ಅನ್ನ, ಉದ್ಯೋಗ ನೀಡುವ ತಾಯಿಯಾದ ಬೆಂಗಳೂರು

KannadaprabhaNewsNetwork |  
Published : Jun 28, 2025, 12:18 AM IST
ಸಿಕೆಬಿ-2 ತಾಲ್ಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ  ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ, ಶಾಂತ ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ದಿನ ಮತ್ತು ಸಂಸದ ಡಾ.ಕೆ.ಸುಧಾಕರ್ ಜನ್ಮದಿನಾಚರಣೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು | Kannada Prabha

ಸಾರಾಂಶ

ಜಗತ್ತಿನಲ್ಲಿ ಅತ್ಯಂತ ವಿಸ್ತಾರವಾಗಿ ಮತ್ತು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ನಿರ್ಮಾಣಕ್ಕೆ ಹಸ್ತಿಬಾರಹಾಕಿದ್ದೇ ನಾಡಪ್ರಭು ಕೆಂಪೇಗೌಡರು. ದೂರದೃಷ್ಟಿಯಿಂದ ಒಂದು ಸಮಾಜ ಮತ್ತು ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಜಾತಿಯ ಅಂಶಗಳನ್ನು ಪರಿಗಣಿಸಿ ವೃತ್ತಿ ಆಧಾರಿತ ಮಾರುಕಟ್ಟೆ ನಿರ್ಮಿಸಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಿಕ್ಷಣ, ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಬೆಂಗಳೂರು, ದೇಶ ವಿದೇಶಗಳ ಕಂಪನಿಗಳ ಹಾಗೂ ಉದ್ಯಮದಾರರಿಗೆ ಆಕರ್ಷಕ ಕೇಂದ್ರವಾಗಿರುವಂತೆ ಹಲವು ದೇಶಗಳ ಶ್ರಮಜೀವಿಗಳಿಗೆ ಉದ್ಯೋಗ, ಅನ್ನ ನೀಡುವ ತಾಯಿಯಾಗಿದೆ. ಇಂತಹ ನಗರ ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ, ಶಾಂತ ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ದಿನ ಹಾಗೂ ತಮ್ಮ ಜನ್ಮದಿನದ ಪ್ರಯುಕ್ತ ಸಂಸದರು ಕೇಕ್ ಕತ್ತರಿಸಿ ಮಾತನಾಡಿದರು. ವೃತ್ತಿ ಆಧರಿತ ಮಾರುಕಟ್ಟೆ

ಜಗತ್ತಿನಲ್ಲಿ ಅತ್ಯಂತ ವಿಸ್ತಾರವಾಗಿ ಮತ್ತು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ನಿರ್ಮಾಣಕ್ಕೆ ಹಸ್ತಿಬಾರಹಾಕಿದ್ದೇ ನಾಡಪ್ರಭು ಕೆಂಪೇಗೌಡರು. ದೂರದೃಷ್ಟಿಯಿಂದ ಒಂದು ಸಮಾಜ ಮತ್ತು ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಜಾತಿಯ ಅಂಶಗಳನ್ನು ಪರಿಗಣಿಸಿ ಜಾತ್ಯತೀತ ಸಂವೇದನೆಯಿಂದ ಕುಲಕಸುಬುಗಳನ್ನು ಮಾಡುತ್ತಿದ್ದ ಹಲವು ಜಾತಿಯ ಜನರಿಗೆ ಅಗತ್ಯವಾಗುವ ವೃತ್ತಿ ಆಧಾರಿತ ಮಾರುಕಟ್ಟೆ ಮತ್ತು ಪೇಟೆಗಳನ್ನು ನಿರ್ಮಿಸಿದ್ದಾರೆ ಎಂದರು.

ಹಿಂದುಳಿದ ಜನ ಜಾತಿ ತಮ್ಮ ಕುಲ ಕಸುಬುಗಳನ್ನು ರೂಡಿಸಿಕೊಂಡು ಬಂದಿದ್ದ ಆ ಸಮಾಜದ ಜನತೆ ಮೇಲುಕೀಳು ಎಂದು ಭಾವಿಸದೆ ಸಾಮಾಜಿಕ ನ್ಯಾಯದ ಬೆಳಕಿನಲ್ಲಿ ಸಮನ್ವಯದಿಂದ ಬದುಕುವ ಧ್ಯೇಯಕ್ಕೆ ಕೆಂಪೇಗೌಡರ ದೂರ ದೃಷ್ಟಿ ಕಾರಣವಾಗಿತ್ತು. ಕೃಷಿ ಮತ್ತು ಕೃಷಿಕರಿಗೆ ವಿಶೇಷ ಆದ್ಯತೆ ನೀಡಿದ್ದ ಕೆಂಪೇಗೌಡರು ಕೃಷಿಗೆ ಜಾನುವಾರ ಗಳಿಗೆ ಮತ್ತು ನಿತ್ಯ ಜೀವನಕ್ಕೆ ಪ್ರತಿಯೊಬ್ಬರಿಗೂ ಉತ್ತಮ ನೀರನ್ನು ಒದಗಿಸಬೇಕೆಂಬ ದೃಷ್ಟಿಯಿಂದ ಬೆಂಗಳೂರಿನಲ್ಲಿ ನೂರಾರು ಕೆರೆಗಳನ್ನು ನಿರ್ಮಿಸಿದ್ದರು ಎಂದರು.

