ನಿಯಮಾನುಸಾರ ಪಡಿತರ ವಿತರಿಸದಿದ್ದರೆ ಕ್ರಮ

KannadaprabhaNewsNetwork | Published : Apr 5, 2025 12:48 AM

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಯಲ್ಲಿ ಕಡ್ಡಾಯವಾಗಿ ದರ ಪಟ್ಟಿಯನ್ನು ನಮೂದಿಸಬೇಕು ಹಾಗೂ ಕಡ್ಡಾಯವಾಗಿ ಎಲೆಕ್ಟ್ರಾನಿಕ್ಸ್ ತಕ್ಕಡಿ ಉಪಯೋಗಿಸಬೇಕು. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡುತ್ತಿರುವುದಾಗಿ ಕೆಲವು ಫಲಾನುಭವಿಗಳು ದೂರು ನೀಡಿದ್ದು, ಇನ್ನುಮುಂದೆ ಸರಿಪಡಿಸಿಕೊಳ್ಳದಿದ್ದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಎಲ್. ಪಿ ಪ್ರಕಾಶ್‌ ಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಯಲ್ಲಿ ನಿಯಮಾನುಸಾರ ಪಡಿತರಿಸುವಂತೆ ಸೂಚಿಸಲಾಗಿದೆ.

ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಯಲ್ಲಿ ಕಡ್ಡಾಯವಾಗಿ ದರ ಪಟ್ಟಿಯನ್ನು ನಮೂದಿಸಬೇಕು ಹಾಗೂ ಕಡ್ಡಾಯವಾಗಿ ಎಲೆಕ್ಟ್ರಾನಿಕ್ಸ್ ತಕ್ಕಡಿ ಉಪಯೋಗಿಸಬೇಕು. ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡುತ್ತಿರುವುದಾಗಿ ಕೆಲವು ಫಲಾನುಭವಿಗಳು ದೂರು ನೀಡಿದ್ದು, ಇನ್ನುಮುಂದೆ ಸರಿಪಡಿಸಿಕೊಳ್ಳದಿದ್ದಲ್ಲಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಎಲ್. ಪಿ ಪ್ರಕಾಶ್‌ ಗೌಡ ತಿಳಿಸಿದ್ದಾರೆ.

ಅವರು ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ೯ನೇ ಗ್ಯಾರಂಟಿ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ೫ ಗ್ಯಾರಂಟಿ ಯೋಜನೆಗಳಿಂದ ಶೇಕಡಾ ೯೭% ಕ್ಕೂ ಮೇಲ್ಪಟ್ಟು ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗೊಳಿಸಲಾಗಿದ್ದು ಈ ವರ್ಷದ ೨೦೨೫ರ ಮಾರ್ಚ್ ಅಂತ್ಯಕ್ಕೆ ಗೃಹಲಕ್ಷ್ಮಿ ಯೋಜನೆಗೆ ತಿಂಗಳಿಗೆ ೧೫,೭೬,೬೪,೦೦೦ , ಕೋಟಿ ಹಣ, ಅನ್ನಭಾಗ್ಯ ಯೋಜನೆಗೆ ತಿಂಗಳಿಗೆ ೪,೧೭,೯೯,೯೪೦ ಕೋಟಿ ಹಣ, ಯುವನಿಧಿ ಯೋಜನೆಗೆ ತಿಂಗಳಿಗೆ ೨೧,೫೮,೫೦೦, ಶಕ್ತಿ ಯೋಜನೆಗೆ ೪,೧೭,೯೯,೯೪೮ ಕೋಟಿ ಹಣ, ಗೃಹ ಜ್ಯೋತಿ ಯೋಜನೆಗೆ ತಿಂಗಳಿಗೆ ೩,೦೪,೯೮೦೦೦ ಕೋಟಿ ಹಣ ಒಟ್ಟು ನಮ್ಮ ತಾಲೂಕಿಗೆ ಮೇಲಿನ ೫ ಯೋಜನೆಗಳಿಂದ ತಿಂಗಳಿಗೆ ೨೫,೯೨,೧೮,೧೯೫ ಕೋಟಿ ಹಣ ಬರುತ್ತಿದ್ದು ಸದರಿ ೫ ಯೋಜನೆಗಳು ತಾಲೂಕಿನಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿವೆ ಎಂದು ತಿಳಿಸಿದರು.

ಸದರಿ ಯೋಜನೆಗಳನ್ನು ಯಶಸ್ವಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಸಂಬಂಧ ಇರುವ ಮಾನದಂಡಗಳು, ಅರ್ಹತೆ ಮತ್ತು ಪ್ರತಿಯೊಂದು ಯೋಜನೆಯ ಉಪಯೋಗದ ಬಗ್ಗೆ ತಿಳಿಸಿದ ಅವರು, ಸಂಬಂಧಪಟ್ಟ ೫ ಯೋಜನೆಗಳ ಅಧಿಕಾರಿಗಳ ಸಹಯೋಗದೊಂದಿಗೆ ಮತ್ತು ಸಮಿತಿಯ ಎಲ್ಲಾ ಸದಸ್ಯರ ಸಹಕಾರದಿಂದ ಸದರಿ ಯೋಜನೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಬಂಧ ರಾಜ್ಯ ಮಟ್ಟದ ಸಮಿತಿಯ ಪ್ರಶಂಸೆಗೆ ಕಾರಣವಾಗಿರುತ್ತದೆ ಎಂದು ತಿಳಿಸಿದ ಅವರು, ಮುಂದಿನ ವಾರದಿಂದ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಿಂದ ಸಭೆ ನಡೆಸುವುದರ ಮೂಲಕ ಫಲಾನುಭವಿಗಳ ಪರಾಮರ್ಶೆ ನಡೆಸಲಾಗುವುದು ಎಂದು ತಿಳಿಸಿದರು. ನುಗ್ಗೇಹಳ್ಳಿಯಿಂದ ಕುಂದೂರು ಮಠಕ್ಕೆ ಹಾಗೂ ಮೇಲುಕೋಟೆಯಿಂದ ಶ್ರವಣಬೆಳಗೊಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಕೆ.ಎಸ್.ಆರ್‌.ಟಿ.ಸಿ ಬಸ್ ಸಂಚರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು ಯುವನಿಧಿ ಯೋಜನೆಯಡಿ ಗ್ಯಾರಂಟಿ ಅನುಷ್ಠಾನ ಸಮಿತಿ ಮತ್ತು ಸರಕಾರದ ಸಹಯೋಗದೊಂದಿಗೆ ಉದ್ಯೋಗ ಮೇಳ ನಡೆಸುವಂತೆ ಕೌಶಲ್ಯ ಮತ್ತು ಅಭಿವೃದ್ಧಿ ಅಧಿಕಾರಿಯಾದ ವಿಜಯಲಕ್ಷ್ಮಿ ಅವರಿಗೆ ತಿಳಿಸಿದರು.

ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಹರೀಶ್, ತಾ.ಪಂ. ಅಧಿಕಾರಿ ಗಿರೀಶ್, ಸಮಿತಿಯ ಸದಸ್ಯರುಗಳಾದ ಎ.ಆರ್‌. ನಾಗೇಶ್, ಬಿ.ಆರ್‌. ಕೆಂಪೇಗೌಡ, ಕೆ.ಎನ್. ನಾಗೇಶ್, ಎಸ್.ಎಂ ನವೀನ್ ಕುಮಾರ್, ಜನಾರ್ಧನ್, ಗಣೇಶ್, ಮಂಜುನಾಥ್, ಪ್ರಕಾಶ್ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Share this article