ಅನ್ಯಕೋಮಿನ ಯುವಕನ ಜತೆ ಮೊಮ್ಮಗಳು ವಿವಾಹ ಆಗಿದ್ದಕ್ಕೆ ಕೋಪಗೊಂಡ ಅಜ್ಜಿ, ಮೊಮ್ಮಗಳ 40 ದಿನದ ಹಸುಗೂಸನ್ನು ಕತ್ತು ಹಿಸುಕಿ ಹತ್ಯೆಗೈದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚೇಳೂರು ಠಾಣೆ ಪೊಲೀಸರು ವೃದ್ಧೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ
ಚಿಕ್ಕಬಳ್ಳಾಪುರ : ಅನ್ಯಕೋಮಿನ ಯುವಕನ ಜತೆ ಮೊಮ್ಮಗಳು ವಿವಾಹ ಆಗಿದ್ದಕ್ಕೆ ಕೋಪಗೊಂಡ ಅಜ್ಜಿ, ಮೊಮ್ಮಗಳ 40 ದಿನದ ಹಸುಗೂಸನ್ನು ಕತ್ತು ಹಿಸುಕಿ ಹತ್ಯೆಗೈದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚೇಳೂರು ಠಾಣೆ ಪೊಲೀಸರು ವೃದ್ಧೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಚೇಳೂರು ಪಟ್ಟಣದಲ್ಲಿ 2025ರ ಡಿ.24ರಂದು ಘಟನೆ ನಡೆದಿದ್ದು, ಎಫ್ಎಸ್ಎಲ್ ವರದಿಯಲ್ಲಿ ಮಗುವಿನ ಕೊಲೆ ರಹಸ್ಯ ಬಯಲಾಗಿದೆ.
ಏನಿದು ಘಟನೆ:
ಡಿ. 24ರಂದು ಚೇಳೂರು ಪಟ್ಟಣದಲ್ಲಿ ಮೆಹಬೂಬಿ ಮನೆಯಲ್ಲಿ ಈಕೆಯ ಮೊಮ್ಮಗಳ 40 ದಿನದ ಗಂಡು ಮಗು ಸಾವನ್ನಪ್ಪಿತ್ತು. ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಅಜ್ಜಿ ಮಣ್ಣು ಮಾಡಿಸಿದ್ದಳು. ಆದರೆ ಅಜ್ಜಿಯ ಮೇಲೆ ಅನುಮಾನಗೊಂಡ ಮೊಮ್ಮಗಳು, ಅಂದೇ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಮರಣೋತ್ತರ ಪರೀಕ್ಷೆ
ದೂರಿನ ಮೇರೆಗೆ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಮಾ.10ರಂದು ಎಫ್ಎಸ್ಎಲ್ ವರದಿ ಬಂದಿದ್ದು, ಮಗುವನ್ನು ಉಸಿರುಗಟ್ಟಿಸಿ ಕೊಂದಿರುವುದಾಗಿ ತಿಳಿಸಲಾಗಿದೆ. ಹೀಗಾಗಿ ಮಗುವಿನ ಅಜ್ಜಿಯೇ ಕೊಲೆ ಮಾಡಿರುವುದು ಬಯಲಾಗಿದ್ದು, ಮೆಹಬೂಬಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಅಜ್ಜಿಯ ಮೊಮ್ಮಗಳು ಅನ್ಯಧರ್ಮದ ಯುವಕನೊಂದಿಗೆ ಪ್ರೇಮ ವಿವಾಹವಾಗಿದ್ದು, ಬಾಣಂತನಕ್ಕೆ ಅಜ್ಜಿಯ ಮನೆಗೆ ಬಂದಿದ್ದಳು. ಅಜ್ಜಿಗೆ ವಿವಾಹ ಇಷ್ಟವಿರಲಿಲ್ಲ. ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾಳೆ.