-.ಅಂತಾರಾಜ್ಯ ಖದೀಮನ ಬಂಧನ:

KannadaprabhaNewsNetwork |  
Published : Jun 16, 2026, 01:15 AM IST
15ಕೆಬಿಪಿಟಿ.2.ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಪೊಲೀಸರು ಬಂದಿಸಿರುವ ಆರೋಪಿ. | Kannada Prabha

ಸಾರಾಂಶ

ತಾಲೂಕಿನ ಕಾಮಸಮುದ್ರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಓರ್ವ ಅಂತಾರಾಜ್ಯ ಖದೀಮನನ್ನು ಬಂಧಿಸಿದ್ದಾರೆ. ಬಂಧಿತನಿಂದ 7,8,600 ರು. ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ

ಬಂಗಾರಪೇಟೆ: ತಾಲೂಕಿನ ಕಾಮಸಮುದ್ರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಓರ್ವ ಅಂತಾರಾಜ್ಯ ಖದೀಮನನ್ನು ಬಂಧಿಸಿದ್ದಾರೆ. ಬಂಧಿತನಿಂದ 7,8,600 ರು. ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವೆಂಕಟಾಪುರದ ನಿವಾಸಿ ತರುಣ್ (26) ಬಂಧಿತ. ಆತನಿಂದ 38.60 ಗ್ರಾಂ ಚಿನ್ನದ ಆಭರಣ, 577.5 ಗ್ರಾಂ ಬೆಳ್ಳಿ ಆಭರಣ, 10,000 ರು. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಕಳೆದ ಏಪ್ರಿಲ್ 4 ರಂದು ಕುಂದರಸನಹಳ್ಳಿಯ ನಿವಾಸಿ ಕೆ.ವಿ. ಉಮಾಪತಿ ಎಂಬುವರು ತಮ್ಮ ಮನೆಯಲ್ಲಿ 500 ಗ್ರಾಂ ಬೆಳ್ಳಿ ಆಭರಣಗಳು ಮತ್ತು 4,000 ರು. ನಗದು ಕಳ್ಳತನವಾಗಿರುವ ಬಗ್ಗೆ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.ಕಾಮಸಮುದ್ರಂ ವೃತ್ತ ಕಚೇರಿ ಪ್ರಭಾರ ಸಿಪಿಐ ಹರೀಶ್ ಆರ್. ನೇತೃತ್ವದಲ್ಲಿ, ಪಿಎಸ್ಐ ಬಿ.ವಿ. ಕಿರಣ್‌ಕುಮಾರ್ ಮತ್ತು ಸಿಬ್ಬಂದಿಯನ್ನೊಳಗೊಂಡ ವಿಶೇಷ ಅಪರಾಧ ಪತ್ತೆ ದಳ ರಚಿಸಲಾಗಿತ್ತು.ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ವಿಶೇಷ ದಳದ ಪೊಲೀಸರು, ತಮಿಳುನಾಡಿನ ಮೂಲದ ತರುಣ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಸರಣಿ ಕಳ್ಳತನದ ಜಾಲ ಬೆಳಕಿಗೆ ಬಂದಿದೆ.ಬಂಧಿತ ಆರೋಪಿ ತರುಣ್ ಒಂದು ಮನೆಯಲ್ಲಿ ಮಾತ್ರವಲ್ಲದೆ, ಕೆಜಿಎಫ್ ಪೊಲೀಸ್ ಜಿಲ್ಲೆಯ ವಿವಿಧೆಡೆ ಕೈಚಳಕ ತೋರಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಈತನ ಬಂಧನದಿಂದಾಗಿ ಕಾಮಸಮುದ್ರಂ, ಬಂಗಾರಪೇಟೆ, ರಾಬರ್ಟ್ಸನ್‌ಪೇಟೆ ಹಾಗೂ ಬೇತಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಮುಖ ಕಳ್ಳತನ ಪ್ರಕರಣಗಳ ಸುರುಳಿ ಬಿಚ್ಚಿಕೊಂಡಂತಾಗಿದೆ.

ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ಅವರ ಆದೇಶದ ಮೇರೆಗೆ, ಡಿವೈಎಸ್‌ಪಿ ಲಕ್ಷ್ಮಯ್ಯ ವಿ. ಮತ್ತು ಪ್ರಭಾರ ಸಿಪಿಐ ಹರೀಶ್ ಆರ್. ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಅಂತಾರಾಜ್ಯ ಕಳ್ಳನನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಮಸಮುದ್ರ ಪಿಎಸ್ಐ ಬಿ.ವಿ. ಕಿರಣ್‌ಕುಮಾರ್, ಸಿಬ್ಬಂದಿ ಮಂಜುನಾಥರೆಡ್ಡಿ, ರಾಮಕೃಷ್ಣರೆಡ್ಡಿ, ಮುನಾವರ್ ಪಾಷ, ರಾಮರಾವ್, ಮಂಜುನಾಥ, ಲಕ್ಷ್ಮಣತೇಲಿ ಹಾಗೂ ಜೀಪ್ ಚಾಲಕ ಗುರುಮೂರ್ತಿ ಅವರ ಸಮಯಪ್ರಜ್ಞೆ ಮತ್ತು ಅತ್ಯುತ್ತಮ ಕಾರ್ಯವೈಖರಿಯನ್ನು ಎಸ್ಪಿ ಶಿವಾಂಶು ರಜಪೂತ್ ಶ್ಲಾಘಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷಗಳ ಚನ್ನಗಿರಿ ಅಜ್ಞಾತವಾಸ ಅಂತ್ಯ ಸನ್ನಿಹಿತ
ಹಳ್ಳ ಮುಚ್ಚಿದ್ದ ಹೋರಾಟದಲ್ಲಿ ನನ್ನ ಗೆಲುವು: ಬಿ.ಪಿ.ಹರೀಶ