ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಹ ಕಟ್ಟಡಗಳಿಗೆ ಇ-ಸ್ವತ್ತು ನಮೂನೆ 11ಎ ಮತ್ತು 11ಬಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸರಳೀಕರಣಗೊಳಿಸಿದ ಬೆನ್ನಲ್ಲೇ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ರಂಗೂಪುರ ಶಿವಕುಮಾರ್

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಹ ಕಟ್ಟಡಗಳಿಗೆ ಇ-ಸ್ವತ್ತು ನಮೂನೆ 11ಎ ಮತ್ತು 11ಬಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸರಳೀಕರಣಗೊಳಿಸಿದ ಬೆನ್ನಲ್ಲೇ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ತಮ್ಮ ಗ್ರಾಮ ಪಂಚಾಯಿತಿ ಕಚೇರಿ, ಆನ್‌ಲೈನ್ ಪೋರ್ಟಲ್ ಅಥವಾ ಸಾರ್ವಜನಿಕ ಕಂಪ್ಯೂಟರ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಯಾರು ಅರ್ಜಿ ಸಲ್ಲಿಸಬಹುದು?:

ನಮೂನೆ 11ಎ:

ಗ್ರಾಮ ಠಾಣಾ ವ್ಯಾಪ್ತಿಯ ಅರ್ಹ ಕಟ್ಟಡಗಳು, ನೋಂದಾಯಿತ ದಾಖಲೆಗಳಿಲ್ಲದ ಪ್ರಕರಣಗಳು, 2025ರ ಏ.7ರ ಪೂರ್ವದ ಕಟ್ಟಡಗಳು. ಅನ್ವಯಿಸುವ ವರ್ಗಕ್ಕೆ 4 ಸಾವಿರ ಚದರ ಅಡಿ ಮಿತಿ ಇದೆ.

ಬೇಕಿರುವ ದಾಖಲೆ:

ದಿಶಾಂಕ್ /ಗ್ರಾಮ ಠಾಣಾ ನಕ್ಷೆ, ಕರ ನಿರ್ಧಾರಣಾ ವಹಿಯ ದೃಢೀಕೃತ ಪ್ರತಿ (ಅಥವಾ ಪಿಐಡಿ) / ಪಿಡಿಒ ದೃಢೀಕರಣ, 2025ರ ಏ.7ರ ಪೂರ್ವದ ವಿದ್ಯುತ್ ಬಿಲ್ ಅಥವಾ ಎಸ್ಕಾಂ ಖಾತೆ ಐಡಿ, ಸ್ಥಳ ಮಹಜರು ಪ್ರತಿ.

ನಮೂನೆ 11ಬಿ:

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಜಮೀನಿನಲ್ಲಿರುವ ಕಟ್ಟಡಗಳು, ಮೂಲ ಮಾಲೀಕರು ನಿರ್ಮಿಸಿರುವ ಕಟ್ಟಡಗಳು, ವಾಸಕ್ಕಾಗಿ ಅಥವಾ ಕೃಷಿ ಸಲಕರಣೆ ಇಡುವ ಉದ್ದೇಶದ ಕಟ್ಟಡಗಳು ಅರ್ಹವಾಗಿವೆ.

ಬೇಕಿರುವ ದಾಖಲೆ:

2025 ರ ಏ.7ರ ಪೂರ್ವದ ವಿದ್ಯುತ್ ಬಿಲ್, ಪಹಣಿ (ಆರ್‌ಟಿಸಿ) - ಮೂಲ ಮಾಲೀಕರ ಹೆಸರಿನಲ್ಲಿ ಇರಬೇಕು, ಋಣಭಾರ ಪ್ರಮಾಣಪತ್ರ (ಇಸಿ).ಕೇಂದ್ರ / ರಾಜ್ಯ ಸರ್ಕಾರದ ವಸತಿ ಯೋಜನೆಯಡಿ ಮಂಜೂರಾದ ಕಟ್ಟಡಗಳು ಜಮೀನಿನ ಮಾಲೀಕರ ಹೆಸರಿನಲ್ಲಿ ನಮೂನೆ ಸೃಜನೆ, ಪರಭಾರೆಗೆ ಅವಕಾಶವಿಲ್ಲ.

ಬೇಕಿರುವ ದಾಖಲೆ:

2025ರ ಏ.7ಕ್ಕಿಂತ ಹಿಂದಿನ ವಸತಿ ಯೋಜನೆಯಡಿ ಮಂಜೂರಾದ ಆದೇಶದ ಪ್ರತಿ, ಪಹಣಿ (ಆರ್‌ಟಿಸಿ), ವಂಶವೃಕ್ಷ, ಮನೆ ನಿರ್ಮಾಣ ಮಾಡಲು ಪಹಣಿದಾರರ ಒಪ್ಪಿಗೆ ಪತ್ರ.ಹೆಚ್ಚಿನ ಮಾಹಿತಿಗಾಗಿ eswathu.karnataka.gov.in ನೋಡಬಹುದು ಅಥವಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರನ್ನು ಸಂಪರ್ಕಿಸಬಹುದು.

ಇ-ಸ್ವತ್ತು ನಮೂನೆ 11ಎ ಮತ್ತು 11ಬಿ ಅರ್ಹ ಕಟ್ಟಡಗಳಿಗೆ ಪ್ರಮಾಣಪತ್ರ ನೀಡುವ ಕುರಿತು ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಜಾಗೃತಿ ಕರಪತ್ರ ಹಂಚಲಾಗಿದೆ.

ಎಸ್.ಪ್ರಸಾದ್ ಪಿಡಿಒ, ಮೂಖಹಳ್ಳಿ