ಶ್ರವಣಬೆಳಗೊಳದಲ್ಲಿ ಮಾಂಸದಂಗಡಿಗಳನ್ನು ನಿಷೇಧಿಸಿ

KannadaprabhaNewsNetwork | Published : Apr 11, 2025 12:34 AM

ಸಾರಾಂಶ

ಶ್ರವಣಬೆಳಗೊಳ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದ್ದು, ಇಲ್ಲಿ ಮಾಂಸ ಮಾರಾಟದ ಅಂಗಡಿಗಳಿಗೆ ನಿಷೇಧ ಹೇರಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲ್ಲೋಟ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಜೈನ ಧರ್ಮ ಅಹಿಂಸೆ ಪ್ರತಿಪಾದಿಸುತ್ತದೆ. ಇನ್ನೊಬ್ಬರಿಗೆ ಹಿಂಸೆ ಮಾಡಬಾರದು. ಆದರೆ ಕ್ಷೇತ್ರದ ಸುತ್ತಲು ಮಾಂಸದಂಗಡಿ ಹಾಗೂ ಮದ್ಯದ ಅಂಗಡಿಗಳು ಹೆಚ್ಚಿವೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಸರ್ಕಾರದ ಜೊತೆ ಮಾತನಾಡುವಂತೆ ಸಚಿವ ಡಿ. ಸುಧಾಕರ್ ಅವರಿಗೂ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಶ್ರವಣಬೆಳಗೊಳ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದ್ದು, ಇಲ್ಲಿ ಮಾಂಸ ಮಾರಾಟದ ಅಂಗಡಿಗಳಿಗೆ ನಿಷೇಧ ಹೇರಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲ್ಲೋಟ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ತಾಲೂಕಿನ ಶ್ರವಣಬೆಳಗೊಳದ ಜೈನಮಠದ ಚಾವುಂಡರಾಯ ಸಭಾ ಮಂಟಪದಲ್ಲಿ ಶ್ರೀಜೈನ ಮಠದ ಆಡಳಿತ ಮಂಡಳಿ ಗುರುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರರ 2624 ನೇ ಜನ್ಮ ಕಲ್ಯಾಣೋತ್ಸವದಲ್ಲಿ ತೀರ್ಥಂಕರರಿಗೆ ಅರ್ಘ್ಯ ಪುಷ್ಪಾರ್ಚನೆ ಸಮರ್ಪಿಸುವುದರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಜೈನ ಧರ್ಮ ಅಹಿಂಸೆ ಪ್ರತಿಪಾದಿಸುತ್ತದೆ. ಇನ್ನೊಬ್ಬರಿಗೆ ಹಿಂಸೆ ಮಾಡಬಾರದು. ಆದರೆ ಕ್ಷೇತ್ರದ ಸುತ್ತಲು ಮಾಂಸದಂಗಡಿ ಹಾಗೂ ಮದ್ಯದ ಅಂಗಡಿಗಳು ಹೆಚ್ಚಿವೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಸರ್ಕಾರದ ಜೊತೆ ಮಾತನಾಡುವಂತೆ ಸಚಿವ ಡಿ. ಸುಧಾಕರ್ ಅವರಿಗೂ ಸೂಚಿಸಿದರು.

ಶಾಖಾಹಾರವನ್ನೇ ನೀಡುತ್ತೇವೆ:

ಆಹಾರ ಪದಾರ್ಥದಲ್ಲಿ ನಾವು ಕಟ್ಟುನಿಟ್ಟು ಪಾಲಿಸುತ್ತೇವೆ. ಸನಾತನ ಧರ್ಮಕ್ಕೂ ಜೈನ ಧರ್ಮಕ್ಕೂ ಆಹಾರದಲ್ಲಿ ಸಾಮ್ಯತೆ ಇದೆ. ನಾವು ರಾಜಭವನಕ್ಕೆ ಯಾರೇ ಬಂದರು ಶಾಖಾಹಾರವನ್ನೇ ನೀಡುತ್ತೇವೆ. ರಾಜಭವನದಲ್ಲಿ ಮಾಂಸಾಹಾರ ಸಂಪೂರ್ಣ ನಿಷೇಧಿಸಲಾಗಿದೆ ಎಂದರು. ಇದೇ ವೇಳೆ ತಮ್ಮ ಇಬ್ಬರು ಮೊಮ್ಮಕ್ಕಳಿಗೆ ಜೈನ ಧರ್ಮದ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಳ್ಳಲಾಗಿದೆ ಎಂದು ಕೂಡ ಹೇಳಿದರು.

