ನರಸಿಂಹರಾಜಪುರಭದ್ರಾ ಮೇಲ್ದಂಡೆ ಯೋಜನೆಯ ಸಾತ್ಕೋಳಿ-2 ರ ಕಾಮಗಾರಿ ಸ್ಥಳದಲ್ಲಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆ ಈಡೇರಿರುವವರೆಗೂ ಕಾಮಗಾರಿ ನಡೆಸಬಾರದು ಎಂದು ಪಟ್ಟು ಹಿಡಿದು ಕೊನೆಗೂ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು.
-ಮನೆ ಬಿರುಕು, ಬತ್ತಿದ ಕೊಳವೆ ಬಾವಿ । ಸ್ಥಳಕ್ಕೆನೀರಾವರಿ ಮಂತ್ರಿ ಭೇಟಿ ನೀಡುವವರೆಗೂ ಕಾಮಗಾರಿ ಸ್ಥಗಿತಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭದ್ರಾ ಮೇಲ್ದಂಡೆ ಯೋಜನೆಯ ಸಾತ್ಕೋಳಿ-2 ರ ಕಾಮಗಾರಿ ಸ್ಥಳದಲ್ಲಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆ ಈಡೇರಿರುವವರೆಗೂ ಕಾಮಗಾರಿ ನಡೆಸಬಾರದು ಎಂದು ಪಟ್ಟು ಹಿಡಿದು ಕೊನೆಗೂ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು.
ಮುತ್ತಿನಕೊಪ್ಪ ಗ್ರಾಪಂನ ಕುಸುಬೂರು, ಮುತ್ತಿನಕೊಪ್ಪ ಗ್ರಾಮದ ಕೆ.ಕಣಬೂರು ಕಾಲೋನಿ, ಕುಸುಬೂರು, ಸಾತ್ಕೋಳಿ, ದೊಡ್ಡಿನತಲೆ, ಹಿರೇಗದ್ದೆ ಗ್ರಾಮದ ನೂರಾರು ರೈತರು ಭದ್ರಾ ಮೇಲ್ದಂಡೆ ಯೋಜನೆ ಸಾತ್ಕೋಳಿ -2 ನೇ ಕಾಮಗಾರಿ ನಡೆಯುವ ಸ್ಥಳಕ್ಕೆ ಸೋಮವಾರ ಬೆಳಿಗ್ಗೆ ಆಗಮಿಸಿ ಪ್ರತಿಭಟನೆ ಪ್ರಾರಂಭಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ಭದ್ರಾ ಮೇಲ್ದಂಡೆ ಯೋಜನೆ ದೊಡ್ಡ ಗಾತ್ರದ ನಾಲೆ ನಿರ್ಮಾಣ ಹಾಗೂ ಲಕ್ಷಾಂತರ ಮರಗಳು ನಾಶವಾಗಿ ಕೊಳವೆ ಬಾವಿ ಸಂಪೂರ್ಣವಾಗಿ ಬತ್ತಿದೆ. ಅಲ್ಲದೆ ಜಲ ಮೂಲಗಳಾದ ಕೆರೆಗಳು, ಕರಿ ಬಸವನಹಳ್ಳ, ಚಿಕ್ಕ ಪುಟ್ಟ ಕೆರೆಗಳು ಬತ್ತಿವೆ. ನಾವು ಏತ ನೀರಾವರಿ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ 3 ವರ್ಷವಾದರೂ ಮಂಜೂರಾಗಿಲ್ಲ. ನಾಲೆ ಒಳಗೆ ಬಂಡೆ ಸ್ಫೋಟದಿಂದ ಹತ್ತಿರದ ಹಲವಾರು ಮನೆಗಳು ಜಖಂ ಆಗಿವೆ.
ಮನೆ ಮಾಲೀಕರಿಗೆ ಪರಿಹಾರ ನೀಡಿಲ್ಲ. ನಾಲೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿದೆ. ಈಗಾಗಲೇ ಶಾಸಕರು ಹಾಗೂ ಇತರ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕಳೆದ 18 ವರ್ಷದಿಂದ ನಮ್ಮ ಸಮಸ್ಯೆ ಹಾಗೇ ಉಳಿದಿದೆ. ನಮ್ಮ ಈ ಸಮಸ್ಯೆಗೆ ನೀರಾವರಿ ಇಲಾಖೆಯೇ ಜವಾಬ್ದಾರಿ. ಆದ್ದರಿಂದ ಶಾಸಕರು, ನೀರಾವರಿ ಮಂತ್ರಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಪರಿಹಾರ ಮಾಡುವವರೆಗೆ ಕೆ.ಕಣಬೂರು ಕಾಲೋನಿ 1 ರ ಕಾಮಗಾರಿ ಹಾಗೂ ಸಾತ್ಕೋಳಿ 2 ರ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಆದರೆ, ಸ್ಥಳದಲ್ಲಿ ಬೃಹತ್ ಗಾತ್ರದ ಬಾವಿಗಳಿಗೆ ಪಂಪ್ ಸೆಂಟ್ ಕೂರಿಸುತ್ತಿದ್ದ ಕಾರ್ಮಿಕರು ಕೆಲಸ ನಿಲ್ಲಿಸಲು ಒಪ್ಪಲಿಲ್ಲ. ಇದರಿಂದ ಕೆಲವು ಸಮಯ ಕಾರ್ಮಿಕರಿಗೂ, ಗ್ರಾಮಸ್ಥರಿಗೂ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ₹325 ಕೋಟಿ ವೆಚ್ಚದ ಕಾಮಗಾರಿ ಟೆಂಡರ್ ಹಿಡಿದ ಕಂಪನಿಯ ಎಜಿಎಂ ವೆಂಕಟೇಶ್, ಭದ್ರಾ ಮೇಲ್ದಂಡೆ ಮುತ್ತಿನಕೊಪ್ಪ ಉಪ ವಿಭಾಗದ ಅಸಿಸ್ಟಂಟ್ ಎಕ್ಸಿಕ್ಯೂಟೀವ್ ಎಂಜಿನಿಯರ್ ಶಿವಮೂರ್ತಿ ಆಗಮಿಸಿದರು.
-- ಬಾಕ್ಸ್--ಮಂತ್ರಿ, ಶಾಸಕರ ಭೇಟಿ ನೀಡುವವರೆಗೂ ಕಾಮಗಾರಿ ಸ್ಥಗಿತ
ಗ್ರಾಮಸ್ಥರು, ಅಧಿಕಾರಿಗಳೊಂದಿಗೆ ಮಧ್ಯಾಹ್ನದವರೆಗೂ ಚರ್ಚೆ ನಡೆಯಿತು. ಕೊನೆಗೂ ನೀರಾವರಿ ಮಂತ್ರಿಗಳು, ಶಾಸಕರು ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸುವವರೆಗೆ ಕೆ.ಕಣಬೂರು ಕಾಲೋನಿ 1 ರ ಕಾಮಗಾರಿ ಹಾಗೂ ಸಾತ್ಕೋಳಿ - 2 ರ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸಲು ಒಪ್ಪಿಕೊಂಡರು. ನಂತರ ಗ್ರಾಮಸ್ಥರ ಪ್ರತಿಭಟನೆ ಕೈ ಬಿಟ್ಟರು.