋರಾಟ ನಡೆದಿದ್ದವು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವ ಜತೆಗೆ ಆಸರೆಯಾಗುವ ಭರವಸೆ ನೀಡಿತ್ತು. ಅದರಂತೆ ಕಿತ್ತೂರು ಉತ್ಸವಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಮೃತ ಅಂಜಲಿ ಸಹೋದರಿಯರಿಗೆ ಚೆಕ್ ಹಸ್ತಾಂತರಿಸಿದರು. 2024 ಮೇ 15ರಂದು ಬೆಳ್ಳಂಬೆಳಗ್ಗೆ 5.30ರ ಸುಮಾರಿಗೆ ಮನೆಗೆ ನುಗ್ಗಿದ ಆರೋಪಿ ಗಿರೀಶ ಸಾವಂತ ಎಂಬಾತ ಅಂಜಲಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮಾಸುವ ಮುನ್ನವೇ ವಾಣಿಜ್ಯನಗರಿಯಲ್ಲಿ ನಡೆದಿದ್ದ ಅಂಜಲಿ ಹತ್ಯೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಈ ಪ್ರಕರಣ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆಗಳು ಸಹ ನಡೆದಿದ್ದವು.
ಇನ್ನೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಸೇರಿ ರಾಜ್ಯದ ಜನತೆ ಕಿಡಿಕಾರಿದ್ದರಲ್ಲದೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿ ವಿಪಕ್ಷ, ವಿವಿಧ ಸಂಘಟನೆಗಳು ಹಾಗೂ ಅಂಬಿಗೇರ ಸಮಾಜ ಸೇರಿ ಎಲ್ಲ ಸಮುದಾಯಗಳು ಒಟ್ಟುಗೂಡಿ ಹೋರಾಟ ನಡೆಸಿದ್ದರು. ಈ ವೇಳೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು, ಅನೇಕ ಗಣ್ಯರು ಹಾಗೂ ಎಲ್ಲ ಸಮುದಾಯದ ಮುಖಂಡರು ವೀರಾಪೂರ ಓಣಿಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅಲ್ಲದೇ, ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದರು.ರಾಜ್ಯವ್ಯಾಪಿ ನಡೆದಿದ್ದ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಕುಟುಂಬಕ್ಕೆ ಪರಿಹಾರ ಮತ್ತು ಆಸರೆಯಾಗುವ ಭರವಸೆ ನೀಡಿತ್ತು. ಅದರಂತೆ ಅವರ ನಿವಾಸಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಸಹ ಭೇಟಿ ನೀಡಿ ಸಾಂತ್ವನ ಹೇಳಿ, ಪರಿಹಾರ, ಮನೆ ಹಾಗೂ ಅವರ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದರು. ಸರ್ಕಾರ ನೀಡಿದ ಭರವಸೆಯಂತೆ ಪರಿಹಾರ ಚೆಕ್ ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಆ ಕುಟುಂಬಕ್ಕೆ ಮನೆ ನೀಡುವ ಭರವಸೆ ನೀಡಿದೆ.