‘ಅಚ್ಚಿಯಂಡ ಕಪ್’ ಕ್ರಿಕೆಟ್‌ ಲೋಗೋ ಬಿಡುಗಡೆ

KannadaprabhaNewsNetwork | Published : Dec 26, 2023 1:31 AM

ಸಾರಾಂಶ

ಹಾತೂರು ಪ್ರೌಢಶಾಲಾ ಮೈದಾನದಲ್ಲಿ 2024 ರ ಏಪ್ರಿಲ್ 27 ಮತ್ತು 28 ರಂದು ಅಚ್ಚಿಯಂಡ ಕಪ್ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದೆ. ಈ ಟೂರ್ನಿಯ ಲೋಗೋವನ್ನು ಶಾಸಕ ಪೊನ್ನಣ್ಣ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ಹಾತೂರು ಪ್ರೌಢಶಾಲಾ ಮೈದಾನದಲ್ಲಿ 2024 ರ ಏಪ್ರಿಲ್ 27 ಮತ್ತು 28 ರಂದು ನಡೆಯಲಿರುವ ಅಮ್ಮ ಕೊಡವ ಕ್ರಿಕೆಟ್ ನಮ್ಮೆ ‘ಅಚ್ಚಿಯಂಡ ಕಪ್’ ಲೋಗೋ ಬಿಡುಗಡೆ ಕಾರ್ಯಕ್ರಮ ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದಲ್ಲಿರುವ ಅಚ್ಚಿಯಂಡ ಐನ್‌ಮನೆಯಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಲೋಗೋ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, ಈ ಮಣ್ಣು, ಈ ಸಂಸ್ಕೃತಿಗಾಗಿ, ಸಮುದಾಯದವರು ಒಂದಾಗಬೇಕಾಗಿದೆ. ಬೇಡಿಕೆಗಳನ್ನ ಮತ್ತು ಹಕ್ಕನ್ನು ಪಡೆದುಕೊಳ್ಳುವ ಧ್ವನಿ ಆಗಬೇಕಾಗಿದೆ ಎಂದರು.

ಸಣ್ಣ ಸಣ್ಣ ಸಮುದಾಯಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲ ಹೊಂದಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಮೀಸಲಾತಿಯನ್ನು ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕಾಗಿದೆ. ಜಾತಿ, ಧರ್ಮ ಎಲ್ಲವೂ ನಂಬಿಕೆ ಮತ್ತು ವಿಶ್ವಾಸದ ವಿಚಾರವಾಗಿದ್ದು, ನಾವು ನಮ್ಮ ಮನುಷ್ಯ ಸಹಜ ಗುಣಗಳಿಂದ ಬದುಕು ನಡೆಸಬೇಕು. ಅಮಾನವೀಯ ಮನಸ್ಥಿತಿಗಳಿಂದ ಹೊರಬರಬೇಕು ಎಂದರು.ಕೊಡಗು ನಾಡನ್ನು ವಿಶ್ವಾಸ ಪ್ರೀತಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಕಟ್ಟುವ ಮೂಲಕ ಇಲ್ಲಿನ ಸಂಸ್ಕೃತಿ ಆಚಾರ ವಿಚಾರ ಸಮುದಾಯದ ಬದುಕುಗಳನ್ನು ತಿಳಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.ಅಮ್ಮ ಕೊಡವ ಕ್ರಿಕೆಟ್ ಹಬ್ಬವಾಗಿ ಆಚರಣೆಯಾಗಲಿ. ಹೆಣ್ಣು ಮಕ್ಕಳಿಗೂ ಹೆಚ್ಚಿನ ಆದ್ಯತೆ ಸಿಗುವಂತಾಗಲಿ. ಈ ಕ್ರೀಡಾಕೂಟದಿಂದ ಪ್ರೀತಿ, ಸ್ನೇಹ, ಬಾಂಧವ್ಯಗಳು ಇನ್ನಷ್ಟು ವೃದ್ಧಿಸಲಿ. ಸಮುದಾಯದ ಸಂಖ್ಯಾಬಲವನ್ನ ಪ್ರತಿನಿಧಿಸಲು ಅಮ್ಮ ಕೊಡವ ಮೇಳ ನಡೆಸಲು ಚಿಂತನೆ ನಡೆಸಿರುವ ಬಗ್ಗೆ ಮಾಹಿತಿ ಪಡೆದ ಪೊನ್ನಣ್ಣ ಅವರು, ಮುಂದಿನ ದಿನಗಳಲ್ಲಿ ಈ ಕಾರ್ಯ ಸಿದ್ಧಿಗೊಳ್ಳಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಈ ಸಂದರ್ಭ ಅಚ್ಚಿಯಂಡ ಕುಟುಂಬದ ವತಿಯಿಂದ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.

