ಯಲಹಂಕದ ಕೋಗಿಲು ಬಳಿ ಅಕ್ರಮ ಒತ್ತುವರಿ ತೆರವಿನಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಜ.5ರ ನಂತರವಷ್ಟೇ ಸರ್ಕಾರದಿಂದ ಪುನರ್ವಸತಿ ಸೌಲಭ್ಯ ದೊರೆಯುವ ಸಾಧ್ಯತೆಯಿದೆ. ಈಗಾಗಲೇ 167 ನಿರಾಶ್ರಿತರ ದಾಖಲೆಗಳನ್ನು ಪರಿಶೀಲಿಸಿ ಪುನರ್ವಸತಿ ಪಟ್ಟಿ ಸಿದ್ಧಪಡಿಸಿದ್ದಾರೆ.

ಬೆಂಗಳೂರು : ಯಲಹಂಕದ ಕೋಗಿಲು ಬಳಿ ಅಕ್ರಮ ಒತ್ತುವರಿ ತೆರವಿನಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಜ.5ರ ನಂತರವಷ್ಟೇ ಸರ್ಕಾರದಿಂದ ಪುನರ್ವಸತಿ ಸೌಲಭ್ಯ ದೊರೆಯುವ ಸಾಧ್ಯತೆಯಿದೆ.

ಇಲ್ಲಿನ ನಿರಾಶ್ರಿತರಿಗೆ ಮನೆ

ಸರ್ಕಾರದ ಆಶ್ರಯ ಯೋಜನೆಯಡಿ ಇಲ್ಲಿನ ನಿರಾಶ್ರಿತರಿಗೆ ಮನೆಗಳನ್ನು ಹಂಚಿಕೆ ಮಾಡಬೇಕಿರುವುದರಿಂದ ಸ್ಥಳೀಯ ಶಾಸಕರ ನೇತೃತ್ವದ ಆಶ್ರಯ ಸಮಿತಿಯಿಂದ ಫಲಾನುಭವಿಗಳ ಪಟ್ಟಿಗೆ ಅನುಮತಿ ಸಹಿ ಬೀಳಬೇಕು. ಇದರ ಹೊರತಾಗಿ ಮನೆಗಳ ಹಂಚಿಕೆ ಸಾಧ್ಯವಿಲ್ಲ. ಹಾಗಾಗಿ ವಿದೇಶ ಪ್ರವಾಸದಲ್ಲಿರುವ ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಕ್ಕೆ ವಾಪಸಾದ ಬಳಿಕವಷ್ಟೇ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಮಾಹಿತಿ ಪ್ರಕಾರ, ಕೃಷ್ಣ ಬೈರೇಗೌಡ ಅವರು ಜ.5ರ ರಾತ್ರಿ ವಿದೇಶದಿಂದ ಬೆಂಗಳೂರಿಗೆ ಮರಳಲಿದ್ದಾರೆ. ಹಾಗಾಗಿ ನಂತರದ ದಿನಗಳಲ್ಲಿ ನಿರಾಶ್ರಿತರಿಗೆ ಮನೆಗಳ ಹಂಚಿಕೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಪುನರ್ವಸತಿ ಪಟ್ಟಿ ಸಿದ್ಧ:

ಈ ಮಧ್ಯೆ, ಮುಖ್ಯಮಂತ್ರಿ ಅವರ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಈಗಾಗಲೇ 167 ನಿರಾಶ್ರಿತರ ದಾಖಲೆಗಳನ್ನು ಪರಿಶೀಲಿಸಿ ಪುನರ್ವಸತಿ ಪಟ್ಟಿ ಸಿದ್ಧಪಡಿಸಿದ್ದಾರೆ. ಇದನ್ನು ವಸತಿ ಸಚಿವ ಜಮೀರ್‌ ಅಹಮದ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚಿಸಿದ್ದು, ಮೌಖಿಕ ಒಪ್ಪಿಗೆ ಪಡೆದಿದ್ದಾರೆ. ಕೃಷ್ಣ ಬೈರೇಗೌಡ ಅವರು ಸೋಮವಾರ ಬೆಂಗಳೂರಿಗೆ ಮರಳಿದ ಕೂಡಲೇ ಆಶ್ರಯ ಯೋಜನೆ ಸಮಿತಿ ಸಭೆ ನಡೆಸಿ ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಅಂತಿಮಗೊಳಿಸಲಿದ್ದಾರೆ. ಆ ಬಳಿಕ ಫಲಾನುಭವಿಗಳಿಗೆ ಪುನರ್ವಸತಿ ಭಾಗ್ಯ ದೊರೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ‘ಕನ್ನಡಪ್ರಭ’ಗೆ ಖಚಿತಪಡಿಸಿವೆ.