ಜಾತ್ರಾ ಮಹೋತ್ಸವದ ಲೆಕ್ಕಪತ್ರಗಳ ಸಭೆ । ಮುಂದಿನ ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಸಲು ತೀರ್ಮಾನ
ಪಟ್ಟಣದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವದ ಲೆಕ್ಕಪತ್ರಗಳ ಸಭೆ ನಡೆಯಿತು.
ಸಭೆಯ ನೇತೃತ್ವ ವಹಿಸಿದ ಸಮಿತಿಯ ಅಧ್ಯಕ್ಷ ರವಿಕುಮಾರ ಹಿರೇಮಠ ಮಾತನಾಡಿ, ಸುಮಾರು 65 ವರ್ಷಗಳ ನಂತರ ನಡೆದ ದ್ಯಾಮವ್ವ ದೇವಿಯ ಜಾತ್ರೆಯನ್ನು ಸುಮಾರು 11 ದಿನಗಳ ಕಾಲ ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕೆ ಭಕ್ತವೃಂದಕ್ಕೆ ಧನ್ಯವಾದ ತಿಳಿಸುವುದಾಗಿ ಹೇಳಿದರು.ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಂದ ಹಾಗೂ ದೇವಸ್ಥಾನದ ಹುಂಡಿಯಲ್ಲಿ ಒಟ್ಟು ₹1,25,88,020 ಜಮೆಯಾಗಿದ್ದು, ಈ ಪೈಕಿ ಜಾತ್ರೆಯ ಖರ್ಚು ₹68,56,929 ಆಗಿದ್ದು, ಇನ್ನು ₹ 56,31.091 ಉಳಿದಿದೆ ಎಂದು ಮಾಹಿತಿ ನೀಡಿದರು.
ಸಮಸ್ತ ನಾಗರಿಕರ ಒಪ್ಪಿಗೆ ಮೇರೆಗೆ ಉಳಿದ ಹಣವನ್ನು ಶ್ರೀ ದ್ಯಾಮಾಂಬಿಕಾ ದೇವಿಯ ದೇವಸ್ಥಾನದ ಸಮಿತಿಯ ಬ್ಯಾಂಕ್ ಖಾತೆಯಲ್ಲಿ ₹50 ಲಕ್ಷವನ್ನು ಐದು ವರ್ಷಗಳ ಕಾಲ ಠೇವಣಿ ಇಡಲಾಗುತ್ತದೆ. ಇನ್ನುಳಿದ ₹6.31.091ನ್ನು ಎಸ್.ಬಿ. ಖಾತೆಯಲ್ಲಿ ಉಳಿಸಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಇಡಲಾಗುವುದು ತಿಳಿಸಿದರು.
ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರೆಯನ್ನು ಅತ್ಯಂತ ಅದ್ಧೂರಿಯಾಗಿ ಪ್ರತಿ 5 ವರ್ಷಕ್ಕೊಮ್ಮೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಸಪ್ತ ಭಜನೆಯ ಶಿವನ ಮೇಟಿ ಕಂಬವನ್ನು ಹರಾಜು ಮಾಡಲಾಯಿತು. ಈ ಸಂದರ್ಭದಲ್ಲಿ ಗಂಗಾಧರಯ್ಯ ಹಿರೇಮಠ, ಶಶಿಧರ ಕವಲಿ, ದೇವಪ್ಪ ಕಟ್ಟಿಹೊಲ, ಮಾನಪ್ಪ ಕಮ್ಮಾರ, ನಾಗರಾಜ ಮೇಲಿನಮನಿ, ಮಹಾಂತಯ್ಯ ಅರಳೇಲಿಮಠ, ಕಲ್ಲೇಶ ತಾಳದ, ಉಮೇಶ ಮಂಗಳೂರ, ರಮೇಶ ಹಿರೇಮನಿ, ಭರಮಪ್ಪ ಚೌಡ್ಕಿ ಸೇರಿದಂತೆ ಅನೇಕ ಗುರು ಹಿರಿಯರು ಇದ್ದರು.