ಮೈಸೂರು ಅಮ್ಮ ಕೊಡವ ಸಮಾಜ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ನಿವೇಶನ ಕೊಡಿಸುವಂತೆ ಮನವಿ ಪತ್ರವನ್ನು ಸಮಾಜದ ಅಧ್ಯಕ್ಷ ಹೆಮ್ಮಚ್ಚಿಮನೆ ಮಹೇಂದ್ರ ಮತ್ತು ಕಾರ್ಯದರ್ಶಿ ಚಿಲ್ಲಚಮ್ಮಂಡ ಉಮೇಶ್ ಅವರು ಶಾಸಕರಿಗೆ ಸಲ್ಲಿಸಿದರು.ಅಚ್ಚಿಯಂಡ ಕುಟುಂಬ ಅಧ್ಯಕ್ಷ ಅಚ್ಚಿಯಂಡ ಜಿ.ಬೋಸು ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಅಚ್ಚಿಯಂಡ ಕಪ್ ಯಶಸ್ವಿಗೆ ಸಮಾಜದ ವತಿಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.

ಗೌರವ ಅಧ್ಯಕ್ಷ ಅಚ್ಚಿಯಂಡ ಮುತ್ತಣ್ಣಮಯ್ಯ, ಉಪಾಧ್ಯಕ್ಷ ಅಚ್ಚಿಯಂಡ ಕೊಡಗು ಗಣೇಶ್, ವ್ಯವಸ್ಥಾಪಕ ಹಾಗೂ ಅಖಿಲ ಅಮ್ಮ ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಕಾರ್ಯದರ್ಶಿ ಅಚ್ಚಿಯಂಡ ಅಜಿತ್, ಹಿರಿಯರಾದ ಅಚ್ಚಿಯಂಡ ಸುಕುದೇವ್, ಅಖಿಲ ಅಮ್ಮಕೊಡವ ಸಮಾಜದ ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್, ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಲೋಗೋ ವಿನ್ಯಾಸ ಮಾಡಿದ ಅಚ್ಚಿಯಂಡ ಘನ ಶ್ಯಾಮ್, ಸಮಿತಿಯ ಸದಸ್ಯರಾದ ಅಚ್ಚಿಯಂಡ ಕಿಶೋರಿ, ರಮ್ಯ, ಪುಷ್ಪ, ಪವಿ, ಮಂಜು ಹಾಗೂ ಇನ್ನಿತರ ಅಚ್ಚಿಯಂಡ ಕುಟುಂಬಸ್ಥರು ಹಾಜರಿದ್ದರು.ಅಚ್ಚಿಯಂಡ ದೃತಿ ಪ್ರಾರ್ಥಿಸಿದರು. ಅಚ್ಚಿಯಂಡ ಗೀತಾ ನವೀನ್ ಸ್ವಾಗತಿಸಿದರು. ಅಚ್ಚಿಯಂಡ ಅಜಿತ್ ವಂದಿಸಿದರು. ಮನೋಜ್ ನಿರೂಪಿಸಿದರು.

Share this article