ಕನ್ನಡಪ್ರಭ ವಾರ್ತೆ ಐಗಳಿ
24 ಗಂಟೆಯಲ್ಲಿ 247 ಮೆ.ಟನ್ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಪೂರೈಸುವುದರ ಮೂಲಕ ಗುರಿ ಮೀರಿ ಸಾಧನೆ ಮಾಡಿದ್ದಾರೆ. ಇಂತಹ ಯುವಕರು ಹೆಚ್ಚಿನ ಸಾಧನೆ ಮಾಡಿ ನಾಡಿಗೆ ಮಾದರಿಯಾಗಲಿ ಎಂದು ಸಾಯಿಪ್ರಿಯಾ ಕಾರ್ಖಾನೆಯ ವಲಯ ಅಧಿಕಾರಿ ಆದಿನಾಥ ಚಂದಪ್ಪಗೋಳ ಹೇಳಿದರು.ಅವರು ಕೋಹಳ್ಳಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಈ ವರ್ಷದ ಹಂಗಾಮಿನಲ್ಲಿ ಕೋಹಳ್ಳಿ ಗ್ರಾಮದ ಗ್ಯಾಂಗಿನ ಮುಖ್ಯಸ್ಥ ಸಂಗಪ್ಪ ಬಿರಾದಾರ ನೇತೃತ್ವದಲ್ಲಿ 24 ಗಂಟೆಯಲ್ಲಿ 25 ಜನರು ಸೇರಿ 247 ಮೆ.ಟನ್ ಕಬ್ಬು ಕಟಾವು ಮಾಡಿ, 22 ಟ್ರ್ಯಾಲಿಗಳಲ್ಲಿ ತುಂಬಿದ್ದಾರೆ. ಇದನ್ನು ನೋಡಿ ತಂಡ ಹಾಗೂ ಜಮೀನಿನ ಮಾಲೀಕರು ಅಚ್ಚರಿಗೊಂಡಿದ್ದಾರೆ ಎಂದರು.
ಜಮಖಂಡಿ ತಾಲೂಕಿನ ಹಿಪ್ಪರಗಿ - ಮೈಗೂರ ಹತ್ತಿರದ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಗೆ ಕೋಹಳ್ಳಿ ಗ್ಯಾಂಗಿನ ತಂಡ ದಾಖಲೆ ಮಾಡಿದೆ. ಇಂತಹ ಯುವಕರು ಸಾಧನೆ ಮಾಡಿ ನಾಡಿನಲ್ಲಿ ಗುರುತಿಸುವಂತಹ ಕಾರ್ಯ ನಡೆಯಲಿ. ನಮ್ಮ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಗೆ ಇದುವರೆಗೆ ಯಾರೂ ಒಂದೇ ದಿನದಲ್ಲಿ 247 ಕ್ಕೂ ಮೆ.ಟನ್ ಹೆಚ್ಚಿನ ಕಬ್ಬು ಕಳಿಸಿಲ್ಲ ಎಂದು ಹರ್ಷ ವ್ಯಕ್ತ ಪಡಿಸಿದರು. ಗ್ಯಾಂಗಿನ ಮಾಲೀಕ ಸಂಗಪ್ಪ ಬಿರಾದಾರ ಮಾತನಾಡಿ ನಮ್ಮ ಗ್ಯಾಂಗ್ ಹಲವು ವರ್ಷಗಳಿಂದ ಇಂತಹ ಸಾಹಸ ಮಾಡಬೇಕು ಎಂದು ಪ್ರತಿ ವರ್ಷ ಹೇಳುತ್ತ ಬಂದಿದ್ದೇವೆ. ಆದರೆ, ಈ ವರ್ಷದ ಮಕರ ಸಂಕ್ರಮಣದ ದಿನ ಹಠ ತೊಟ್ಟು ಗ್ರಾಮದ ಆರಾಧ್ಯ ದೇವರು ಅಪ್ಪಯ್ಯ ಮುತ್ಯಾ ಹಾಗೂ ಸಂಗಮೇಶ್ವರ ದೇವರ ಆಶೀರ್ವಾದೊಂದಿಗೆ ಪ್ರಾರಂಭಿಸಿದ್ದೇವು. ದೇವರ ಆಶೀರ್ವಾದ ನಮಗೆ ಅತೀ ಬೇಗ ದೊರಕಿದೆ ಎಂದರು.ಈ ವೇಳೆ ಕ್ಷೇತ್ರಾಧಿಕಾರಿ ಗೋಪಾಲ ದೇವಖಾತೆ, ಅಪ್ಪು ಅರಟಾಳ, ಅಣ್ಣಾಸಾಬ ತೆಲಸಂಗ, ಎಸ್.ಎಸ್.ಕಾನಗೊಂಡ, ಡಿ.ಕೆ.ಕಮಲಬಾಯ, ಸಿ,ಕೆ.ಪಾಟೀಲ, ಕುಡ್ಲಪ್ಪ ಕುಂಬಾರ, ಬಸು ಬಡಚಿ, ಗುರುದೇವ ಮಂಟೂರ, ಅಪ್ಪು ಸತ್ತಿ ಸೇರಿದಂತೆ ರೈತರು ಇದ್ದರು.
-