ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನ ಹೊರಡಿಸಿರುವ ನಿಬಂಧನೆಗಳಲ್ಲಿ ಬಾಡೂಟ ನಿಷೇಧಿಸಲಾಗಿದೆ ಎಂಬ ಹೇಳಿಕೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಬಹುತೇಕ ಮುಖಂಡರು, ಮಾಂಸಹಾರ ಅಪರಾಧವೆಂಬಂತೆ ಬಿಂಬಿಸಲಾಗಿದೆ. ಈ ಮೂಲಕ ಬಹುಜನರ ಮಾಂಸಹಾರಿ ಸೇವನೆಗೆ ಅಪಮಾನ ಮಾಡಿದಂತಾಗಿದೆ. ಆಹಾರ ಹಕ್ಕನ್ನು ಅವಮಾನಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಂದ ಆಗಮಿಸುವ ಸಾಹಿತ್ಯ ಪ್ರಿಯರಿಗೆ ಈಗಾಗಲೇ ಉತ್ತರ ಮತ್ತು ದಕ್ಷಿಣ ಕರ್ನಾಟಕ ಶೈಲಿಯ ಆಹಾರವನ್ನು ಉಣಬಡಿಸಲು ಆಹಾರ ಸಮಿತಿ ನಿರ್ಧರಿಸಿದೆ. ಆದರೆ, ಮಂಡ್ಯ ನೆಲದ ಆಹಾರ ಸಂಸ್ಕೃತಿಯಾದ ಮಾಂಸಹಾರ ಸೇವನೆಗೆ ಅವಕಾಶ ನೀಡದಿರುವುದು ಸರಿಯಲ್ಲ. ಅಲ್ಲದೇ, ಮಾಂಸಹಾರ ಸೇವನೆ ಕೀಳಾಗಿ ಕಾಣುತ್ತಿರುವುದು ಒಪ್ಪುವಂತದ್ದಲ್ಲ. ಈ ಕಾರಣದಿಂದ ಸಮ್ಮೇಳನದಲ್ಲಿ ಕಡ್ಡಾಯವಾಗಿ ಬಾಡೂಟ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಮಂಡ್ಯ ಭಾಗದ ಮುದ್ದೆ ಮತ್ತು ನಾಟಿಕೋಳಿ ಸಾರಿಗೆ ವಿಶೇಷ ಮಾನ್ಯತೆ ಇದ್ದು, ಈ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸಮ್ಮೇಳನದಲ್ಲಿ ಮಾಂಸಹಾರದ ಕಡ್ಡಾಯವನ್ನು ಒತ್ತಾಯಿಸುತ್ತಿದ್ದೇವೆ ವಿನಃ ಇದರಲ್ಲಿ ಸಸ್ಯಹಾರಿಗಳನ್ನು ಗುರಿಯಾಗಿಸುವ ಯಾವುದೇ ಉದ್ದೇಶವಿಲ್ಲ. ಅಲ್ಲದೇ, ಸಸ್ಯಹಾರಿಗಳಿಗೆ ಪ್ರಿಯವಾದ ಎಲ್ಲ ಬಗೆಯ ಭೋಜನಗಳನ್ನು ಸವಿಯಲು ಅವರಿಗೆ ಪ್ರತ್ಯೇಕ ಅವಕಾಶವಿರುವುದರಿಂದ ಮಾಂಸಪ್ರಿಯರಿಗೂ ಸಮ್ಮೇಳನ ಸಮಾನ ಆಧ್ಯತೆ ನೀಡಬೇಕೆಂದು ಬಳಗದ ಸದಸ್ಯರು ಒತ್ತಾಯಿಸಿದರು.
ಒಂದು ವೇಳೆ ನಮ್ಮ ಒತ್ತಾಯಕ್ಕೆ ಸ್ಪಂದಿಸದಿದ್ದರೆ ಸ್ವಯಂ ಪ್ರೇರಿತವಾಗಿ ಸಮ್ಮೇಳನದ ಮೊದಲನೇ ದಿನ ಮೊಟ್ಟೆ ವಿತರಣೆ, ಎರಡನೇ ದಿನ ಮುದ್ದೆ ನಾಟಿ ಕೋಳಿ ಸಾಂಬಾರ್, ಮೂರನೇ ದಿನ ಬಿರಿಯಾನಿಯನ್ನು ವಿತರಿಸುವ ಚಿಂತನೆ ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಮನೆಗೊಂದು ಕೋಳಿಯನ್ನು ಸಂಗ್ರಹಿಸುವ ಅಭಿಯಾನ ನಡೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು.