ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು : ಮದ್ಯದ ಅಂಶದ ಆಧಾರದಲ್ಲಿ ಹೊಸ ಸುಂಕ ವ್ಯವಸ್ಥೆಯನ್ನು ಏ.1ರಿಂದಲೇ ಜಾರಿಗೆ ತರಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿರುವುದರಿಂದ ಬಿಯರ್‌, ವೈನ್‌ ಅಗ್ಗವಾದರೆ, ವಿಸ್ಕಿ, ರಮ್‌ ದುಬಾರಿಯಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ‘ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು(ಆಲ್ಕೋಹಾಲ್‌ ಇನ್‌ ಬಿವರೇಜ್‌) ಆಧರಿಸಿ ತೆರಿಗೆ ವಿಧಿಸಲಾಗುತ್ತಿದೆ. ಇದೇ ಮಾನದಂಡ ಆಧಾರವಾಗಿಟ್ಟುಕೊಂಡು ಏ.1 ರಿಂದ ಹೊಸ ಸುಂಕ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದು ಘೋಷಿಸಿದ್ದಾರೆ. ಇದು ಅನುಷ್ಠಾನವಾದರೆ ದೇಶದಲ್ಲೇ ಈ ರೀತಿ ಹೊಸ ವ್ಯವಸ್ಥೆ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಆಗಲಿದೆ.


ಬಿಯರ್‌ನಲ್ಲಿ ಮದ್ಯದ ಪ್ರಮಾಣ ಶೇ.4 ರಿಂದ 9

ಸಾಮಾನ್ಯವಾಗಿ ಬಿಯರ್‌ನಲ್ಲಿ ಮದ್ಯದ ಪ್ರಮಾಣ ಶೇ.4 ರಿಂದ 9 ರಷ್ಟಿದ್ದರೆ, ವಿಸ್ಕಿ, ರಮ್‌, ಜಿನ್ನ ಸೇರಿ ಐಎಂಲ್‌ ಮದ್ಯದಲ್ಲಿ ಇದು ಶೇ.30 ರಿಂದ 50 ರವರೆಗೂ ಇರುತ್ತದೆ. ಈ ಆಧಾರದಲ್ಲಿ ಸುಂಕ ವಿಧಿಸಿದರೆ ಬಿಯರ್‌, ವೈನ್‌ ದರ ಕಡಿಮೆಯಾಗಲಿದ್ದು ಕಡಿಮೆ ದರದ ವಿಸ್ಕಿ, ರಮ್‌ ಬೆಲೆ ಅಧಿಕವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಆಲ್ಕೋಹಾಲ್‌ ಅಂಶವೇ ಮಾನದಂಡ:

ದರ ನಿಗದಿ ತರ್ಕಬದ್ಧಗೊಳಿಸಲು ಹಾಲಿ ಇರುವ 16 ಸ್ಲ್ಯಾಬ್‌ಗಳನ್ನು 8 ಸ್ಲ್ಯಾಬ್‌ಗೆ ಇಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದೆ. ಅದರಂತೆ ಆಲ್ಕೋಹಾಲ್‌ ಪ್ರಮಾಣದ ಆಧಾರದಲ್ಲಿ ಬಿಯರ್‌ ಅಥವಾ ಐಎಂಎಲ್‌ ಮದ್ಯವನ್ನು ಸ್ಲ್ಯಾಬ್‌ಗಳಿಗೆ ಸೇರ್ಪಡೆ ಮಾಡಲಾಗುತ್ತದೆ. ಬಿಯರ್‌ ಲೇಬಲ್‌ಗಳಲ್ಲಿ ಮಾಲ್ಟ್‌ ಮತ್ತು ಸಕ್ಕರೆ ಅಂಶವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಈ ಹಿಂದೆ ಅಬಕಾರಿ ಇಲಾಖೆ ಆದೇಶ ಹೊರಡಿಸಿತ್ತು.

ಆದರೆ, ಇದೀಗ ಮಾಲ್ಟ್‌ ಮತ್ತು ಸಕ್ಕರೆ ಅಂಶವನ್ನು ಕಡ್ಡಾಯವಾಗಿ ನಮೂದಿಸುವ ಅಗತ್ಯ ರದ್ದುಗೊಳಿಸಲಾಗುವುದು ಎಂದು ಘೋಷಿಸಿರುವುದು ರಾಜ್ಯದಲ್ಲಿ ಭಾರೀ ಕುಸಿತ ಕಂಡಿರುವ ಬಿಯರ್‌ ಮಾರಾಟ ಉತ್ತೇಜಿಸಲು ಎಂದು ವಿಶ್ಲೇಷಿಸಲಾಗುತ್ತಿದೆ.

ಈ ನಡುವೆ ಮದ್ಯ ಮಾರಾಟಗಾರರೂ ಗೊಂದಲದಲ್ಲಿದ್ದು ಚರ್ಚೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ಗ್ರಾಹಕರನ್ನು ನೇರವಾಗಿ ತಲುಪುವವರು ಚಿಲ್ಲರೆ ಮದ್ಯ ಮಾರಾಟಗಾರರು. ಆದರೆ, ಬಜೆಟ್‌ನಲ್ಲಿ ಘೋಷಿಸಿರುವುದನ್ನು ಅರ್ಥೈಸಿಕೊಳ್ಳಲು ನಮಗೇ ಸಾಧ್ಯವಾಗುತ್ತಿಲ್ಲ. ಕೆಲ ಗೊಂದಲ ಉಂಟಾಗಿರುವುದರಿಂದ ಚರ್ಚಿಸಲು ಸಭೆ ಕರೆಯಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

- ಬಿ.ಗೋವಿಂದರಾಜ್‌ ಹೆಗ್ಡೆ, ಫೆಡರೇಷನ್‌ ಆಫ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಕರ್ನಾಟಕದ ಪ್ರಧಾನ ಕಾರ್ಯದರ್ಶಿ