ದಾವೂದ್‌ಸಾಬ್ ನದಾಫ್
ಗ್ರಾಮೀಣ ಮಕ್ಕಳ ಬದುಕಿಗೆ ನಾಲ್ಕು ದಶಕಗಳಿಂದ ಶಿಕ್ಷಣದ ಬೆಳಕು ನೀಡುತ್ತಿರುವ ಶ್ರೀಅನ್ನದಾನೇಶ್ವರ ವಿದ್ಯಾವರ್ಧಕ ಸಂಘ (ಶಿಕ್ಷಣ)ದ ಶಾಲೆಗೆ ಇದೀಗ ಹೊಸ ಮೆರುಗು ಬಂದಿದೆ. ಗದಗ ಜಿಲ್ಲೆಯ ನರೇಗಲ್ ತಾಲೂಕಿನ ಹಾಲಕೆರೆ ಸಂಸ್ಥಾನ ಮಠದ ಶಾಖೆಯಾದ ಹನಮಸಾಗರದ ಶ್ರೀ ಅನ್ನದಾನೇಶ್ವರ ಮಠವು 1985ರಲ್ಲಿ ಪುಟ್ಟ ಪಾಠಶಾಲೆಯಾಗಿ ಆರಂಭವಾಗಿ, ಇಂದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.
ಈ ಭಾಗದ ಗ್ರಾಮೀಣ ಹಾಗೂ ರೈತ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲೆ ವಿಶಿಷ್ಟ ಗುರುತನ್ನು ಗಳಿಸಿದೆ. ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿಯೂ ಶಿಕ್ಷಣ ನೀಡುತ್ತಾ, ಪ್ರತಿವರ್ಷ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.ಶಾಲೆ ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ‘ಶಿಕ್ಷಣದ ಜೊತೆಗೆ ಸಂಸ್ಕಾರ’ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕ ಮೌಲ್ಯಗಳು, ಸೇವಾ ಮನೋಭಾವ, ಮಾನವೀಯತೆ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಉತ್ತಮ ತರಗತಿ ಕೊಠಡಿಗಳು, ಗ್ರಂಥಾಲಯ, ವಿಶಾಲ ಕ್ರೀಡಾಂಗಣ ಸೇರಿದಂತೆ ಕಲಿಕೆಗೆ ಅಗತ್ಯವಾದ ಎಲ್ಲ ಮೂಲಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ.
ಇದೀಗ ಶಾಲೆಗೆ ಮತ್ತೊಂದು ಹೆಮ್ಮೆಯ ಅಧ್ಯಾಯ ಸೇರ್ಪಡೆಯಾಗುತ್ತಿದೆ. ಜುಲೈ 2ರಂದು ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ ಮಠದ ಆವರಣದಲ್ಲಿ ನಿರ್ಮಿಸಲಾದ ಮಹಾತಪಸ್ವಿ ಶ್ರೀಅನ್ನದಾನೇಶ್ವರ ಶಿಲಾ ಮಂಟಪದ ಗೋಪುರ ಕಳಸಾರೋಹಣ ಮತ್ತು ಲೋಕಾರ್ಪಣೆ ಕಾರ್ಯಕ್ರಮ ವೈಭವದಿಂದ ನಡೆಯಲಿದೆ.
ವಣಬಳ್ಳಾರಿಯ ಸಿದ್ಧಲಿಂಗಯ್ಯ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮಿಜಿ ಸೇರಿದಂತೆ ವಿವಿಧ ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ಆಶೀರ್ವಚನ ನಡೆಯಲಿದ್ದು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
-ಸಂಗಯ್ಯ ಚಂದಯ್ಯ ವಸ್ತ್ರದ, ಅಧ್ಯಕ್ಷರು, ಶ್ರೀಅನ್ನದಾನೇಶ್ವರ ವಿದ್ಯಾವರ್ಧಕ ಸಂಘ
ಶ್ರೀಅನ್ನದಾನೇಶ್ವರ ವಿದ್ಯಾವರ್ಧಕ ಸಂಘವು ಕೇವಲ ಅಂಕಗಳ ಶಿಕ್ಷಣವನ್ನಲ್ಲ, ಬಡ ರೈತರ ಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಮೂಲಕ ಈ ಭಾಗದ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ.