ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮುನಿಯಪ್ಪ ಅವರ ವಿರುದ್ಧ ನಡೆಯುತ್ತಿದೆ ಎನ್ನಲಾದ ರಾಜಕೀಯ ಬೆಳವಣಿಗೆಗಳು ಹಾಗೂ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಹರಡುತ್ತಿರುವ ಸುದ್ದಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಹಾಸಭಾ, ದಲಿತರ ಉದ್ಧಾರಕ್ಕಾಗಿ ಬದ್ಧ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರವೇ ಹಿರಿಯ ದಲಿತ ನಾಯಕನ ರಾಜಕೀಯ ಪ್ರಭಾವವನ್ನು ಕುಗ್ಗಿಸುವ ಕೆಲಸ ಮಾಡಬಾರದು. ಮುನಿಯಪ್ಪ ಅವರು ರಾಜ್ಯದ ದಲಿತ ಸಮುದಾಯದ ಹಿರಿಯ ಹಾಗೂ ಅನುಭವಿ ನಾಯಕರಾಗಿದ್ದಾರೆ. ಅವರು ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು, ಎರಡು ಬಾರಿ ಕೇಂದ್ರ ಸಚಿವರಾಗಿ ದೇಶದ ಆಡಳಿತದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದಾರೆ. ಇಂತಹ ಅಪಾರ ರಾಜಕೀಯ ಅನುಭವ ಹೊಂದಿರುವ ನಾಯಕರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತವಾದ ಹಾಗೂ ಪ್ರಬಲ ಖಾತೆ ನೀಡಲು ಮೀನಾಮೇಷ ಎಣಿಸುವುದು ಸರಿಯಲ್ಲ ಎಂದರು. ರಾಜ್ಯ ರಾಜಕಾರಣದಲ್ಲಿ ಹಿರಿಯ ನಾಯಕರಿಗೆ ಅವರ ಅನುಭವಕ್ಕೆ ತಕ್ಕ ಸ್ಥಾನಮಾನ ನೀಡುವ ಸಂಪ್ರದಾಯವಿದೆ. ಆದರೆ ಮುನಿಯಪ್ಪ ಅವರ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಭಾವನೆ ದಲಿತ ಸಮುದಾಯದಲ್ಲಿ ಮೂಡುತ್ತಿದೆ. ಇದು ಮುಂದುವರಿದರೆ ಸಮುದಾಯದಲ್ಲಿ ಅಸಮಾಧಾನ ಮತ್ತಷ್ಟು ಹೆಚ್ಚಾಗಲಿದೆ ಎಂದು ವಿಜಯ ಕುಮಾರ್ ಎಚ್ಚರಿಸಿದರು.
‘ಮುನಿಯಪ್ಪ ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ’ ಎಂಬ ಗುಸುಗುಸು ಏಕೆ? ಮುನಿಯಪ್ಪ ಅವರ ಸಚಿವ ಸ್ಥಾನ ಬೇರೊಬ್ಬರಿಗೆ ಹೋಗಲಿದೆ ಎಂಬ ರೀತಿಯ ಸುದ್ದಿಗಳು ಹಾಗೂ ರಾಜಕೀಯ ಗುಸುಗುಸುಗಳು ನಡೆಯುತ್ತಿವೆ. ಇಂತಹ ಬೆಳವಣಿಗೆಗಳು ದಲಿತ ಸಮುದಾಯದಲ್ಲಿ ಸಹಜವಾಗಿಯೇ ಆತಂಕ ಮೂಡಿಸಿವೆ. ಆದರೆ ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ ಅಥವಾ ಪಕ್ಷದ ಪ್ರಮುಖ ನಾಯಕರು ಸ್ಪಷ್ಟವಾಗಿ ಮಾತನಾಡದೆ ಮೌನ ವಹಿಸಿರುವುದು ದುರದೃಷ್ಟಕರ. ಹಿರಿಯ ದಲಿತ ನಾಯಕನ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಇಂತಹ ಚರ್ಚೆಗಳು ನಡೆಯುತ್ತಿರುವಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸ್ಪಷ್ಟನೆ ನೀಡಬೇಕಾಗಿತ್ತು. ಸಮುದಾಯದಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಹೊಣೆಗಾರಿಕೆ ಪಕ್ಷದ ನಾಯಕರ ಮೇಲಿದೆ ಎಂದು ಹೇಳಿದರು. ಮುನಿಯಪ್ಪ ಅವರೇ ಈ ಬೆಳವಣಿಗೆಗಳ ಕುರಿತು ಮೌನವಾಗಿರುವುದು ಕೂಡ ಸರಿಯಲ್ಲ. ತಮ್ಮ ರಾಜಕೀಯ ಹಿರಿತನಕ್ಕೆ ತಕ್ಕ ಸ್ಥಾನಮಾನ ಹಾಗೂ ಪ್ರಬಲ ಖಾತೆ ನೀಡುವಂತೆ ಅವರು ಪಕ್ಷದ ನಾಯಕತ್ವದ ಮುಂದೆ ತಮ್ಮ ಬೇಡಿಕೆಯನ್ನು ಸ್ಪಷ್ಟವಾಗಿ ಇಡಬೇಕು. ಸಮುದಾಯದ ಹಿತದೃಷ್ಟಿಯಿಂದ ತಮ್ಮ ಹಕ್ಕು ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಧ್ವನಿ ಎತ್ತಬೇಕು ಎಂದು ಮಹಾಸಭಾ ಸಲಹೆ ನೀಡಿತು. ಮುನಿಯಪ್ಪ ಅವರ ವಿಚಾರವನ್ನು ಕೇವಲ ಒಬ್ಬ ವ್ಯಕ್ತಿಯ ಸಚಿವ ಸ್ಥಾನಕ್ಕೆ ಸಂಬಂಧಿಸಿದ ವಿಚಾರವಾಗಿ ನೋಡಬಾರದು. ಇದು ರಾಜ್ಯದ ಎಡಗೈ ದಲಿತ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಹಾಗೂ ಗೌರವಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ ಎಂದು ರಾಜ್ಯದಲ್ಲಿ ದಲಿತ ಸಮುದಾಯದ ವಿವಿಧ ವರ್ಗಗಳಿಗೆ ಸಮಾನ ಹಾಗೂ ನ್ಯಾಯಸಮ್ಮತ ರಾಜಕೀಯ ಅವಕಾಶ ದೊರೆಯಬೇಕು. ಎಡಗೈ ಸಮುದಾಯದ ಹಿರಿಯ ನಾಯಕನಾಗಿರುವ ಮುನಿಯಪ್ಪ ಅವರಿಗೆ ಅವರ ರಾಜಕೀಯ ಹಿರಿತನಕ್ಕೆ ಅನುಗುಣವಾಗಿ ಸೂಕ್ತ ಸ್ಥಾನಮಾನ ಕಲ್ಪಿಸುವ ಮೂಲಕ ಸಮುದಾಯಕ್ಕೆ ಗೌರವ ನೀಡಬೇಕು ಎಂದು ಒತ್ತಾಯಿಸಿದರು.ಸಚಿವ ಸಂಪುಟದಲ್ಲಿ ಅವರನ್ನು ಮುಂದುವರಿಸುವುದರ ಜತೆಗೆ ಹಾಲಿ ಖಾತೆಯನ್ನು ಬದಲಾಯಿಸಿ ಸಮಾಜ ಕಲ್ಯಾಣ ಖಾತೆ ನೀಡಬೇಕು. ಯಾವುದೇ ಕಾರಣಕ್ಕೂ ಅವರ ಹಿರಿತನಕ್ಕೆ ಧಕ್ಕೆ ತರುವಂತಹ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬಾರದು ಎಂದು ಎಚ್ಚರಿಸಿದರು. ಮುನಿಯಪ್ಪ ಅವರ ಸಚಿವ ಸ್ಥಾನ ಅಥವಾ ಖಾತೆ ಬದಲಾವಣೆಯ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಪಿತೂರಿ ನಡೆಯಬಾರದು. ಅವರ ಹಿರಿತನವನ್ನು ಕಡೆಗಣಿಸಿ ನಿರ್ಧಾರ ಕೈಗೊಂಡರೆ ಅದನ್ನು ಸಮುದಾಯ ಸಹಿಸುವುದಿಲ್ಲ. ಸರ್ಕಾರ ಕೂಡಲೇ ಈ ಕುರಿತು ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದರು. ಹಿರಿಯ ನಾಯಕರಿಗೆ ಗೌರವ ನೀಡುವುದರ ಜತೆಗೆ ಸಮುದಾಯದ ರಾಜಕೀಯ ಪ್ರಾತಿನಿಧ್ಯವನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಮುನಿಯಪ್ಪ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಿ, ಸಮಾಜ ಕಲ್ಯಾಣ ಖಾತೆ ನೀಡಿ, ಅಗತ್ಯವಿದ್ದರೆ ಉಪಮುಖ್ಯಮಂತ್ರಿ ಹುದ್ದೆಗೂ ಪರಿಗಣಿಸಬೇಕು. ಈ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ವಿಜಯಕುಮಾರ್ ಒತ್ತಾಯಿಸಿದರು.ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಸಮುದಾಯದ ಮುಖಂಡರು ಹಾಗೂ ಸಂಘಟನೆಗಳೊಂದಿಗೆ ಚರ್ಚಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಕುರಿತು ಚಿಂತಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮುನಿಸ್ವಾಮಿ ತಿರುಪತಿಹಳ್ಳಿ, ದೇವರಾಜು, ಮಾದಾರ ಮಹಾಸಭಾದ ಜಿಲ್ಲಾ ಮುಖಂಡ ಸೋಮಶೇಖರ್, ಚಂದ್ರ ಗಂಗೂರು, ಕುಶಾಲ್ ಇತರರು ಉಪಸ್ಥಿತರಿದ್ದರು.