ವಿಜಯಪುರ: ಸಿರಿಧಾನ್ಯ, ಪುಷ್ಪಗಳಲ್ಲಿ ಸಿದ್ದೇಶ್ವರ ಶ್ರೀ ಕಲಾಕೃತಿ

KannadaprabhaNewsNetwork | Updated : Jan 14 2024, 05:19 PM IST

ಸಾರಾಂಶ

ತೋಟಗಾರಿಕೆ ಇಲಾಖೆಯ ಆವರಣದ ಬಸವವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಜಿಲ್ಲಾ ಹಾಪ್‌ಕಾಮ್ಸ್ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಫಲ-ಪುಷ್ಪಗಳ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನ

ಕನ್ನಡಪ್ರಭ ವಾರ್ತೆ ವಿಜಯಪುರ

ತೋಟಗಾರಿಕೆ ಇಲಾಖೆಯ ಆವರಣದ ಬಸವವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಜಿಲ್ಲಾ ಹಾಪ್‌ಕಾಮ್ಸ್ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಫಲ-ಪುಷ್ಪಗಳ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಮಹಾನಗರ ಪಾಲಿಕೆಯ ಮೇಯರ್ ಮಹೇಜಬಿನ ಅಬ್ದುಲ್‌ರಜಾಕ ಹೊರ್ತಿ ಶನಿವಾರ ಚಾಲನೆ ನೀಡಿದರು. 

ಪ್ರದರ್ಶನದಲ್ಲಿ ವಿವಿಧ ಬಗೆಯ ಸಿರಿಧಾನ್ಯಗಳು, ಬಣ್ಣ-ಬಣ್ಣದ ಹೂಗಳಿಂದ ಸಿದ್ಧಪಡಿಸಿದ್ದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರತಿಕೃತಿ ಗಮನ ಸೆಳೆಯಿತು. ವಿಜಯಪುರದ ಪ್ರಸಿದ್ಧ ದ್ರಾಕ್ಷಿಯಿಂದ ಮಂಟಪ ನಿರ್ಮಿಸಿ, ಅದರಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರ ಗಮನ ಆಕರ್ಷಕವಾಗಿದೆ. 

ಪ್ರಕೃತಿ, ಹೂವುಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಜೀವನದ ಅಪರೂಪದ ಭಾವಚಿತ್ರಗಳನ್ನು ಇರಿಸಲಾಗಿದೆ.ರಂಗೋಲಿಯಲ್ಲಿ ಅರಳಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಸಿದ್ಧಗಂಗಾ ಶ್ರೀ ಚಿತ್ರಗಳ ಜೊತೆ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡರು. 

ಹಾಗಲಕಾಯಿಯಲ್ಲಿ ಮೊಸಳೆ, ಕಲ್ಲಂಗಡಿಗಳಲ್ಲಿ ದ.ರಾ. ಬೇಂದ್ರೆ, ಕುವೆಂಪು, ಪುನೀತ ರಾಜಕುಮಾರ ಹೀಗೆ ಅನೇಕ ಮಹನೀಯರ ಭಾವಚಿತ್ರಗಳನ್ನು ಮನೋಜ್ಞವಾಗಿ ಮೂಡಿ ಬಂದಿವೆ.

ವಿವಿಧ ಬಗೆಯಲ್ಲಿ ತಯಾರಿಸಿದ ಚಂದ್ರಯಾನ-೩ರ ರಾಕೆಟ್, ೩೦ ವಿವಿಧ ಬಗೆಯ ಸಾಂಬಾರು ಪದಾರ್ಥಗಳಿಂದ ಸಿದ್ಧಪಡಿಸಿದ ಗಣಪತಿ, ಸಿರಿ ಧಾನ್ಯಗಳಿಂದ ತಯಾರಿಸಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಬಸವೇಶ್ವರ ಮೂರ್ತಿ, ನಿಂಬೆಹಣ್ಣುಗಳ ಮಂಟಪ, ನೀರಿನ ಜಲಧಾರೆ, ಮನೆ, ಮೀನುಗಳು, ಕರ್ನಾಟಕ ನಕ್ಷೆ, ನವಿಲು ಹಾಗೂ ತರಕಾರಿಯಿಂದ ರಚಿಸಿರುವ ರಂಗೋಲಿ ಆಕರ್ಷಣೆಯಾಗಿವೆ.

ಮೇಳದಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಬಾಳೆ, ದ್ರಾಕ್ಷಿ, ದಾಳಿಂಬೆ, ಪೇರು, ಬಾರೇಕಾಯಿ, ನಿಂಬೆ, ಚಿಕ್ಕು, ರೋಸ್ ಆ್ಯಪಲ್, ನೇರಳೆ, ಅಂಜೂರ, ಪಪಾಯ ಹಾಗೂ ತರಕಾರಿಗಳಾದ ಈರುಳ್ಳಿ, ಬದನೆ, ಟೊಮೋಟೊ, ಕುಂಬಳಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಬಿಟ್ರೂಟ್, ಮೂಲಂಗಿ.

ಪಾಲಕ್, ಕ್ಯಾಬೇಜ್, ಮೆಕ್ಕೆಜೋಳ, ನುಗ್ಗೆಕಾಯಿ, ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಮಲ್ಲಿಗೆ, ಕನಕಾಂಬರ, ಗುಲಾಬಿಗಳನ್ನು ಪ್ರದರ್ಶನದಲ್ಲಿವೆ. ಆಲದಮರ, ಹಲಸಿನ ಮರ, ಅರಳಿಮರ, ನೇರಳೆ, ವಿವಿಧ ಬೋನ್ಸಾಯ್ ಪದ್ಧತಿಯಲ್ಲಿ ಬೆಳೆದ ಗಿಡಗಳ ಪ್ರದರ್ಶನದಲ್ಲಿವೆ.

ಪ್ರದರ್ಶನ ಹಾಗೂ ಮಾರಾಟ ಮಳಿಗೆ: ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ರೇಷ್ಮೆ ಇಲಾಖೆ, ತಾಳೆ ಬೆಳೆ ಅಭಿವೃದ್ಧಿ ಯೋಜನೆ, ಭಾಗ್ಯಜ್ಯೋತಿ ರೈತ ಉತ್ಪನದ ಮಳಿಗೆ, ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಭಿಯಾನ, ಹಾಪ್‌ಕಾಮ್ಸ್, ಸೋಲಾರ್ ವಾಟರ್ ಪಂಪ್‌ಸೆಟ್‌ಗಳ ಪ್ರದರ್ಶನ, ವಿವಿಧ ಕಂಪನಿಗಳ ಟ್ರಾಕ್ಟರ್, ರೋಟಿವೆಟರ್ ಕೃಷಿ ಯಂತೋಪಕರಣಗಳ ಸೆರಿದಂತೆ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿವೆ.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಬಾವಿದೊಡ್ಡಿ ರಾಹುಕುಮಾರ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ದಾನಮ್ಮ ಪಾಟೀಲ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಆಡಳಿತ ಮಂಡಳಿಯ ನಿರ್ದೇಶಕ ಬಿ.ಎಂ,ಕೋಕರೆ ಸೇರಿ ಮುಂತಾದವರು ಇದ್ದರು.

Share this article