ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಆಯೋಜಿಸಿದ್ದ ತಾಯಂದಿರ ಸಭೆಯಲ್ಲಿ ಜಾಗೃತಿ ಮೂಡಿಸುವ ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಗುವಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮಗುವಿಗೆ ಆರು ತಿಂಗಳ ತನಕ ತಾಯಿಯ ಎದೆ ಹಾಲು ಮಾತ್ರ ಕುಡಿಸಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಇಂದಿರಾ ನಗರದಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯಿಂದ ನ್ಯುಮೋನಿಯಾ ಕುರಿತು ಆಯೋಜಿಸಿದ ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.ಸ್ವಚ್ಛತೆಗೆ ಆದ್ಯತೆ ನೀಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಸಕಾಲಕ್ಕೆ ಪಡೆದು ಮಗುವಿಗೆ ಸೋಂಕು ತಗುಲದಂತೆ ಜಾಗ್ರತೆ ವಹಿಸಬೇಕು. ತಾಯಿ ಮತ್ತು ಶಿಶು ಮರಣಕ್ಕೆ ಕಡಿವಾಣ ಹಾಕಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ನ್ಯುಮೋನಿಯಾ ಇದು ಒಂದು ಸ್ವಾಶಕೋಶದ ಸೋಂಕು. ಕಳೆದ ನವಂಬರ್ 12 ರಿಂದ ಮುಂಬರುವ ಫೆಬ್ರವರಿ 28 ರವರೆಗೆ ನ್ಯುಮೋನಿಯಾ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಮಗುವಿಗೆ ಜ್ವರ, ಹಸಿವು ಇಲ್ಲದಿರುವುದು, ಕೆಮ್ಮು ಮತ್ತು ಹಳದಿ ರಕ್ತದ ಕಫೆ ರೋಗಲಕ್ಷಣಗಳು. ರೋಗ ತಡೆಗೆ ಮಕ್ಕಳಿಗೆ ಸಾಕಷ್ಟು ಪೌಷ್ಟಿಕಾಂಶ ಒದಗಿಸಿ, ಸರಿಯಾದ ಸಮಯಕ್ಕೆ ಚುಚ್ಚುಮದ್ದು ಹಾಕಿಸಬೇಕು. ಮನೆಯೊಳಗೆ ಮಾಲಿನ್ಯ ನಿಯಂತ್ರಿಸಿ, ಮೊದಲ ಆರು ತಿಂಗಳು ತಾಯಿಯ ಎದೆ ಹಾಲನ್ನು ಮಾತ್ರ ನೀಡುವ ಮುಖಾಂತರ ಸೋಂಕು ಬಾರದಂತೆ ತಡೆಯಬಹುದು ಎಂದರು.ಮಹಿಳೆಯರಲ್ಲಿ ಕಿಬ್ಬೊಟ್ಟೆ ನೋವು ಅಸಹಜ ರಕ್ತಸ್ರಾವ ಜನನಾಂಗ ಮಾರ್ಗದ ಸೋಂಕುಗಳು ಕುರಿತು ಮಾಹಿತಿ ನೀಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ , 30 ವರ್ಷ ಮೇಲ್ಪಟ್ಟವರು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದು ಉತ್ತಮ ಆರೋಗ್ಯ ಹೊಂದಬೇಕು ಎಂದರು.
ತಾಲೂಕು ಆಶಾ ಮೆಂಟರ್ ತಬಿತಾ ಗರ್ಭಿಣಿ ಆರೈಕೆ ಕುರಿತು ಮಾಹಿತಿ ನೀಡಿ, ಗರ್ಭಿಣಿಯರಿಗೆ ಮೂರು ತಿಂಗಳ ಒಳಗಡೆ ಆಶಾ , ಅಂಗನವಾಡಿ ಕಾರ್ಯಕರ್ತೆಯರು ಅಥವಾ ಆರೋಗ್ಯ ಅಧಿಕಾರಿಗಳಲ್ಲಿ ಹೆಸರು ನೊಂದಣಿ ಮಾಡಿಸಿ ತಾಯಿ ಕಾರ್ಡ್ ಪಡೆದು ವೈದ್ಯರಲ್ಲಿ ಸಕಾಲಕ್ಕೆ ಪರೀಕ್ಷೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಆರೋಗ್ಯ ಸಂಸ್ಥೆಯಲ್ಲಿ ಹೆರಿಗೆ ಮಾಡಿಸಿ ತಾಯಿ ಮಗುವಿನ ಆರೋಗ್ಯ ರಕ್ಷಣೆ ಮಾಡಿ ಕೊಳ್ಳಬೇಕು ಎಂದರು. ಸಭೆಯಲ್ಲಿ ಸಿಎಚ್‍ಒ ಪ್ರತಿಭಾ, ಆಶಾ ಕಾರ್ಯಕರ್ತೆಯರಾದ ಗಂಗಾಂಭಿಕ, ರತ್ನಮ್ಮ, ಗರ್ಭಿಣಿ ತಾಯಂದಿರು ಸಾರ್ವಜನಿಕರು ಹಾಜರಿದ್ದರು.