ಕಾವೇರಿ ನೀರು ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರಿಗೆ ಆ.3ಕ್ಕೆ ನಿಗದಿಯಾಗಿದ್ದ ತಮ್ಮ ಕರ್ನಾಟಕ ಭೇಟಿ ಮುಂದೂಡುವಂತೆ ಮನವಿ ಮಾಡುತ್ತೇನೆ ಎಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು : ಕಾವೇರಿ ನೀರು ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರಿಗೆ ಆ.3ಕ್ಕೆ ನಿಗದಿಯಾಗಿದ್ದ ತಮ್ಮ ಕರ್ನಾಟಕ ಭೇಟಿ ಮುಂದೂಡುವಂತೆ ಮನವಿ ಮಾಡುತ್ತೇನೆ. ಪರಿಸ್ಥಿತಿ ತಿಳಿಯಾದ ಬಳಿಕ ಅವರ ಜೊತೆ ಸಭೆ ನಡೆಸಲಾವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ವೇಳೆ ಈ ಮಾಹಿತಿ ನೀಡಿದ ಅವರು, ನಾನು ಅಧಿಕಾರ ವಹಿಸಿಕೊಂಡ ಬಳಿಕ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್ ಅವರ ನೇತೃತ್ವದಲ್ಲಿ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಜೊತೆ ಸಭೆ ಮಾಡಿ ತುಂಗಭದ್ರಾ ಅಣೆಕಟ್ಟಿನ ಹೂಳು ತುಂಬಿರುವುದರಿಂದ ಕರ್ನಾಟಕಕ್ಕೆ ಆಗುತ್ತಿರುವ 33 ಟಿಎಂಸಿ ನೀರಿನ ನಷ್ಟ ತಡೆಯಲು ಸಮತೋಲಿತ ಅಣೆಕಟ್ಟು ನಿರ್ಮಾಣ ಸೇರಿ ಅನೇಕ ಪರ್ಯಾಯ ಆಯ್ಕೆಗಳ ಬಗ್ಗೆ ಚರ್ಚೆಯಾಗಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂದೂಡಿಕೆ:

ಈ ಅಣೆಕಟ್ಟನ್ನು ರಾಷ್ಟ್ರೀಯ ಯೋಜನೆಯಾಗಿ ಕೈಗೆತ್ತಿಕೊಂಡು 90-10 ಅನುಪಾತದಲ್ಲಿ ಕೇಂದ್ರ ಸರ್ಕಾರ ಹಣ ಭರಿಸಲಿದೆ. ಇದೇ ವೇಳೆ ಕಾವೇರಿ-ಗೋದಾವರಿ ನದಿ ಜೋಡಣೆ ವಿಚಾರದ ಬಗ್ಗೆಯೂ ಚರ್ಚೆಯಾಗಿದೆ. ಇದೇ ಮಾದರಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೂಡ ಆ.3ರಂದು ಕರ್ನಾಟಕಕ್ಕೆ ಆಗಮಿಸಿ ಚರ್ಚೆ ಮಾಡಲು ಮುಂದಾಗಿದ್ದರು. ಆದರೆ, ಕನ್ನಡಪರ ಸಂಘಟನೆಗಳು, ಬಿಜೆಪಿ ಸ್ನೇಹಿತರು, ರೈತ ಸಂಘಟನೆಗಳು ಹೋರಾಟ ಮಾಡುತ್ತಿವೆ. ಹೊರಗಿನಿಂದ ಅತಿಥಿಗಳು ಬರುವಾಗ ನಾವು ಸೌಹಾರ್ದತೆ ಹಾಗೂ ಗೌರವಪೂರ್ವಕವಾಗಿ ಆತಿಥ್ಯವಹಿಸಬೇಕು. ಆದರೆ, ಪ್ರತಿಭಟನೆ, ಬೆಳವಣಿಗೆಗಳಾಗುವುದು ನಮಗೆ ಸಮಾಧಾನ ತರುವುದಿಲ್ಲ. ಹಾಗಾಗಿ ನಮ್ಮ ಸಭೆಯನ್ನು ಕೆಲ ದಿನಗಳ ಕಾಲ ಮುಂದೂಡೋಣ, ಬೇರೆ ದಿನಾಂಕ ನಿಗದಿ ಮಾಡುತ್ತೇವೆ ಎಂದು ಮನವಿ ಮಾಡುತ್ತೇನೆ ಎಂದರು.

ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ

ಎರಡು ರಾಜ್ಯಗಳ ಸಿಎಂಗಳ ಭೇಟಿ ಪ್ರಸ್ತಾಪ ನಮ್ಮ ರಾಜ್ಯದಿಂದ ಹೋಗಿದ್ದಾ ಅಥವಾ ತಮಿಳುನಾಡಿನಿಂದ ಬಂದಿದ್ದಾ ಎಂದು ಕೇಳಿದಾಗ, ತಮಿಳುನಾಡಿನ ಮುಖ್ಯಮಂತ್ರಿಗಳ ಕಚೇರಿಯಿಂದ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬಂದಿದ್ದು, ನಾವು ಅದಕ್ಕೆ ಸಮ್ಮತಿ ನೀಡಿ ಆ.3ರಂದು ಸಭೆಗೆ ತೀರ್ಮಾನಿಸಿದ್ದೆವು. ಆದರೆ ಈಗ ಸಭೆಗೆ ವಾತಾವರಣ ಸರಿಯಾಗಿಲ್ಲ ಎಂದು ಮುಂದೂಡಲು ಚಿಂತಿಸುತ್ತಿದ್ದೇವೆ. ಎರಡೂ ರಾಜ್ಯದಲ್ಲಿರುವ ರೈತರು ನಮ್ಮ ದೇಶದವರೇ, ನಾವು ಒಟ್ಟಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.