ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಿಲ್ ಪಾವತಿ ವೇಳೆ ಗುತ್ತಿಗೆದಾರರಿಂದ ತಡೆಹಿಡಿಯಲಾಗಿದ್ದ ಶೇ.10ರಷ್ಟು ಭದ್ರತಾ ಠೇವಣಿ ಮೊತ್ತ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಕುರಿತು ಜಿಬಿಎ ಮುಖ್ಯ ಆಯುಕ್ತರ ಕಚೇರಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಜಿಬಿಎ ನಗರ ಪಾಲಿಕೆಗಳ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ಅವರಿಗೆ ಮಂಗಳವಾರ ಅಧಿಕೃತ ಪತ್ರ ರವಾನಿಸಿದರು. ನಗರಾಭಿವೃದ್ಧಿ ಇಲಾಖೆಯಿಂದ ನಡೆಸಲಾದ ತನಿಖೆಯ ವರದಿ ಹಾಗೂ ರಾಜ್ಯ ಸರ್ಕಾರದ ‘ವಿಶೇಷ ಮೂಲ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆ’ (ಎಸ್‌ಐಪಿ) ಅಡಿ ತನಿಖಾ ತಂಡದ ವರದಿಗೆ ಅನುಗುಣವಾಗಿ, ಕಾಮಗಾರಿಗಳ ಪ್ರಾಮುಖ್ಯತೆ ಹಾಗೂ ಆದ್ಯತೆ ಪರಿಗಣಿಸಿ ಬಾಕಿ ಬಿಲ್‌ಗಳನ್ನು ಪಾವತಿಸಲು ಕ್ರಮ ವಹಿಸಲಾಗಿತ್ತು.ನಗರಾಭಿವೃದ್ಧಿ, ಲೋಕೋಪಯೋಗಿ ಸೇರಿ ವಿವಿಧ ಇಲಾಖೆಗಳ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧತಿ ಹಾಗೂ ಅಕ್ರಮ, ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಲು ವಿಶ್ರಾಂತ ನ್ಯಾಯಮೂರ್ತಿ ಎಚ್. ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗ ರಚಿಸಲಾಗಿತ್ತು. ಹಾಗಾಗಿ, ನಾಗಮೋಹನ್ ದಾಸ್ ಆಯೋಗದ ವಿಚಾರಣಾ ವ್ಯಾಪ್ತಿಯಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳಿಗೆ ಮಾತ್ರ ಈ ಅನುಮೋದನೆ ಅನ್ವಯವಾಗಲಿದೆ ಎಂದು ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿದೆ.
ನಿ.ನ್ಯಾಯಮೂರ್ತಿ ನಾಗಮೋಹನ್ ದಾಸ್ ವಿಚಾರಣಾ ಆಯೋಗದ ವರದಿಯಲ್ಲಿ ಉಲ್ಲೇಖಿಸಿರುವ ಅಥವಾ ಪ್ರಸ್ತಾಪಿಸಿರುವ ಕಾಮಗಾರಿಗಳಿಗೆ ಈ ಶೇ.10ರ ಭದ್ರತಾ ಠೇವಣಿ ಬಿಡುಗಡೆ ಆದೇಶ ಅನ್ವಯಿಸುವುದಿಲ್ಲ. ವಿವಾದಿತ ಹಾಗೂ ತನಿಖೆ ಎದುರಿಸುತ್ತಿರುವ ಕಾಮಗಾರಿಗಳ ಹೊರತುಪಡಿಸಿ ಉಳಿದ ಗುತ್ತಿಗೆದಾರರಿಗೆ ತಮ್ಮ ಭದ್ರತಾ ಠೇವಣಿ ಪಡೆಯಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ.