ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಳ್ಳಿ

KannadaprabhaNewsNetwork | Published : Apr 18, 2024 2:20 AM

ಸಾರಾಂಶ

ಅಂಬೇಡ್ಕರವರ ನಿಲುವು ಕಾನೂನಿನ ದೃಷ್ಟಿಯಲ್ಲಿ ಎಲ್ಲಾ ನಾಗರಿಕರನ್ನು ಸಮಾನತೆ ಮತ್ತು ನ್ಯಾಯಯುತವಾಗಿ ನಡೆಸಬೇಕೆಂದು ಆಗಿತ್ತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತ ಸಂವಿಧಾನದ ಶಿಲ್ಪಿ, ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕರಾಗಿದ್ದ ಡಾ.ಅಂಬೇಡ್ಕರ ಅವರು ಅಸ್ಪೃಶ್ಯತೆಯ ವಿರುದ್ಧ, ಮಹಿಳೆಯರ ಸ್ಥಾನಮಾನ ಸುಧಾರಣೆಗೆ ಮತ್ತು ತಳಸಮುದಾಯಗಳ ಹಕ್ಕುಗಳಿಗಾಗಿ ಹೋರಾಡಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.

ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್ತ ಭವನದಲ್ಲಿ ನಡೆದ ಡಾ.ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಅಂಬೇಡ್ಕರ ಜನ್ಮ ದಿನವನ್ನು ಸಮಾನತೆ ದಿನ ಎಂದೂ ಕರೆಯಲಾಗುತ್ತದೆ. ಅಂಬೇಡ್ಕರವರ ನಿಲುವು ಕಾನೂನಿನ ದೃಷ್ಟಿಯಲ್ಲಿ ಎಲ್ಲಾ ನಾಗರಿಕರನ್ನು ಸಮಾನತೆ ಮತ್ತು ನ್ಯಾಯಯುತವಾಗಿ ನಡೆಸಬೇಕೆಂದು ಆಗಿತ್ತು. ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಎತ್ತಿಹಿಡಿಯುವ ಸಂವಿಧಾನ ಅವರು ರೂಪಿಸಿದರು. ಅವರ ಆಶಯ ಸಾಮಾಜಿಕ ಮತ್ತು ಆರ್ಥಿಕ ಚಲನಶೀಲತೆಯನ್ನು ಸಾಧಿಸಲು ಜ್ಞಾನದ ಅನ್ವೇಷಣೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

ಅಂಬೇಡ್ಕರರ ಶೈಕ್ಷಣಿಕ ಅನ್ವೇಷಣೆ ಮತ್ತು ಅರ್ಥಶಾಸ್ತ್ರ ಕ್ಷೇತ್ರಕ್ಕೆ ಅವರ ಬರಹಗಳು ಮಹತ್ವಪೂರ್ಣವಾಗಿವೆ. ಸಂವಿಧಾನ ರಚಿಸುವಾಗ ಸಮಗ್ರ ಮಾನವ ಜನಾಂಗದ ಕಲ್ಯಾಣ ಗಮನದಲ್ಲಿಟ್ಟುಕೊಂಡು ಜೀವನದ ಬಹುಮುಖ್ಯ ಅಂಶಗಳಾದ ನಾಗರಿಕ ಬಹುಮುಖ್ಯ ಹಕ್ಕುಗಳನ್ನು ರಚಿಸಿದರು. ಆಗ ಅವರು ಪುರುಷರಷ್ಟೇ ಮಹತ್ವ ಮಹಿಳೆಗೂ ನೀಡಿದರು. ಅವರ ಅಶಯದಂತೆ ಇಂದು ನಾವೆಲ್ಲ ಸೌಹಾರ್ದತೆಯಿಂದ ದೇಶದಲ್ಲಿ ಸಂವಿಧಾನಕ್ಕೆ ಬದ್ಧರಾಗಿ ಬದುಕಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಸಾಹಿತಿ ಕಿರಣ್ ಬಾಳಗೊಳ, ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಬಿ.ಎಫ್. ಹೋರಕೇರಿ, ಮಲ್ಲಿಕಾರ್ಜುನ ಸಜ್ಜನ, ಮ.ಕೃ.ಮೇಗಾಡಿ, ಡಾ.ಲೋಕಣ್ಣ ಭಜಂತ್ರಿ, ಯೋಗೀಶ್ ಲಮಾಣಿ, ಡಾ.ಗೀತಾ ದಾನಶೆಟ್ಟಿ, ಶಂಕರ ಹೂಲಿ, ಜಯಶ್ರೀ ಮುರನಾಳ, ದ್ರಾಕ್ಷಿಯಾಣಿ ಮಂಡಿ ಮುಂತಾದವರು ಪಾಲ್ಗೊಂಡಿದ್ದರು.

Share this article