ರಾಜ್ಯದ ವಿವಿಧ ಯೋಜನೆ ಅಡಿ ಅಧಿಕೃತವಾಗಿ 37 ಲಕ್ಷ ಕುಟುಂಬಗಳು ವಸತಿಗಾಗಿ ಅರ್ಜಿ ಹಾಕಿ ಮನೆಗಾಗಿ ಕಾಯುತ್ತಿವೆ. ಅವರಿಗೆ ವಸತಿ ನೀಡುವ ಬದಲು, ಎಲ್ಲಿಂದಲೋ ಬಂದವರಿಗೆ ಸರ್ಕಾರ ಆಶ್ರಯ ವ್ಯವಸ್ಥೆ ಮಾಡುವುದು ಸರಿಯೇ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.
ಧಾರವಾಡ:
ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆ ತೆರವುಗೊಳಿಸಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಅಲ್ಲಿಯ ನಿರಾಶ್ರಿತರಿಗೆ ಸ್ವತಃ ಸರ್ಕಾರ ವಸತಿ ವ್ಯವಸ್ಥೆ ಮಾಡಲು ಮುಂದಾದರೆ ಕೋರ್ಟ್ ಮೋರೆ ಹೋಗುವುದಾಗಿ ಎಚ್ಚರಿಸಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದ ವಿವಿಧ ಯೋಜನೆ ಅಡಿ ಅಧಿಕೃತವಾಗಿ 37 ಲಕ್ಷ ಕುಟುಂಬಗಳು ವಸತಿಗಾಗಿ ಅರ್ಜಿ ಹಾಕಿ ಮನೆಗಾಗಿ ಕಾಯುತ್ತಿವೆ. ಅವರಿಗೆ ವಸತಿ ನೀಡುವ ಬದಲು, ಎಲ್ಲಿಂದಲೋ ಬಂದವರಿಗೆ ಆಶ್ರಯ ವ್ಯವಸ್ಥೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಬರೀ ಕೋಗಿಲು ಬಡಾವಣೆ ಅಲ್ಲದೆ ರಾಜ್ಯದೆಲ್ಲೆಡೆ ಸರ್ಕಾರಿ ಜಾಗ ಅತಿಕ್ರಮಣ ಮಾಡುವ ಸಮಯದಲ್ಲಿಯೇ ತಡೆಯುವ ಕೆಲಸವನ್ನು ಆಡಳಿತ ವ್ಯವಸ್ಥೆ ಏಕೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ ಪ್ರಮುಖ ನಗರಗಳಲ್ಲಿ ಫುಟ್‌ಪಾತ್, ಗೋಮಾಳ, ಸರ್ಕಾರಿ ಜಾಗಗಳು ಅತಿಕ್ರಮಣವಾಗುತ್ತಿವೆ. ಅತಿಕ್ರಮಣವಾಗುವ ಮುಂಚೆಯೇ ತಡೆಯಲು ಅಧಿಕಾರಿಗಳು ಹಣ ಪಡೆಯುತ್ತಿದ್ದರೆ, ರಾಜಕಾರಣಿಗಳು ಈ ಜನರನ್ನೇ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ನುಸುಳುಕೋರರು ಹಾಗೂ ಸರ್ಕಾರಿ ಜಾಗೆ ಅತಿಕ್ರಮಣ ಮಾಡಿಕೊಂಡವರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್, ರೇಶನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಎಲ್ಲ ಸೌಲಭ್ಯಗಳು ಹೇಗೆ ಸಿಗುತ್ತವೆ. ಅನಧಿಕೃತ, ಕಾನೂನುಬಾಹಿರವಾಗಿ ವಾಸಿಸುವ ಜನರಿಗೆ ಈ ಎಲ್ಲ ಸೌಲಭ್ಯಗಳನ್ನು ಮತ ಬ್ಯಾಂಕ್ ಹಿನ್ನೆಲೆಯಲ್ಲಿ ನೀಡುವುದು ಯಾವ ನ್ಯಾಯ? ಈ ಹಿನ್ನೆಲೆಯಲ್ಲಿ ಕೋಗಿಲು ಬಡಾವಣೆಯ ನಿರಾಶ್ರಿತರಿಗೆ ಮನೆ ನೀಡುವುದೇ ಆದರೆ ಈ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲು ಚಿಂತಿಸುವುದಾಗಿ ಎಂದು ಮುತಾಲಿಕ್ ಸ್ಪಷ್ಟಪಡಿಸಿದರು. ಪಿಣರಾಯ್ ಟಾಂಗ್...ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗೆ ಅತಿಕ್ರಮಣ ಮಾಡಿದ ಮುಸ್ಲಿಂರ ಮನೆ ತೆರವುಗೊಳಿಸಿದಾಗ ತೀವ್ರವಾಗಿ ಹೃದಯ ಬಡಿದುಕೊಳ್ಳುವ ಕೇರಳದ ಪಿಣರಾಯಿ ಹಾಗೂ ಸಚಿವ ಜಮೀರ್ ಅಹಮ್ಮದ್ ಅವರು ಗೋವಾದಲ್ಲಿ ಕನ್ನಡಿಗರ ಮನೆಗಳನ್ನು ಕಿತ್ತು ಹಾಕಿದಾಗ ಎಲ್ಲಿ ಹೋಗಿದ್ದರು? ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಇವರೆಲ್ಲಾ ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಮುಸ್ಲಿಂ ಸಮುದಾಯದ ಕಾಳಜಿ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಹಿಂದೂಗಳ ಮನೆಗಳನ್ನು ತೆರವು ಮಾಡಿದಾಗ ಇವರು ಮನೆ ಕಟ್ಟುವ ಕೆಲಸ ಮಾಡಿಲ್ಲ. ಈಗ ಮಾತ್ರ ಇವರ ಹೃದಯ ಬಡಿತ ಹೆಚ್ಚಾಗುತ್ತದೆ ಎಂದರು.