ಮಿತಿ ದಾಟಿದ ಪರಿಣಾಮ

. ಬೆಂಗಳೂರು ಮುಂದೊಂದು ದಿನ ವಿಸ್ತಾರವಾಗಿ ಬೆಳೆಯುತ್ತದೆ ಎಂಬುದನ್ನು ಅರಿತಿದ್ದ ಕೆಂಪೇಗೌಡರು ನಗರದ ವಿಸ್ತರಣೆಗೆ ಮಿತಿಯನ್ನು ಹಾಕಿದ್ದರು. ಆದರೆ ಈಗ ಅದನ್ನು ಲೆಕ್ಕಿಸದೆ ನೂರಾರು ಕೆರೆಗಳನ್ನು ಹಾಗೂ ರಾಜಕಾಲುವೆಗಳನ್ನು ಮುಚ್ಚಿ ವಸತಿ ಮತ್ತು ಕೈಗಾರಿಕೆಗಳನ್ನು ನಡೆಸಲು ಹೊರಟಾಗ ಬೆಂಗಳೂರಿನ ಬಡ ಜನತೆ, ಮಳೆಗಾಲದಲ್ಲಿ ಸಂಕಷ್ಟಗಳಿಗೆ ಸಿಲುಕುವಂತಾಗಿದೆ ಎಂದು ಹೇಳಿದರು. ಸಂಸದ ಡಾ.ಸುಧಾಕರ್‌ ಜನ್ಮದಿನ

ಇಂದು ನಾಡಪ್ರಭು ಕೆಂಪೇಗೌಡರ ಜನ್ಮದಿನವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನನ್ನ ಪುಣ್ಯ ಅದೇ ದಿನದಲ್ಲಿ ನಾನು ಕೂಡ ಜನಿಸಿದ್ದೇನೆ. ನನಗೆ ನನ್ನ ಜನ್ಮದಿನವನ್ನು ಆಚರಿಸಿಕೊಳ್ಳುವುದಕ್ಕಿಂತ ಮುಖ್ಯವಾಗಿ ನಾಡು ಕಟ್ಟಿದ ಆ ಮಹನೀಯನ ಜನ್ಮದಿನ ಮತ್ತು ಅವರ ಆಲೋಚನೆಗಳನ್ನು ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು ಪಾಲಿಸುವುದು ಮುಖ್ಯವೆನಿಸುತ್ತದೆ. ಇಂದು ಶಾಂತ ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಕೂಡ ಆಚರಿಸಲಾಗುತ್ತಿದೆ. ಇದರ ಸಂಸ್ಥಾಪಕರು ನಮ್ಮ ಪೂಜ್ಯ ತಾಯಿ ಮತ್ತು ಪೂಜ್ಯ ತಂದೆಯವರ ಪ್ರೀತಿ ವಾತ್ಸಲ್ಯಗಳಿಂದ ನಾನು ಇಲ್ಲಿಯವರೆಗೆ ಬೆಳೆದಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಶಾಂತ ಶಿಕ್ಷಣ ಸಂಸ್ಥೆಗಳ ಧರ್ಮದರ್ಶಿ ಪಿ.ಎನ್. ಕೇಶವರೆಡ್ಡಿ, ನಿರ್ದೇಶಕ ಡಾ.ಕೋಡಿ ರಂಗಪ್ಪ, ಡೀನ್ ಹಾಗೂ ಪ್ರಾಂಶುಪಾಲ ಡಾ.ನವೀನ್ ಸೈಮನ್, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಗೋಪಿನಾಥ್, ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ನರೇಶ್, ನರ್ಸಿಂಗ್ ಸಂಸ್ಥೆಯ ಮುಖ್ಯಸ್ಥರಾದ ಡಾ. ಡಯಾನ, ಶಾಂತ ವಿದ್ಯಾನಿಕೇತನ್ ಪ್ರಾಂಶುಪಾಲ ಡಾ .ಪ್ರಸಾದ್, ಡಾ . ರಂಜಿತ್, ಡಾ. ಆಯುಷ ಭಟ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ
ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