ಮಹಾವೀರರ ವಾಣಿ ಪ್ರಸ್ತುತ:

ಜಗತ್ತಿನಲ್ಲಿ ಅಶಾಂತಿಯ ವಾತಾವರಣ ಎಲ್ಲೆಡೆ ನಿರ್ಮಾಣವಾಗಿದ್ದು, ಕ್ರೋಧಾದಿ ಹಿಂಸೆಗಳು ಸಮಾಜಗಳಲ್ಲಿ ಭುಗಿಲೆದ್ದಿರುವುದರಿಂದ ಶಾಂತಿಯ ಸಂದೇಶದ ಅಗತ್ಯತೆಯನ್ನು ಬಣ್ಣಿಸಿದರು. ಜೈನ ಧರ್ಮವು ಪ್ರಾಚೀನ ಕಾಲದಿಂದಲೂ ಸಹ ಕ್ಷಮಾಧರ್ಮ ಮಾರ್ಗದಲ್ಲಿ ಸಾಗಿದ್ದು, ಸಹಬಾಳ್ವೆಯಂತೆ ಎಲ್ಲರೊಂದಿಗೂ ಬದುಕು, ಬದುಕಲು ಬಿಡು ಎಂಬ ಮಹಾವೀರರ ವಾಣಿ ಪ್ರಸ್ತುತ ಅಗತ್ಯವಾಗಿದೆ. ಕ್ಷೇತ್ರದ ಮನವಿಗೆ ಸ್ಪಂದಿಸಿದ ರಾಜ್ಯಪಾಲರು ಶ್ರವಣಬೆಳಗೊಳ ಸುತ್ತಮುತ್ತ ಅನೇಕ ಮಾಸದ ಅಂಗಡಿಗಳು ಎಗ್ಗಿಲ್ಲದೇ ತೆರೆದಿದ್ದು, ತ್ಯಾಗಿಗಳ ಸಸ್ಯಹಾರಿಗಳ ಮನಸ್ಸಿಗೆ ತುಂಬಾ ನೋವಾಗಿರುವುದರ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.

ಮಹಾವೀರ ಜಯಂತಿಯ ಪ್ರಯುಕ್ತ ಬುಧವಾರ ವಿಶ್ವ ನಮೋಕಾರ ಮಹಾಮಂತ್ರ ದಿನವನ್ನು ಆಚರಿಸಿದ್ದು, ಆ ಮಹಾಮಂತ್ರದಲ್ಲಿ ಯಾವುದೇ ವ್ಯಕ್ತಿಯ ಪ್ರಶಂಸೆ ಮಾಡದೇ ಗುಣದ ಪ್ರಶಂಸೆ ಮಾಡಿದ್ದು, ಅದನ್ನು ನಾನು ಪ್ರತಿನಿತ್ಯ ಜಪಿಸುತ್ತಿದ್ದೇನೆ ಹಾಗೂ ಪ್ರತಿಯೊಬ್ಬರೂ ವ್ಯಸನ ಮುಕ್ತ ಮತ್ತು ಶಾಖಾಹಾರಿಗಳಾಗಬೇಕು ಎಂದರು.

ಸಾನಿಧ್ಯ ವಹಿಸಿದ್ದ ಕ್ಷೇತ್ರದ ಶ್ರೀಗಳು ಮಾತನಾಡಿ, ಜೈನ ಧರ್ಮದ ಸ್ಥಾಪಕ 24ನೇ ತೀರ್ಥಂಕರ ಮಹಾವೀರನೆಂದು ಉಲ್ಲೇಖಿಸುತ್ತಿರುವುದು ತಪ್ಪು ಎಂದು ಸ್ಪಷ್ಟನೆ ಕೊಡುತ್ತಾ ಜೈನ ಧರ್ಮದ ರಥವನ್ನು ಎಳೆಯುತ್ತಾ ದೇಶವ್ಯಾಪ್ತಿ ಹೆಚ್ಚಾಗಿ ಪ್ರಚಾರ ಮಾಡಿದರು. ಪ್ರತಿಯೊಂದು ಧರ್ಮದ ಮೂಲ ಉದ್ದೇಶ ಮೋಕ್ಷ ಪಡೆಯುವುದಾಗಿದ್ದು, ಮನ ವಚನ ಕಾಯಗಳಿಂದ ಯಾರಿಗೂ ಹಿಂಸೆ ಮಾಡದೇ ಇರುವುದು ಅಹಿಂಸೆ ಎಂದರು. ಇಂದು ಎಲ್ಲಾ ದೇಶಗಳಲ್ಲಿ ಅಣ್ವಸ್ತ್ರಗಳನ್ನು ಬಳಸಲು ಇಟ್ಟುಕೊಂಡಿದ್ದರೆ ಭಾರತದಲ್ಲಿ ಇಡೀ ವಿಶ್ವಕ್ಕೆ ಶಾಂತಿಯನ್ನು ಸ್ಥಾಪಿಸುವ ಅಹಿಂಸೆ ಅನೇಕಾಂತವಾದ ಎಂಬ ಅಸ್ತ್ರವನ್ನು ಹೊಂದಿದೆ. ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲು ಜೈನ ಧರ್ಮದ ಅಹಿಂಸೆ ಮತ್ತು ಅನೇಕಾಂತವಾದ ಪಾಲನೆಯಿಂದ ಸಾಧ್ಯ ಎಂದರು.

ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಶಾಸಕ ಸಿ.ಎನ್.ಬಾಲಕೃಷ್ಣ, ಕ್ಷೇತ್ರದ ಪ್ರಸಾದ ಭವನಕ್ಕೆ ಕೇಂದ್ರದ ಬಳಿ ಸಹಕಾರಕ್ಕೆ ಸಚಿವರಲ್ಲಿ ಪ್ರಸ್ತಾಪಿಸಿದ್ದೇನೆ ಎಂದರು. ಇದರ ಬಗ್ಗೆ ಎಚ್.ಡಿ.ದೇವೇಗೌಡರು ಸಹ ಕೇಂದ್ರದ ಸಚಿವರಲ್ಲಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಒತ್ತಾಯಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಜೈನ ಕವಿಗಳಾದ ಪಂಪ, ರನ್ನ, ಪೊನ್ನ, ಜನ್ನ, ಶ್ರೀವಿಜಯ, ನಾಗಚಂದ್ರ, ನಯಸೇನ, ರತ್ನಾಕರವರ್ಣಿ ಮೊದಲಾದ ಕವಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯಪಾಲರಿಗೆ ಕ್ಷೇತ್ರದ ವತಿಯಿಂದ ಶ್ರೀಗಳು ರಜತದ ಮಂಗಲ ಕಲಶ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮಕ್ಕೂ ಮೊದಲು ಭಗವಾನ್ ಮಹಾವೀರ ಜನ್ಮ ಕಲ್ಯಾಣದ ಪ್ರಯುಕ್ತ ಪುಷ್ಪಾಲಂಕಾರ ಮಾಡಿದ ರಜತದ ಪಲ್ಲಕ್ಕಿಯಲ್ಲಿ ಜಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಈ ಅದ್ಧೂರಿಯ ಶೋಭಾಯಾತ್ರೆಯಲ್ಲಿ ಮೈಸೂರು ಬ್ಯಾಂಡ್ ವಾದನ, ವಿವಿಧ ಮಂಗಳವಾದ್ಯಗಳು, ಜುಂಜುಂ ಪಥಕ, ಚಂಡೇ ವಾದ್ಯಗಳು, ಧರ್ಮಧ್ವಜ ಹಿಡಿದ ಬಾಲಕ ಬಾಲಕಿಯರು ಶ್ರಾವಕ ಶ್ರಾವಕಿಯರು ಇದ್ದರು. ನಂತರ ವೇದಿಕೆಯಲ್ಲಿ ಭಗವಾನ್ ಮಹಾವೀರ ಸ್ವಾಮಿಗೆ ಜಲ ಗಂಧಾಭಿಷೇಕ ನೆರವೇರಿಸಿ ಪುಷ್ಪವೃಷ್ಠಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಸಚಿವ ಡಿ.ಸುಧಾಕರ್, ಮಾಜಿ ಶಾಸಕ ಎಂ.ಎ.ಗೋಪಾಲಸ್ವಾಮಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಜಿಲ್ಲಾಧಿಕಾರಿ ಸತ್ಯಭಾಮ, ಸಿಇಒ ಪೂರ್ಣಿಮಾ, ಎಸ್.ಪಿ.ಮಹಮದ್ ಸುಜಿತ ಇದ್ದರು.

Share this article